ಭಾಗಮಂಡಲ, ನ. 23: ನಿನ್ನೆ ತಾನೇ ಇಲ್ಲಿಗೆ ಸನಿಹದ ತಾವೂರು ಹಾಗೂ ಚೆಟ್ಟಿಮಾನಿಯಲ್ಲಿ ಮಹಿಳೆಯರು ಹಾಗೂ ಮಕ್ಕಳು ಇರುವ ಮನೆಗಳ ಬಳಿ ಸುಳಿದಾಡಿ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿರುವ ಘಟನೆ ಎಲ್ಲರ ಮನೆ ಮಾತಾಗುವ ಮೊದಲೇ ಶಾಲಾ ಬಾಲಕನೋರ್ವನನ್ನು ಅಪಹರಿಸಲು ಯತ್ನಿಸಿದ ಘಟನೆ ತಾವೂರು ಗ್ರಾಮದಲ್ಲಿ ನಡೆದಿದೆ. ಅದೇ ವೇಳೆಗಾಗಲೇ ಚೆಟ್ಟಿಮಾನಿಯಲ್ಲಿ ಶಸ್ತ್ರಸಜ್ಜಿತ ತಂಡವೊಂಡು ಪತ್ತೆಯಾಗಿದ್ದು, ನಕ್ಸಲರು ನುಸುಳಿರುವ ಬಗ್ಗೆ ಸುಳಿವು ಲಭಿಸಿದೆ.

ಭಾಗಮಂಡಲ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ಕುಯ್ಯಮುಡಿ ರಮೇಶ್ ಅವರ ಮಗ ಲವಿನ್ ಎಂಬಾತ ಶಾಲೆ ಬಿಟ್ಟ ನಂತರ ತನ್ನ ಸ್ನೇಹಿತರೊಂದಿಗೆ ಮನೆಯತ್ತ ಹೆಜ್ಜೆ ಹಾಕಿದ್ದಾನೆ. ಈತನೊಂದಿಗೆ ಕೆಲ ದೂರ ಮಾತ್ರ ಸ್ನೇಹಿತರು ಇರುವದು. ನಂತರ ಈತ ಗದ್ದೆ ಬಯಲು ದಾಟಿ, 200 ಮೀ.ನಷ್ಟು ಕಾಡು, ಕಾಫಿ ತೋಟಗಳಿರುವ ಹಾದಿಯಲ್ಲಿ ಸಾಗಬೇಕು.

ಒಂಟಿಗನಾಗಿ ಸಾಗುತ್ತಿದ್ದಾಗ ಕಾಫಿ ತೋಟದಲ್ಲಿ ಅವಿತು ಕುಳಿತ್ತಿದ್ದ ಇಬ್ಬರು ಒಮ್ಮೆಲೆ ರಸ್ತೆಗೆ ಹಾರಿದ್ದಾರೆ. ಒಬ್ಬಾತ ಬಾಲಕನ ಶಾಲಾ ಚೀಲವನ್ನು ಹಿಡಿದಿದ್ದಾನೆ. ದಿಢೀರ್ ಧಾಳಿಯಿಂದ ಬೆದರಿ ಬೆಂಡಾದ ಲವಿನ್ ಜೋರಾಗಿ ಕಿರುಚಿಕೊಂಡು ಕೊಸರಾಡಿದಾಗ ಆತನ ಹೆಗಲಲಿದ್ದ ಬ್ಯಾಗ್ ಕಳಚಿಕೊಂಡಿದೆ. ಬದುಕಿದೆಯೂ ಬಡಜೀವ ಎಂದುಕೊಂಡು ಅಲ್ಲಿಂದ ಕಾಲ್ಕಿತ್ತ ಲವಿನ್ ಅನತಿ ದೂರದಲ್ಲಿರುವ ದೇವಂಗೋಡಿ ಬಾಬು ಅವರ ಮನೆಯ ಅಂಗಳಕ್ಕೆ ತಲಪುವಷ್ಟರಲ್ಲಿ ನಿತ್ರಾಣಗೊಂಡು ಅಲ್ಲೇ ಕುಸಿದಿದ್ದಾನೆ. ಆದರೂ ಕೀರಲು ಧ್ವನಿಯಲ್ಲಿ ‘ಮಾವ.., ಮಾವ..,’ ಎಂದು ಕೂಗಿದ್ದಾನೆ.

ಬಾಲಕನ ದನಿ ಕೇಳಿ ಹೊರಬಂದ ಬಾಬು ಅವರು ಮನೆಯವರು ವಿಚಾರಿಸಿದಾಗ ಲವಿನ್ ಘಟನೆ ಬಗ್ಗೆ ಹೇಳಿದ್ದಾನೆ. ಸ್ಥಳಕ್ಕೆ ಹೋಗಿ ನೋಡಿದಾಗ ಬ್ಯಾಗ್ ಹಾಗೂ ಪುಸ್ತಕಗಳು ಚೆಲ್ಲಾ-ಪಿಲ್ಲಿಯಾಗಿ ಬಿದ್ದಿರುವದು ಗೋಚರಿಸಿದೆ. ಪೊಲೀಸರು ಹಾಗೂ ಗ್ರಾಮಸ್ಥರಿಗೆ ಈ ಬಗ್ಗೆ ವಿಷಯ ತಿಳಿಸಲಾಗಿ, ಪೊಲೀಸರೊಂದಿಗೆ ಸುಮಾರು 150 ಮಂದಿ ಸೇರಿ ಕೋವಿಯೊಂದಿಗೆ ಕಾಡೆಲ್ಲ ಹುಡುಕಾಡಿದ್ದಾರೆ. ಆದರೆ ಆಗಂತುಕರ ಸುಳಿವು ಮಾತ್ರ ಸಿಕ್ಕಿಲ್ಲ.

ಬ್ಯಾಗ್ - ಹಗ್ಗ ಇದೆ

ಬಾಲಕ ಲವಿನ್ ಪೊಲೀಸರಿಗೆ ನೀಡಿರುವ ಮಾಹಿತಿಯಂತೆ ಇಬ್ಬರು ವ್ಯಕ್ತಿಗಳ ಪೈಕಿ ಓರ್ವ ನಿನ್ನೆ ರಾತ್ರಿ ಸುಳಿದಾಡಿದ ವ್ಯಕ್ತಿಯ ಹೋಲಿಕೆಗೆ ಸಮನಾಗಿದ್ದಾನೆ. ಬಿಳಿ ಅಂಗಿ, ಪಂಚೆ ಧರಿಸಿದ್ದಾನೆ. ಕೈಯಲ್ಲೊಂದು ಬ್ಯಾಗ್, ಇನ್ನೋರ್ವ ಜೀನ್ಸ್ ಪ್ಯಾಂಟ್ ಹಾಗೂ ಕಂದುಬಣ್ಣದ ಶರ್ಟ್ ಧರಿಸಿದ್ದು, ಆತನ ಬಳಿಯಲ್ಲೂ ಚೀಲ ಹಾಗೂ ಹಳದಿ ಬಣ್ಣದ ಹಗ್ಗವಿದೆ ಎಂದು ಹೇಳಿಕೆ ನೀಡಿದ್ದಾನೆ. ಘಟನೆಯಿಂದ ಗ್ರಾಮಸ್ಥರು, ಪೋಷಕರು ಭಯಭೀತರಾಗಿದ್ದು, ಹಗಲು - ರಾತ್ರಿ ಮಕ್ಕಳ ಪಹರೆ ಕಾಯುವಂತಾಗಿದೆ.

ನಕ್ಸಲರ ಸುಳಿವು

ಇತ್ತ ತಾವೂರಿನಲ್ಲಿ ಮಕ್ಕಳ ಅಪಹರಣಕಾರರನ್ನು ಹುಡುಕುತ್ತಿರುವಾಗಲೇ ಅತ್ತ ಚೆಟ್ಟಿಮಾನಿ ಕಡೆಯಿಂದ ಪೊಲೀಸರಿಗೆ ಕರೆ ಬರುತ್ತದೆ. ‘ಇಲ್ಲಿ ನಾಲ್ಕು ಮಂದಿ ಬಂದೂಕು ಸಹಿತ ಸುಳಿದಾಡುತ್ತಿದ್ದಾರೆ. ಆ ಪೈಕಿ ಮೂವರು ಗಂಡಸರು, ಓರ್ವ ಹೆಂಗಸು ಇದ್ದಾಳೆ. ಮುಸುಕು ಹಾಕಿಕೊಂಡಿದ್ದಾರೆ ’ ಎಂದು. ಆದರೆ, ಅದಾಗಲೇ ಠಾಣೆಯಲ್ಲಿದ್ದ ಪೊಲೀಸರೆಲ್ಲ ತಾವೂರು, ಅಯ್ಯಂಗೇರಿ, ಭಾಗಮಂಡಲ ಕಾಡಿನಲ್ಲಿ ಕಳ್ಳರ ಹುಡುಕಾಟದಲ್ಲಿದ್ದರಿಂದ ಚೆಟ್ಟಿಮಾನಿಗೆ ತೆರಳಲು ಸಾಧ್ಯವಾಗಿಲ್ಲ. ಆದರೂ ನಂತರದಲ್ಲಿ ಒಂದು ಪೊಲೀಸ್ ತಂಡವನ್ನು ಚೆಟ್ಟಿಮಾನಿಗೂ ಕಳುಹಿಸಲಾಗಿದೆ. ಅಲ್ಲಿಯೂ ಗ್ರಾಮಸ್ಥರ ಸಹಕಾರದೊಂದಿಗೆ ಹುಡುಕಾಟ ನಡೆಸಲಾಗಿದೆ.

ನಿನ್ನೆ ಕೂಡ ಸಂಜೆ ಕತ್ತಲಲ್ಲೇ ಅಪರಿಚಿತರ ಸುಳಿದಾಟ ಕಂಡು ಬಂದಿದ್ದು, ಇಂದೂ ಕೂಡ ಅದೇ ವೇಳೆಯಲ್ಲಿ ಎರಡೂ ಕಡೆಗಳಲ್ಲಿ ಘಟನೆ ನಡೆದಿದೆ.