ಬೆಂಗಳೂರು/ಚೆಟ್ಟಳ್ಳಿ, ಜು. 25: ಕೊಡಗಿನ ಮೂಲ ಸಂಸ್ಕøತಿಯು ಉಳಿಯ ಬೇಕೆಂದರೆ ಪುತ್ತರಿ, ಕೈಲ್‍ಪೊಳ್ದ್, ಚಂಗ್ರಾದಿಯನ್ನು ತನ್ನ ತಾಯಿನಾಡಿಗೆ ಬಂದು ಅಚರಿಸಬೇಕೆಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಹೇಳಿದರು.

ಬೆಂಗಳೂರಿನ ಕೊಡವ ಸಮಾಜದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಭವನದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಬೆಂಗಳೂರು ಏಳ್‍ನಾಡ್ ಕೊಡವ ಸಂಘದ ಆಶ್ರಯದಲ್ಲಿ ನಡೆದ ಕೊಡವ ಸಾಹಿತ್ಯ ಸಂಸ್ಕøತಿ ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕೊಡವ ಸಂಸ್ಕøತಿಯನ್ನು ಉಳಿಸಲು ಎಲ್ಲರೂ ಪಣ ತೊಡಬೇಕು. ಕೊಡವ ಸಾಹಿತ್ಯ ಅಕಾಡೆಮಿ ಸಂಸ್ಕøತಿಯ ಉಳಿವಿಗಾಗಿ ಹಲವು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಮುಂದಿನ ಕೆಲವು ದಿನಗಳಲ್ಲಿ ನಾಪೋಕ್ಲುವಿನಲ್ಲಿ ಬೇಲ್ ನಮ್ಮೆಯನ್ನು ಆಚರಿಸುವ ಮೂಲಕ ಕೊಡಗಿನ ಆಚಾರದ ಒಂದು ಭಾಗವಾದ ಭತ್ತದ ಬೆಳೆಯನ್ನು ಬೆಳೆಸಲು ಒತ್ತು ನೀಡಲು ಪ್ರೇರೇಪಿಸುವದೇ ಇದರ ಉದ್ದೇಶ ವೆಂದರು. ಸೂರ್ಲಬ್ಬಿ ನಾಡಿನಲ್ಲಿ ಈಗಲೂ ಕೊಡಗಿನ ಮೂಲ ಸಂಸ್ಕøತಿ ಅಡಗಿದೆ. ಅಲ್ಲಿ ಹಲವು ಕಾರ್ಯ ಕ್ರಮವನ್ನು ಹಮ್ಮಿಕೊಳ್ಳುವದರ ಮೂಲಕ ಅಕಾಡೆಮಿ ಸಹಕಾರ ನೀಡುತ್ತಿದೆ ಎಂದರು.

ಏಳ್‍ನಾಡ್ ಕೊಡವ ಸಂಘದವರು ತಳಿಯಕ್ಕಿ ದೀಪ ಹಾಗೂ ದುಡಿಕೊಟ್ಟ್ ಹಾಡಿನೊಂದಿಗೆ ಅತಿಥಿಗಳನ್ನು ವೇದಿಕೆಗೆ ಕರೆತಂದರು. ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಉದ್ಘಾಟಿಸಿದರು. ಸನ್ಮಾನ ಸ್ವೀಕರಿಸಿ ವೀಣಾ ಅಚ್ಚಯ್ಯ ಅವರು ಮಾತನಾಡಿ, ಕೊಡಗಿನಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿ ಕೊಡವ ಸಂಸ್ಕøತಿಯನ್ನು ಇಲ್ಲಿಯೂ ಉಳಿಸಿ ಬೆಳೆಸುವ ತಮ್ಮೆಲ್ಲರ ಶ್ರಮ ಹೆಮ್ಮೆ ಎನಿಸುತ್ತಿದೆಂದರು. ಎಲ್ಲೇ ಇದ್ದರೂ ಕೊಡಗಿನ ಆಸ್ತಿಯನ್ನು ಮಾರಬೇಡಿ, ಕೊಡಗಿನ ಸಂಸ್ಕøತಿಯನ್ನು ಮಕ್ಕಳಿಗೂ ಕಲಿಸಿ, ಕೊಡವಾಮೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಕಿವಿಮಾತು ಹೇಳಿದರು.

ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ನಿರ್ದೇಶಕ ನಾಪಂಡ ಮುತ್ತಪ್ಪ ಅವರು ಸನ್ಮಾನಿಸಿ ಮಾತನಾಡಿ, ಹಿಂದೆಲ್ಲ ನಾವು ಹಿಂದುಳಿದಿದ್ದೇವು. ಈಗ ಆರ್ಥಿಕ ವಾಗಿಯೂ ರಾಜಕೀಯವಾಗಿಯೂ ಮುಂದುವರೆದಿದ್ದರೂ ಕೊಡವ ಸಂಸ್ಕøತಿಯನ್ನು ಉಳಿಸಲು ಎಲ್ಲರ ಸಹಕಾರ ಅಗತ್ಯವೆಂದರು.

ಬೆಂಗಳೂರು ಏಳ್‍ನಾಡ್ ಕೊಡವ ಸಂಘದ ಅಧ್ಯಕ್ಷ ಓಡಿಯಂಡ ಎಸ್. ಚಂಗಪ್ಪ ಮಾತನಾಡಿದರು. ನಿವೃತ್ತ ಶಿಕ್ಷಕ ಡೋನ್ನಂಡ ಸೋಮಯ್ಯ ಏಳ್ ನಾಡ್‍ರ ನಮ್ಮೆನಾಳ್ ಆಚಾರ-ವಿಚಾರ, ಪದ್ಧತಿ-ಪರಂಪರೆಯ ಬಗ್ಗೆ ವಿಚಾರ ಮಂಡನೆ ಮಾಡಿದರು. ಕೊಡವ ಹಾಡುಗಾರ ಜಫ್ರಿ ಅಯ್ಯಪ್ಪ ಕುಂದ್‍ಲ್ ಕ್ಯಾಮ ಹಾಡನ್ನು ಹಾಡುವ ಮೂಲಕ ಮನರಂಜಿಸಿದರು. ಪಾಸುರ ಪಟ್ಟುದೇವಯ್ಯ ಪ್ರಾರ್ಥಿಸಿ, ಓಡಿಯಂಡ ಚಂಗಪ್ಪ ಸ್ವಾಗತಿಸಿದರು. ಸರ್ಕಂಡ ಸೋಮಯ್ಯ ವಂದಿಸಿದರು. ಮಾದೇಟಿರ ಬೆಳ್ಯಪ್ಪ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ಬೆಂಗಳೂರು ಏಳ್‍ನಾಡ್ ಕೊಡವ ಸಂಘ ಹಾಗೂ ಮೊರ್ಕಂಡ ಸುರೇಶ್ ತಂಡದಿಂದ ಬೊಳಕಾಟ್, ಉಮ್ಮತ್ತಾಟ್, ಕೋಲಾಟ್, ಸಂಬಂಧ ಅಡ್‍ಕ್‍ವ ಕಾರ್ಯಕ್ರಮ ನಡೆಯಿತು.