ಪವಿತ್ರ ‘ಜೀವನದಿ’ ಕಾವೇರಿ ಯನ್ನು ಶುಚಿಯಾಗಿರಿಸುವ ಉದ್ದೇಶದಿಂದ ಕಾವೇರಿ ನದಿ ಬಚಾವೋ ಆಂದೋಲನದ ಅಂಗವಾಗಿ ತಲಕಾವೇರಿಯಿಂದ ಪೂಂಪ್‍ಹಾರ್ ತನಕ ಸಾಧು ಸಂತರ ಪಾದಯಾತ್ರೆ ಆರಂಭಿಸ ಲಾಯಿತು. ಕಾವೇರಿ ತೀರದಲ್ಲಿ ಮರಗಳ ಹನನ, ಪರಿಸರ ಮಾಲಿನ್ಯ ಇತ್ಯಾದಿಗಳ ಕೆಡುಕಿನಿಂದ ಕಾವೇರಿ ಯನ್ನು ರಕ್ಷಿಸುವ ಸಲುವಾಗಿ ಆಂದೋಲನದ ಸಂದರ್ಭ ಜನ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭ ಜನ ಜಾಗೃತಿ ಮೂಡಿಸ ಲಾಯಿತು. ಈ ಸಂದರ್ಭ ಈವರೆಗಿನ ಪಾದಯಾತ್ರೆಯ ನಡುವೆ ಕಂಡು ಬಂದ ವಾಸ್ತವ ಚಿತ್ರಣದತ್ತ ಒಂದು ಇಣುಕು ನೋಟ ಇಲ್ಲಿದೆ.

ದಕ್ಷಿಣ ಭಾರತದ ಕೋಟ್ಯಾಂತರ ಜನ ಜಾನುವಾರು ಗಳಿಗೆ ಜೀವಜಲವಾಗಿರುವ ಕಾವೇರಿ ನದಿ, ಸಂಸ್ಕøತಿಯ ಉಗಮಸ್ಥಾನ ವಾಗುವದ ರೊಂದಿಗೆ ದೇವತೆಯ ಸ್ಥಾನ ಪಡೆದು ಪೂಜಿಸಲ್ಪಡುವ ನದಿಗಳಲ್ಲಿ ಒಂದಾಗಿದೆ. ಅರಣ್ಯನಾಶ ಹಾಗೂ ಹವಾಮಾನ ವೈಪರಿತ್ಯದಿಂದ ಒಂದೆಡೆ ಧರೆಯಲ್ಲಿ ಏರುಪೇರು ಉಂಟಾದರೆ ಇನ್ನೊಂದೆಡೆ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮ ಹೆಸರಿನಲ್ಲಿ ಕಾವೇರಿಯ ಉಪನದಿಗಳು ಬಹುತೇಕ ಮಾಯವಾಗುತ್ತಿವೆ.

ನದಿ ತಟದಲ್ಲಿರುವ ಧಾರ್ಮಿಕ ಕೇಂದ್ರಗಳ ತ್ಯಾಜ್ಯಗಳು ಕೂಡ ನೇರವಾಗಿ ನದಿ ಒಡಲು ಸೇರುತ್ತಿರು ವದು ಗಮನಾರ್ಹ ವಿಚಾರವಾಗಿದೆ. ಬಹುತೇಕ ಕಡೆ ನಿಸರ್ಗವನ್ನು ತಮ್ಮ ಬಯಕೆಗಳ ಈಡೇರಿಸಿಕೊಳ್ಳುವ ಸಂಪನ್ಮೂಲ ಎನ್ನುವಷ್ಟಕ್ಕೆ ಕಾವೇರಿ ನದಿಯನ್ನು ಸೀಮಿತಗೊಳಿಸಿರುವದು ಕಂಡುಬಂದಿದೆ. ಈ ಮೂಲಕ ನದಿಯ ಅಸ್ತಿತ್ವಕ್ಕೆ ಕೊಡಲಿಪೆಟ್ಟು ನೀಡುವಂತಾಗಿರುವ ವಿಷಯಗಳು ಗೋಚರಿಸಿವೆ.

ಕೊಡಗು ಜಿಲ್ಲೆಯ ಮಟ್ಟಿಗೆ ಹೇಳುವುದಾದರೆ ಮೂಲ ಕಾವೇರಿ ನದಿ ಹರಿಯುವ ಭಾಗಗಳಲ್ಲಿ ಹಲವೆಡೆ ಪ್ರವಾಸಿಗರ ಒತ್ತಡ ಅಧಿಕಗೊಳ್ಳುವದರೊಂದಿಗೆ ತ್ಯಾಜ್ಯಗಳ ವಿಲೇವಾರಿ ಸಮರ್ಪಕವಾಗದೆ ನೇರವಾಗಿ ನದಿ ಒಡಲು ಸೇರುತ್ತಿರುವದು ಸಾಮಾನ್ಯವಾಗಿದೆ. ಈ ಮೂಲಕ ಜನ ಜಾನುವಾರು, ಸಸ್ಯ ಸಂಕುಲಗಳಿಗೆ ಜೀವನಾಡಿ ಯಾಗಿರುವ ಸಪ್ತ ನದಿಗಳಲ್ಲಿ ಒಂದಾದ ಕಾವೇರಿ ನದಿ ತ್ಯಾಜ್ಯಗಳ ಡಂಪಿಂಗ್ ಯಾರ್ಡ್ ಆಗಿ ಪರಿವರ್ತನೆಗೊಳ್ಳುತ್ತಿದೆ ಎಂದರೆ ತಪ್ಪಾಗಲಾರದು.

ಈ ಎಲ್ಲಾ ಸ್ಥಿತಿಗತಿಗಳ ವಾಸ್ತವಾಂಶ ಅರಿತು ನದಿ ತಟಗಳ ಜನರ ಬವಣೆಯನ್ನು ದಾಖಲಿಸುವ ಉದ್ದೇಶದೊಂದಿಗೆ ಹೊರಟ ಅಖಿಲ ಭಾರತ ಸನ್ಯಾಸಿ ಸಂಘ ಮತ್ತು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ತಂಡಕ್ಕೆ ಎದುರಾಗಿದ್ದು ಬರಡಾಗುತ್ತಿರುವ ಕಾವೇರಿಯ ಸುಡು ವಾಸ್ತವಾಂಶ ಇಲ್ಲಿದೆ.

ಮೂಲ ಕಾವೇರಿಯಿಂದ 24 ಪಂಚಾಯ್ತಿ ದಾಟಿ ಜಿಲ್ಲೆಯ ಗಡಿ ಶಿರಂಗಾಲ ತನಕ ಎಲ್ಲಿ ನೋಡಿದರೂ ನದಿಯ ಸಂರಕ್ಷಣೆ ಬಗ್ಗೆ ಯಾರೂ ಗಮನಹರಿಸಿದಂತಿಲ್ಲ. ಪ್ರಮುಖವಾಗಿ ಭಾಗಮಂಡಲ, ಚೇರಂಬಾಣೆ, ನಾಪೋಕ್ಲು, ನೆಲ್ಲಿಹುದಿಕೇರಿ, ದುಬಾರೆ, ಕುಶಾಲನಗರ ವ್ಯಾಪ್ತಿಯಲ್ಲಿ ಅತಿಯಾದ ತ್ಯಾಜ್ಯಗಳು ನದಿ ಒಡಲನ್ನು ಸೇರುವದರೊಂದಿಗೆ ನದಿ ನೀರಿನ ಗುಣಮಟ್ಟ ವಿಷಕಾರಿಯಾಗು ವದು ಗಮನಾರ್ಹ ಅಂಶವಾಗಿದೆ. ಇನ್ನುಳಿದಂತೆ ಎಲ್ಲಾ ಗ್ರಾಮಗಳ ತ್ಯಾಜ್ಯಗಳು ನೇರವಾಗಿ ನದಿಗೆ ಹರಿಯುತ್ತಿರುವ ದೃಶ್ಯ ಗೋಚರಿಸು ತ್ತಿದೆ. ಕೊಟ್ಟಮುಡಿ, ನೆಲ್ಲಿಹುದಿಕೇರಿ, ಕುಶಾಲನಗರ, ಕೂಡಿಗೆ ವ್ಯಾಪ್ತಿಯಲ್ಲಿ ಮಾಂಸದ ತ್ಯಾಜ್ಯಗಳು ನೇರವಾಗಿ ನದಿಗೆ ಹರಿಸುವ ದೃಶ್ಯ ನಿರಂತರವಾಗಿ ನಡೆದು ಬರುತ್ತ್ತಿದೆ.

ಪ್ರವಾಸಿ ಕೇಂದ್ರಗಳಲ್ಲಿ ಮತ್ತು ನದಿ ತಟಗಳ ಹೋಂಸ್ಟೇಗಳಲ್ಲಿ ಶೌಚಗಳು ನೇರವಾಗಿ ನದಿ ಒಡಲು ಸೇರಿ ಜೀವಜಲ ಸಂಪೂರ್ಣ ಕಲ್ಮಶಗೊಳ್ಳುತ್ತಿದೆ. ಈ ನಡುವೆ ಭಾಗಮಂಡಲದಿಂದ ಜಿಲ್ಲೆಯ 24 ಪಂಚಾಯ್ತಿಗಳ ನದಿ ತಟಗಳಲ್ಲಿ ಯಥೇಚ್ಚ ಅಕ್ರಮ ಮರಳುಗಾರಿಕೆ ದಿನದ 24 ಗಂಟೆ ನಡೆಯುತ್ತಿರುವದು ಗೋಚರಿಸಿದೆ. ಮರಳಿನ ಅಭಾವ ಸೃಷ್ಠಿಸಿ ಈ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಈ ಬಗ್ಗೆ ನದಿಯ ಕಾವಲು ಕಾಯುವ ಆಡಳಿತ ವ್ಯವಸ್ಥೆ ಕೂಡ ಇದರಲ್ಲಿ ತನ್ನ ಹೆಚ್ಚಿನ ಪಾಲು ಪಡೆಯುತ್ತಿರುವ ಆರೋಪಗಳು ಕೇಳಿಬಂದಿವೆ.

ಮೂಲ ಕಾವೇರಿಯಿಂದಲೇ ನದಿ ತಟಗಳು ಸಂಪೂರ್ಣ ಪ್ರದೇಶ ಪ್ರವಾಸಿ ಕೇಂದ್ರವಾಗಿ ಪರಿವರ್ತನೆ ಯಾದಂತೆ ಕಂಡುಬರುತ್ತಿದ್ದು, ತಲಕಾವೇರಿಯಿಂದ ಭಾಗಮಂಡಲ ರಸ್ತೆಯುದ್ದಕ್ಕೂ ಅಡಿಗಡಿಗೆ ಒಂದರಂತೆ ಪ್ಲಾಸ್ಟಿಕ್ ಬಾಟಲಿಗಳು ರಾರಾಜಿಸುತ್ತಿರುವದು ನಿಜಕ್ಕೂ ದುರಂತ ಎನ್ನಬಹುದು. ಇಲ್ಲಿನ ಗ್ರಾಮಪಂಚಾಯ್ತಿ ಈ ಬಗ್ಗೆ ಎಷ್ಟೇ ಎಚ್ಚರವಹಿಸಿದರೂ ಶಾಶ್ವತ ಪರಿಹಾರ ಕಾಣಲು ಅಸಾಧ್ಯವಾಗಿದೆ ಎನ್ನುವದು ಭಾಗಮಂಡಲ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಅಳಲಾಗಿದೆ.

ಭಾಗಮಂಡಲದಿಂದ ಮುಂದೆ ಹರಿಯುವ ಕಾವೇರಿ ತಟದ ಜನತೆಯ ಗೋಳು ಇನ್ನೊಂದು ರೀತಿಯದ್ದಾಗಿದೆ. ನದಿಯ ಅಗಲ ಕಿರಿದಾಗುವದರೊಂದಿಗೆ ನೀರಿನ ಪ್ರಮಾಣ ಅಧಿಕಗೊಂಡು ಗ್ರಾಮ ಸಂಪೂರ್ಣ ಜಲಮಯವಾಗುವದು ಸಾಮಾನ್ಯ. ಈ ನಡುವೆ ಅಯ್ಯಂಗೇರಿ ಗ್ರಾಮ ವರ್ಷದ ಕೆಲವು ದಿನಗಳ ದ್ವೀಪವಾಗಿ ಪರಿವರ್ತನೆಗೊಳ್ಳುವದ ರೊಂದಿಗೆ ಇಡೀ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಳ್ಳುತ್ತಿರುವ ಬಗ್ಗೆ ಅಲ್ಲಿನ ನಾಗರಿಕರು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.

ಇತ್ತೀಚೆಗಷ್ಟೆ ಇದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿರುವದಾಗಿ ಸಣ್ಣ ಪುಲಿಕೋಟು ಗ್ರಾಮದ ಹಿರಿಯರಾದ ಕುಯ್ಯಮುಡಿ ಪಿ.ಶಿವಣ್ಣ ಮಾಹಿತಿ ನೀಡಿದ್ದಾರೆ.

ಕಳೆದ ಹಲವು ವರ್ಷಗಳಿಂದ ತಮ್ಮ ಗ್ರಾಮದ ಸಮಸ್ಯೆಗೆ ಶಾಶ್ವತ ಪರಿಹಾರ ಕಾಣುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎನ್ನುತ್ತಾರೆ ಅಯ್ಯಂಗೇರಿಯ ಕೆ.ಪಿ. ಇಸ್ಮಾಯಿಲ್ ಮತ್ತು ಬಿ.ಎ.ಅಬ್ದುಲ್ ರೆಹಮಾನ್.

ನದಿ ಮುಂದೆ ಸಾಗಿದಂತೆ ಶುದ್ಧವಾಗಿ ಹರಿಯುವ ಕಾವೇರಿ ತನ್ನ ಒಡಲಿಗೆ ಕಲ್ಮಶ ಸೇರಿಸಿಕೊಂಡು ಹರಿಯಬೇಕಾದ ದುಸ್ಥಿತಿಗೆ ಒಳಗಾಗುತ್ತಿರುವದು ಮೂಲ ಕಾವೇರಿಯಿಂದಲೇ ಸಾಗುತ್ತಿದ್ದರೂ ನೆಲ್ಲಿಹುದಿಕೇರಿ ವ್ಯಾಪ್ತಿಗೆ ಬಂದಾಗಲಂತೂ ಇದು ಅತಿಯಾಗಿ ಗೋಚರವಾಗುತ್ತಿದೆ. ಇಲ್ಲಿ ಮೀನು, ಕೋಳಿ, ದನದ ಮಾಂಸದ ತ್ಯಾಜ್ಯಗಳು ಯಥೇಚ್ಚವಾಗಿ ನದಿ ಒಡಲು ಸೇರುತ್ತಿದೆ. ಈ ಬಗ್ಗೆ ಅಲ್ಲಿನ ಜನಪ್ರತಿನಿಧಿಗಳು ಎಷ್ಟೇ ಎಚ್ಚರ ವಹಿಸಿದರೂ ಫಲಶೃತಿ ದೊರೆಯು ತ್ತಿಲ್ಲ ಎನ್ನುವದು ಆರೋಪ.

ದಿನದ 24 ಗಂಟೆಗಳ ಕಾಲ ನದಿಯಿಂದ ಮರಳು ಬಗೆದು ಸಾಗಾಟ ಮಾಡುತ್ತಿರುವದು ನಿತ್ಯ ಕಾಯಕವಾಗಿದೆ ಎನ್ನುತ್ತಾರೆ ಬಲಮುರಿ ಶ್ರೀ ಅಗಸ್ತ್ಯೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಕೆ. ಯು. ತಮ್ಮಯ್ಯ. ಇದಕ್ಕೆ ಕಡಿವಾಣ ಬೀಳದಿದ್ದಲ್ಲಿ ನದಿ ಬರಡಾಗುವದು ಖಚಿತ ಎನ್ನುವದು ಅವರ ಅಭಿಪ್ರಾಯ. ನವೆಂಬರ್ ತಿಂಗಳಿ ನಿಂದ ಜೂನ್ ತಿಂಗಳ ತನಕ ಕೊಟ್ಟಮುಡಿಯಿಂದ ಬೇತ್ರಿ ತನಕ ನದಿ ತಟದಲ್ಲಿ ಅವ್ಯಾಹತ ಮರಳುಗಾರಿಕೆ ಬಗ್ಗೆ ತಮ್ಮ ಅಹವಾಲನ್ನು ಅಲ್ಲಿನ ನಾಗರಿಕರು ನೀಡುವದರೊಂದಿಗೆ ಅಸಹಾಯಕತೆಯನ್ನು ತೋರ್ಪಡಿಸು ತ್ತಾರೆ.

ಇನ್ನೊಂದೆಡೆ ನಾಪೋಕ್ಲು ಸಮೀಪ ಕೊಟ್ಟಮುಡಿ ನದಿ ಸೇತುವೆಯಿಂದ ಸಂಪೂರ್ಣ ತ್ಯಾಜ್ಯಗಳನ್ನು ನದಿ ಒಡಲಿಗೆ ಸುರಿಯುವದು ಸಾಮಾನ್ಯ ವಿಷಯ ವಾಗಿದೆ. ಈ ಬಗ್ಗೆ ಯಾರೂ ಕೂಡ ತಲೆ ಕಡಿಸಿಕೊಳ್ಳುತ್ತಿಲ್ಲ ಎನ್ನುವ ದೂರು ಕಳೆದ ಹಲವು ವರ್ಷಗಳಿಂದ ಕೇಳಿಬಂದಿದ್ದರೂ ಈ ಬಗ್ಗೆ ಜಿಲ್ಲಾಡಳಿತ ಕನಿಷ್ಟ ಕಾಳಜಿ ತೋರಿಸು ತ್ತಿಲ್ಲ ಎನ್ನುವ ಆರೋಪಗಳು ಕೇಳಿಬಂದಿವೆ.

ಈ ವ್ಯಾಪ್ತಿಯ ಹೆದ್ದಾರಿಯ ಸೇತುವೆಯ ಎರಡೂ ಭಾಗಗಳಲ್ಲಿ ತ್ಯಾಜ್ಯಗಳ ರಾಶಿಯೊಂದಿಗೆ ಹದ್ದು, ನಾಯಿಗಳ ಆವಾಸಸ್ಥಾನದಂತೆ ದೃಶ್ಯ ಕಂಡುಬರುತ್ತಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಗಳು ಕೂಡಲೇ ಕಾರ್ಯತತ್ಪರರಾಗ ಬೇಕಾಗಿದೆ ಎನ್ನುವದು ಈ ಭಾಗದ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಅವರ ಆಗ್ರಹವಾಗಿದೆ. ಈ ಸಂಬಂಧ ಜಿಲ್ಲೆಯ ಹಿರಿಯ ಅಧಿಕಾರಿಗಳು ತುರ್ತಾಗಿ ಗಮನಹರಿಸಬೇಕಾಗಿದೆ. ಇದರೊಂದಿಗೆ ನಾಡಿನ ಜನರು ಅಧಿಕಾರಿಗಳೊಂದಿಗೆ ಕೈಜೋಡಿಸಿ ದಲ್ಲಿ ಕಲುಷಿತರಹಿತ ಕಾವೇರಿ ಹರಿಯುವಂತೆ ಮಾಡಲು ಸಾಧ್ಯ ಎನ್ನುತ್ತಾರೆ.

ನೆಲ್ಲಿಹುದಿಕೇರಿ ವ್ಯಾಪ್ತಿಯಲ್ಲಿ ನದಿ ಒಡಲಿಗೆ ತ್ಯಾಜ್ಯಗಳನ್ನು ಹಾಕುವ ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಪಂಚಾಯ್ತಿ ಮೂಲಕ ಕ್ರಮಕ್ಕೆ ಅಲ್ಲಿನ ಮಾಜಿ ಹಾಗೂ ಹಾಲಿ ಜನಪ್ರತಿನಿಧಿಗಳು ತಂಡ ವೊಂದನ್ನು ರಚಿಸಿ ಕಾರ್ಯಾ ಚರಣೆಗೆ ಮುಂದಾಗಿರುವದು ನಿಜಕ್ಕೂ ಶ್ಲಾಘನಾರ್ಹ ಎನ್ನಬಹುದು. ಪ್ರವಾಸೋಧ್ಯಮದ ಹೆಸರಿನಲ್ಲಿ ನದಿಯಲ್ಲಿ ಯಾಂತ್ರೀಕೃತ ಬೋಟ್ ಚಲಾಯಿಸುವದರೊಂದಿಗೆ ನದಿ ದಡ ಸಂಪೂರ್ಣ ಕೊರೆತಕ್ಕೆ ಈಡಾಗಿರುವದು ಒಂದೆಡೆಯಾದರೆ ಬೋಟ್‍ಗಳಿಂದ ಹೊರಸೂಸುವ ಇಂಧನಗಳು ಅಪಾಯಕಾರಿಯಾಗಿ ನದಿ ಒಡಲು ಸೇರುತ್ತಿವೆ. ನದಿ ತಟಗಳಲ್ಲಿರುವ ಗ್ರಾಮ ಮತ್ತು ಪಟ್ಟಣ ಪಂಚಾಯ್ತಿ ವ್ಯಾಪ್ತಿಗಳಲ್ಲಿರುವ ವಾಹನಗಳ ಸರ್ವೀಸ್ ಸ್ಟೇಷನ್‍ಗಳಿಂದ ಹೊರಸೂಸುವ ಗ್ರೀಸ್ ಮುಂತಾದ ವಸ್ತುಗಳು ನೇರವಾಗಿ ನದಿಗೆ ಸೇರ್ಪಡೆಗೊಂಡು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ನೀರಿನಲ್ಲಿ ಇಂತಹ ಇಂಧನಗಳು ಮಿಶ್ರಣಗೊಳ್ಳದೆ ಇದು ನೇರವಾಗಿ ಮನುಷ್ಯನ ಒಡಲಿಗೆ ಸೇರುವ ಮೂಲಕ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವದು ನದಿ ತಟದ ಜನರ ಆತಂಕವಾಗಿದೆ.

ಕಾವೇರಿ ನದಿ ತಟಗಳಲ್ಲಿ ವಲಸೆ ಬಂದು ವಾಸ್ತವ್ಯ ಹೂಡಿರುವ ನೂರಾರು ಮನೆಗಳಿಂದ ಕಾವೇರಿ ನದಿ ಅಸ್ತಿತ್ವಕ್ಕೆ ಕಂಟಕ ಸೃಷ್ಠಿ ಯಾಗಿರುವದು ಕೂಡ ಇನ್ನೊಂದು ಸಮಸ್ಯೆಯಾಗಿದೆ. ಕಾಕೋಟು ಪರಂಬು, ಬೇತ್ರಿ, ಹಾಲುಗುಂದ, ಕನ್ನಂಗಾಲ, ನೆಲ್ಲಿಹುದಿಕೇರಿ, ನಾಪೋಕ್ಲು, ಭಾಗಮಂಡಲ ವ್ಯಾಪ್ತಿಯಲ್ಲಿರುವ ನದಿ ತಟದ ಸುಮಾರು ಸಾವಿರಕ್ಕೂ ಅಧಿಕ ಮನೆ, ಕಟ್ಟಡಗಳನ್ನು ಹಾಗೂ ನದಿ ತಟಗಳ ಒತ್ತುವರಿಯನ್ನು ತೆರವುಗೊಳಿಸಿ ಅಭಿವೃದ್ಧಿ ಪಡಿಸಲು ಮುಂದಾದಲ್ಲಿ ಇದರಿಂದ ಉಂಟಾಗಲಿರುವ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನ ಸುಲಲಿತವಾಗಲಿದೆ ಎನ್ನುವದು ಬಹುತೇಕ ಜನರ ಅಭಿಪ್ರಾಯ ವಾಗಿದೆ. ನದಿ ತಟದ ಜನರಿಗೆ ಪುನರ್ವಸತಿ ಕಲ್ಪಿಸುವದು ರಾಜ್ಯ ಹಾಗೂ ಕೇಂದ್ರ ಸರಕಾರದ ಆದ್ಯ ಕರ್ತವ್ಯವಾಗಿದೆ.