ಅಮ್ಮತ್ತಿ, ಜೂ. 10: ಕಾರ್ಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಅಂಗಡಿಗಳ ಪರವಾನಗಿ ಶುಲ್ಕವನ್ನು ಏಕಾಎಕಿ ಏರಿಸಿರುವದರ ಬಗ್ಗೆ ಪ್ರಶ್ನಿಸಿ ಚೇಂಬರ್ ಆಫ್ ಕಾಮರ್ಸ್‍ನ ಎಲ್ಲಾ ಪದಾಧಿಕಾರಿಗಳು ಹಾಗೂ ಅಧ್ಯಕ್ಷರು ಪಂಚಾಯಿತಿಗೆ ಮನವಿ ಸಲ್ಲಿಸಿದ್ದಾರೆ.

ವರ್ತಕರುಗಳ ಯಾವದೇ ಸಮಸ್ಯೆಗಳನ್ನು ಆಲಿಸದೆ, ಅವರಿಗೆ ಯಾವದೇ ಮುನ್ಸೂಚನೆ ನೀಡದೆ ಮನಬಂದಂತೆ ರೂ. 500 ಇದ್ದುದನ್ನು ರೂ. 1000ಕ್ಕೆ ಮತ್ತು ರೂ. 1000 ದಿಂದ ರೂ. 3000 ದವರೆಗೆ ಏರಿಸಿದ್ದಾರೆ. ಈ ಕುರಿತು ವರ್ತಕರುಗಳಿಂದ ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷರಿಗೆ ಬಂದ ದೂರಿನ ಹಿನ್ನೆಲೆಯಲ್ಲಿ, ಸಂಘದಿಂದ ತುರ್ತು ಸಭೆ ಕರೆದು ಶುಲ್ಕ ಏರಿಕೆ ಕ್ರಮ ಸರಿಯಲ್ಲ ಹಾಗೂ ಶುಲ್ಕ ಏರಿಕೆಯಿಂದ ವರ್ತಕರುಗಳಿಗೆ ತೊಂದರೆ ಉಂಟಾಗಿರುವದು ಗಮನಕ್ಕೆ ಬಂದಿದ್ದು, ಈ ವಿಚಾರವಾಗಿ ಸಂಘದಲ್ಲಿ ಎಲ್ಲರ ತೀರ್ಮಾನದಂತೆ ಪರವಾನಗಿ ಶುಲ್ಕ ಏರಿಸಿರುವದನ್ನು ಹಿಂಪಡೆಯಬೇಕೆಂದು ಸಂಘದ ಮುಖಾಂತರ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ ಕಾರ್ಮಾಡು ಪಂಚಾಯಿತಿ ಅಧ್ಯಕ್ಷ ಅಕ್ಕಚ್ಚೀರ ರೋನಾ ಭೀಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಅವೈಜ್ಞಾನಿಕ ರೀತಿಯಲ್ಲಿ ಪಂಚಾಯತ್ ರಾಜ್ ಕಾನೂನಿನ ವಿರುದ್ಧವಾಗಿ ಪರವಾನಗಿ ಶುಲ್ಕ ಏರಿಸಿರುವದು ಸರಿಯಲ್ಲ ಎಂದು ಈ ಸಂದರ್ಭದಲ್ಲಿ ಸುವಿನ್ ಗಣಪತಿ ಹೇಳಿದರು. ಅಲ್ಲದೇ, ಈಗಾಗಲೇ ಏರಿಸಿರುವ ಪರವಾನಗಿ ಶುಲ್ಕ ಹಿಂಪಡೆದು ಮೊದಲಿನಂತೆಯೇ ಮುಂದುವರಿಸಬೇಕೆಂದು ತಿಳಿಸಿದ್ದಾರೆ.

ಮನವಿ ಸ್ವೀಕರಿಸಿ ಮಾತನಾಡಿದ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ರವಿ ತಿಮ್ಮಯ್ಯ ಅವರು, ಪಂಚಾಯಿತಿಯಲ್ಲಿ ಅನುದಾನಗಳ ಕೊರತೆ ಹೆಚ್ಚಿದೆ, ಹಾಗಾಗಿ ಶುಲ್ಕವನ್ನು ಹೆಚ್ಚಿಸಬೇಕಾಯಿತು ಎಂದರು. ಇದಕ್ಕೆ ಪ್ರತಿಯಾಗಿ ಮಾತನಾಡಿದ ಸುವಿನ್ ಗಣಪತಿ, ಪಂಚಾಯಿತಿಯನ್ನು ಉದ್ಯಮಿಗಳು ಉದ್ಧಾರ ಮಾಡಕ್ಕಾಗಲ್ಲ, ಎಲ್ಲಾ ಶುಲ್ಕವನ್ನು ವ್ಯಾಪಾರಸ್ಥರ ಮೇಲೆ ಹಾಕಬೇಡಿ. ಬೇಕಿದ್ದರೆ ಶೇ. 15 ರಷ್ಟು ಹೆಚ್ಚಿಸಿ ಎಂದರು. ಪ್ರತಿದಿನ ಪಟ್ಟಣದಾದ್ಯಂತ ಕಸ ತೆಗೆದು ಶುಚಿಯಾಗಿಡಲು ಸಹಕರಿಸಿ ನೀರಿನ ಸಮಸ್ಯೆ ಈಗ ಎಲ್ಲಾ ಕಡೆ ಇದೆ. ಆದರೆ ಪಂಚಾಯಿತಿ ವತಿಯಿಂದ ಸರಬರಾಜು ಮಾಡಲಾಗುತ್ತಿರುವ ನೀರಿಗೆ ಮಾಸಿಕ ಶುಲ್ಕ ಅಥವಾ ಮೀಟರ್ ರೀಡಿಂಗ್ ನೋಡಿ ಶುಲ್ಕ ತೆಗೆದುಕೊಳ್ಳಿ, ಎರಡನ್ನೂ ಸೇರಿಸಿ ಹಣ ವಸೂಲಿ ಮಾಡಬೇಡಿ ಮತ್ತು ಪಟ್ಟಣದಲ್ಲಿ ಕಡ್ಡಾಯವಾಗಿ ಪ್ಲಾಸ್ಟಿಕ್ ನಿಷೇಧ ಮಾಡಿ ಎಂದು ಸಲಹೆ ನೀಡಿದರು.

ಇದಕ್ಕೆ ಉತ್ತರಿಸಿದ ಪಂಚಾಯಿತಿ ಸದಸ್ಯ ಮಾಚಿಮಂಡ ಸುರೇಶ್ ಅಯ್ಯಪ್ಪ ಅವರು, ಎಲ್ಲರೂ ನಮ್ಮೊಂದಿಗೆ ಸಹಕರಿಸಬೇಕು. ಕಸ ವಿಲೇವಾರಿ ಮಾಡಲು ಇಲ್ಲಿ ಕೆಲಸದವರ ಸಮಸ್ಯೆ ಇದೆ. ಜೊತೆಗೆ ಕಸ ಹಾಕುವ ಸ್ಥಳದ ಸಮಸ್ಯೆ ಉಂಟಾಗಿದ್ದರಿಂದ 4 ದಿನಗಳು ಸರಿಯಾಗಿ ಕಸ ತೆಗೆಯಲು ಸಾಧ್ಯವಾಗಿಲ್ಲ. ಈಗ ಸಮಸ್ಯೆ ಬಗೆಹರಿದಿದ್ದು, ಕಸ ತೆಗೆಯಲಿದ್ದೇವೆ ಎಂದರು. ಮುಂದಿನ ಸಭೆಯಲ್ಲಿ ನೀರು ಹಾಗೂ ಶುಲ್ಕ ವಿನಾಯಿತಿ ಬಗ್ಗೆ ಪ್ರಸ್ತಾಪ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ವರ್ತಕರುಗಳ ಸಮಸ್ಯೆ ಆಲಿಸಿದ ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಮೂಕೋಂಡ ಬೋಸ್ ದೇವಯ್ಯ, ಎಲ್ಲಾ ವಾಣಿಜ್ಯೋದ್ಯಮಿಗಳ ಪರವಾಗಿ ಮಾತನಾಡಿ, ಚಿಕ್ಕ ಪಟ್ಟಣದಲ್ಲಿ ಹೇಳಿಕೊಳ್ಳುವಂತಹ ವ್ಯಾಪಾರಗಳೇನು ಇಲ್ಲ. ಎಲ್ಲಾ ಅವರವರ ಜೀವನೋಪಾಯ ಸಾಗಿಸಿಕೊಂಡು ಹೋಗುವಷ್ಟು ವ್ಯಾಪಾರ ನಡೆಯುತ್ತದಷ್ಟೆ. ಹಾಗಿರುವಾಗ ಶುಲ್ಕ ಒಮ್ಮಿಂದೊಮ್ಮೆಲೆ ಶೇಕಡ ನೂರರಷ್ಟು ಏರಿಕೆ ಸರಿಯಲ್ಲ. ಪಂಚಾಯಿತಿಯಲ್ಲಿ ಅನುದಾನಗಳ ಕೊರತೆ ಇದ್ದರೆ ಸರಕಾರದಿಂದ ಭರಿಸಿ. ಹಣ ಕ್ರೋಢಿಕರಣ ಮತ್ತು ಸ್ಥಳೀಯ ಸಂಪನ್ಮೂಲಗಳ ಕ್ರೋಢಿಕರಣ ಮಾಡಿ. ನಾವುಗಳು ಸಹಕಾರ ನೀಡುತ್ತೇವೆ ಎಂದರು. ಪರವಾನಗಿ ಶುಲ್ಕವನ್ನು ಶೇ. 15 ರಷ್ಟು ಹೆಚ್ಚಳ ಮಾಡಿ ಎಂದರು.

ಶುಲ್ಕ ಇಳಿಕೆ ವಿಚಾರ ಕೋರಿಕೆ ಬಗ್ಗೆ ತೀರ್ಮಾನವನ್ನು ಪಂಚಾಯಿತಿ ಸಭೆಯಲ್ಲಿ ಮಾಡಲಾಗುವದು ಎಂದು ಅಧ್ಯಕ್ಷೆ ಅಕ್ಕಚ್ಚೀರ ರೋನಾ ಭೀಮಯ್ಯ ಹಾಗೂ ಸದಸ್ಯ ಸುರೇಶ್ ಅಯ್ಯಪ್ಪ ಹೇಳಿದರು. ಅಮ್ಮತ್ತಿ, ಕಾರ್ಮಾಡುವಿನ ಎಲ್ಲಾ ವರ್ತಕರುಗಳು ಈ ಸಂದರ್ಭ ಪಂಚಾಯಿತಿಗೆ ಆಗಮಿಸಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.

ಪಂಚಾಯಿತಿ ಉಪಾಧ್ಯಕ್ಷೆ ಬಡುವಂಡ ಸುನಿತ, ಸದಸ್ಯರು, ಚೇಂಬರ್ ಆಫ್ ಕಾಮರ್ಸ್‍ನ ಉಪಾಧ್ಯಕ್ಷರುಗಳಾದ ಮಂಡೇಪಂಡ ಗಣಪತಿ, ಕೆ. ಧರ್ಮ, ಪ್ರಧಾನ ಕಾರ್ಯದರ್ಶಿ ಎನ್.ಎಸ್. ಪ್ರಜೀತ್, ಕಾರ್ಯದರ್ಶಿ ಅವಿತ್ ಮೆನೆಜಸ್, ಖಜಾಂಚಿ ವಿ.ಎನ್. ಸುರೇಶ್. ನಿರ್ದೇಶಕರುಗಳಾದ ಕೆ.ಜೆ. ಜಾರ್ಜ್, ಪಿ.ಪಿ. ಪ್ರಾಹಾಲದನ್, ಬಿ.ಎ. ಮಂದಣ್ಣ, ಸರಸ್ವತಿ, ಮೊದಲಾದವರು ಈ ಸಂದರ್ಭ ಹಾಜರಿದ್ದರು. - ಈಶಾನ್ವಿ