ಶನಿವಾರಸಂತೆ, ಡಿ. 2: ಸಮೀಪದ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 50 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಬಗೆಹರಿಸುವಲ್ಲಿ ಗ್ರಾಮ ಪಂಚಾಯಿತಿ ವಿಫಲವಾಗಿದೆ ಎಂದು ವಿರೋಧಿಸಿ, ಜಯ ಕರ್ನಾಟಕ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಚೇಂಬರ್ ಆಫ್ ಕಾಮರ್ಸ್, ಆಟೋ ಚಾಲಕರ ಮತ್ತು ಮಾಲೀಕರ ಸಂಘ, ಸ್ತ್ರೀಶಕ್ತಿ ಸಂಘ, ಕನ್ನಡಪರ ಸಂಘಟನೆಗಳು, ಭೂ ಹಕ್ಕು ಹೋರಾಟ ಸಮಿತಿ, ದಲಿತ ಸಂಘರ್ಷ ಸಮಿತಿ ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.

ಕೊಡ್ಲಿಪೇಟೆಯ ಕಡೇಪೇಟೆಯ ಗಣಪತಿ ದೇವಸ್ಥಾನದಿಂದ ಮುಖ್ಯರಸ್ತೆಯಲ್ಲಿ ಧಿಕ್ಕಾರ ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿ ಬಂದ ಪ್ರತಿಭಟನಾಕಾರರು ಪಂಚಾಯಿತಿ ಮುಂಭಾಗ ಜಮಾಯಿಸಿ ಪ್ರತಿಭಟನೆಯಲ್ಲಿ ತೊಡಗಿದರು.

ಹೇಮಾವತಿ ನದಿಯಿಂದ ನೀರು ಸರಬರಾಜು ಮಾಡುತ್ತಿದ್ದ 40 ಹೆಚ್.ಪಿ. ಟರ್ಬೈನ್ ಮೋಟಾರ್ ಕೆಟ್ಟು ಹೋಗಿದ್ದು, ದುರಸ್ತಿಪಡಿಸುವಲ್ಲಿ ಪಂಚಾಯಿತಿ ವಿಫಲವಾಗಿದೆ. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದ ವ್ಯವಸ್ಥೆಯೂ ಸ್ಥಗಿತಗೊಂಡಿದೆ. ಉಚಿತವಾಗಿ ನೀರು ಕೊಡುತ್ತಿದ್ದ ವ್ಯಕ್ತಿಯ ತೇಜೋವಧೆ ಮಾಡಲಾಗಿದೆ. ಕೊಳವೆ ಬಾವಿಗಳ ನಿರ್ವಹಣೆಯೂ ಸರಿಯಿಲ್ಲ. ಸದಸ್ಯರಿಗೇ ಟೆಂಡರ್ ಕೊಡುವದು ಸರಿಯಲ್ಲ. ಸ್ಥಳಕ್ಕೆ ಕಾರ್ಯನಿರ್ವಹಣಾಧಿಕಾರಿ ಬರಲೇಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು 3 ಗಂಟೆ ಕಾಲ ಪ್ರತಿಭಟನೆ ನಡೆಸಿದರು.