ವೀರಾಜಪೇಟೆ, ಡಿ.2: ವೀರಾಜಪೇಟೆ ತಾಲೂಕಿನ ಬೆಳ್ಳರಿಮಾಡುವಿನಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡವ ಆಟ್‍ಪಾಟ್ ಪಡಿಪು ಉದ್ಘಾಟನೆ ಗುರುವಾರ ಸಂಜೆ ನೆರವೇರಿತು. ಪಡಿಪು ಕಾರ್ಯಕ್ರಮ ವನ್ನು ಸ್ಥಳೀಯ ಹಿರಿಯರಾದ ಬಿದ್ದಂಡ ಸುಬ್ಬಯ್ಯ ಹಾಗೂ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ಎಸ್ ತಮ್ಮಯ್ಯ ದೀಪ ಬೆಳಗುವದರ ಮೂಲಕ ಉದ್ಘಾಟಿಸಿದರು.

ಪ್ರಾಸ್ತಾವಿಕ ಮಾತನಾಡಿದ ಬಿದ್ದಂಡ ಸುಬ್ಬಯ್ಯ ಅವರು ಕೊಡವರ ಆಚಾರ-ವಿಚಾರ, ಸಂಪ್ರದಾಯಗಳು ಜಗತ್ತಿನಲ್ಲಿ ವಿಶಿಷ್ಟವಾಗಿದ್ದು ಅವುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಬೇಕಾಗಿದೆ. ಕೊಡವ ಯುವ ಜನಾಂಗ ಕೂಡ ಸಕ್ರಿಯವಾಗಿ ತೊಡಗಿಸಿ ಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಇಂತಹ ಪಡಿಪು ಕಾರ್ಯಕ್ರಮಗಳಿಗೆ ಉತ್ತೇಜನ ನೀಡುತ್ತಿರುವದು ಶ್ಲಾಘÀನೀಯ ಎಂದರು.

ಅಕಾಡೆಮಿಯ ಅಧ್ಯಕ್ಷ ಬಿದ್ದಾಟಂಡ ಎಸ್ ತಮ್ಮಯ್ಯ ಅವರು ಮಾತನಾಡಿ ಕೊಡಗಿನ ಜಾನಪದ ಕಲೆಗಳನ್ನು ಆಚಾರ-ವಿಚಾರ, ಸಂಪ್ರದಾಯಗಳ ವಿಷಯದಲ್ಲಿ ಪ್ರತಿಯೊಬ್ಬರು ಆಸಕ್ತಿ ವಹಿಸಬೇಕಾಗಿದೆ. ಇಂಥವುಗಳ ಮೂಲ ಸ್ಥಾನವಾಗಿರುವ ಜಿಲ್ಲೆಯ ಪ್ರತಿ ಊರು ನಾಡುಗಳಲ್ಲಿರುವ ಮಂದ್‍ಗಳನ್ನು ಜೀವಂತವಾಗಿಡಬೇಕಾದ ಅನಿವಾರ್ಯತೆ ಇದೆ. ಇಲ್ಲಿಯೂ ಕೂಡ ಸುಮಾರು 40 ವರ್ಷಗಳ ಹಿಂದೆ ಮುಚ್ಚಿಹೋಗಿರುವ ಬೆಳ್ಳರಿಮಾಡು ಕೋಲ್‍ಮಂದ್ ಅನ್ನು ಆಟ್‍ಪಾಟ್ ಕಲಿತು ಹುತ್ತರಿ ಹಬ್ಬದ ಸಂಭ್ರಮದ ಸಂಧರ್ಭದಲ್ಲಿ ತೆರೆಯುವಂತೆ ಹಾಗೂ ಇದಕ್ಕೆ ಅಕಾಡೆಮಿ ಸಂಪೂರ್ಣ ಸಹಕಾರ ನೀಡುವದಾಗಿ ತಿಳಿಸಿದರು. ಪುಟ್ಟಿಚಂಡ ಮುದ್ದಪ್ಪ ಪ್ರಾರ್ಥಿಸಿ-ವಂದಿಸಿದರು. ಅಕಾಡೆಮಿಯ ಸದಸ್ಯರಾದ ಮಾದೇಟಿರ ಬೆಳ್ಯಪ್ಪ, ಊರಿನ ಹಿರಿಯರು, ತರಬೇತುದಾರರಾದ ಮುಂಡಚಾಡಿರ ರಿನಿ, ಸಾಕ್ಷಿ ಸೇರಿದಂತೆ ಊರಿನವರು ಪಾಲ್ಗೊಂಡಿದ್ದರು.