ಸೋಮವಾರಪೇಟೆ, ನ. 23: ಸಾಲಬಾಧೆಯಿಂದ ರೈತರೋರ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಮೀಪದ ತಲ್ತರೆಶೆಟ್ಟಳ್ಳಿ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ.

ತಲ್ತರೆಶೆಟ್ಟಳ್ಳಿ ಕೃಷಿಕ ಕೆ.ಡಿ.ಈರಪ್ಪ(52) ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು. ಮಂಗಳವಾರ ಸಂಜೆ 7ಗಂಟೆಯ ಸುಮಾರಿಗೆ ತಮ್ಮ ಮನೆಯಲ್ಲಿ ವಿಷ ಸೇವಿಸಿ ಹಾಸಿಗೆಯಲ್ಲಿ ನರಳಾಡುತ್ತಿದ್ದ ಸಂದರ್ಭ, ಪತ್ನಿ ಇಂದಿರಾ ಗಮನಿಸಿ ಸ್ಥಳೀಯರ ಸಹಕಾರದಿಂದ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಥಮ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಸಾಗಿಸುವ ಸಂದರ್ಭ ರಾತ್ರಿ 9 ಗಂಟೆಯ ಸುಮಾರಿಗೆ ರೈತ ಮೃತಪಟ್ಟಿದ್ದಾರೆ.

ಸೋಮವಾರಪೇಟೆ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಮಹಿಳಾ ಸಹಕಾರ ಸಂಘದಲ್ಲಿ ಪತಿ ಹಾಗೂ ನನ್ನ ಹೆಸರಿನಲ್ಲಿ 3 ಲಕ್ಷ ರೂ.ಗಳಷ್ಟು ಸಾಲ ಮಾಡಿದ್ದು, ಸಾಲ ಮರುಪಾವತಿಸಲು ಸಾಧ್ಯವಾಗದೆ ದಿನಂಪ್ರತಿ ಸಾಲದ ಬಗ್ಗೆಯೇ ಹೇಳುತ್ತಿದ್ದರು. ಈ ವರ್ಷ ಮಳೆಯಾಗದೆ, ಒಂದು ಎಕರೆ ಗದ್ದೆಯಲ್ಲಿ ನೀರಿಲ್ಲದೆ ಭತ್ತದ ಪೈರು ಒಣಗಿದೆ. ಒಂದು ಎಕರೆ ಕಾಫಿ ತೋಟದಲ್ಲಿದ್ದ ಕಾಳುಮೆಣಸು ಬಳ್ಳಿಗಳು ಒಣಗುತ್ತಿರುವದರಿಂದ ಫಸಲು ಇಲ್ಲದೆ ಸಾಲ ತೀರಿಸುವದು ಹೇಗೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದರು. ತನ್ನ ಪತಿ ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಪತ್ನಿ ಇಂದಿರಾ ಹೇಳಿದ್ದಾರೆ.

ಈ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತರು ಪತ್ನಿ ಸೇರಿದಂತೆ ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.