ಮಡಿಕೇರಿ, ಜು.12 : ಡಿವೈಎಸ್‍ಪಿ ಎಂ.ಕೆ.ಗಣಪತಿಯವರ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿ ಹಿಂದೂ ಜಾಗರಣಾ ವೇದಿಕೆ ಮತ್ತು ವಿಶ್ವ ಹಿಂದೂ ಪರಿಷತ್ ಜು.14 ರಂದು ಸ್ವಯಂ ಪ್ರೇರಿತ ‘ಕೊಡಗು ಬಂದ್’ಗೆ ಕರೆ ನೀಡಿವೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಂಚಾಲಕ ಮಂಜು, ಗುರುವಾರ ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಜಿಲ್ಲೆಯಾದ್ಯಂತ ಬಂದ್‍ಗೆ ಕರೆ ನೀಡಲಾಗುತ್ತಿದೆ. ಬಂದ್ ಸಂದರ್ಭ ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿ ಮತ್ತು ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ, ರಸ್ತೆ ತಡೆ ನಡೆಸುವ ಮೂಲಕ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಡಿವೈಎಸ್‍ಪಿ ಗಣಪತಿ ಸಾವಿನ ಪ್ರಕರಣದ ಸಿಐಡಿ ತನಿಖೆಯನ್ನು ಹಿಂದಕ್ಕೆ ಪಡೆದು ಸಿಬಿಐ ತನಿಖೆಗೆ ಒಳಪಡಿಸಬೇಕು, ಸಾವಿಗೂ ಮುನ್ನ ಗಣಪತಿ ಅವರು ನೀಡಿರುವ ಹೇಳಿಕೆಯ ಆಧಾರದಲ್ಲಿ ಇಬ್ಬರು ಹಿರಿಯ ಪೆÇಲೀಸ್ ಅಧಿಕಾರಿಗಳು ಮತ್ತು ಸಚಿವ ಕೆ.ಜೆ. ಜಾರ್ಜ್ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.

ಹಿರಿಯ ಅಧಿಕಾರಿಗಳ ಮತ್ತು ಸಚಿವ ಕೆ.ಜೆ. ಜಾರ್ಜ್ ಅವರ ಒತ್ತಡವಿತ್ತು ಎಂದು ಸ್ವತಃ ಗಣಪತಿಯವರು ಸಾವಿಗೂ ಮುನ್ನ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದರು. ಹೀಗಿದ್ದೂ, ಗಣಪತಿ ಅವರ ವಯೋವೃದ್ಧ ತಂದೆಯ ಸಹಿ ಪಡೆದು ಹೇಳಿಕೆ ಸೃಷ್ಟಿಸಿರುವ ಸರ್ಕಾರ ಪ್ರಕರಣವನ್ನು

ಕೌಟುಂಬಿಕ ಸಮಸ್ಯೆಯೆಂದು ತಿರುಚುತ್ತಿರುವದು ಖಂಡನೀಯ. ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿಕೊಳ್ಳದೆ, ಕುಟುಂಬಸ್ಥರ ಮನಸ್ಥಿತಿಯನ್ನು ಕುಗ್ಗಿಸುವ ಕೆಲಸ ಮಾಡಲಾಗಿದೆ ಎಂದು ಮಂಜು ಆರೋಪಿಸಿದರು.

ಕುಶಾಲನಗರ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳುವದಕ್ಕಾಗಿ ಸಂಘಟನೆ ಮೂಲಕ 24 ಗಂಟೆಗಳ ಗಡುವು ನೀಡಲಾಗಿತ್ತು. ಗಡುವು ಕಳೆದರೂ ಯಾವದೇ ಕ್ರಮ ಕೈಗೊಳ್ಳದ ಕಾರಣ ಬಂದ್‍ಗೆ ಕರೆ ನೀಡಿರುವದಾಗಿ ಮಂಜು ಸ್ಪಷ್ಟಪಡಿಸಿದರು.

ಜಿಲ್ಲಾ ಬಂದ್‍ಗೆ ಈಗಾಗಲೆ ಕೊಡವ ಸಮಾಜ, ಗೌಡ ಸಮಾಜ, ವಾಹನ ಚಾಲಕರ ಸಂಘ, ಚೇಂಬರ್ ಆಫ್ ಕಾಮರ್ಸ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಪಕ್ಷಾತೀತವಾಗಿ ಬೆಂಬಲ ಸೂಚಿಸಿರುವದಾಗಿ ತಿಳಿಸಿದರು. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹ ಮಾತನಾಡಿ, ಪ್ರಾಮಾಣಿಕ ಅಧಿಕಾರಿಗಳನ್ನು ಮುಗಿಸುವ ಷಡ್ಯಂತ್ರವನ್ನು ರಾಜ್ಯ ಸರ್ಕಾರ ಮಾಡುತ್ತಲೆ ಬಂದಿದೆ ಮತ್ತು ಭ್ರಷ್ಟಾಚಾರವನ್ನು ಪೋಷಿಸುತ್ತಾ ಬಂದಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನಾ ಕಾರ್ಯದರ್ಶಿ ತಿಮ್ಮಯ್ಯ, ಜಿಲ್ಲಾ ಉಪಾಧ್ಯಕ್ಷ ಸುಜಾ, ಖಜಾಂಚಿ ತಿರುಪತಿ ಹಾಗೂ ಮಡಿಕೇರಿ ಸಂಚಾಲಕ ಅಜಿತ್ ಉಪಸ್ಥಿತರಿದ್ದರು.

ಆಟೋ ಘಟಕ

ರಾಜ್ಯದ ದಕ್ಷ ಅಧಿಕಾರಿ ಡಿವೈಎಸ್‍ಪಿ ಎಂ.ಕೆ. ಗಣಪತಿಯವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ತಾ. 14 ರ ಕೊಡಗು ಬಂದ್‍ಗೆ ಭಾರತೀಯ ಮಜ್ದೂರ್ ಸಂಘ (ಬಿಎಂಎಸ್)ದ ಆಟೋ ಘಟಕ ಸಂಪೂರ್ಣ ಬೆಂಬಲ ಸೂಚಿಸಿದೆ.

ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಸಂಘದ ಅಧ್ಯಕ್ಷ ಎಂ.ಎಸ್. ಡಾಲೇಶ್, ಪ್ರಧಾನ ಕಾರ್ಯದರ್ಶಿ, ಕೆ.ಎಸ್. ಗಣೇಶ್, ಉಪಾಧ್ಯಕ್ಷ ಕೆ.ವಿ. ಧರ್ಮೆಂದ್ರ, ಸಹಕಾರ್ಯದರ್ಶಿ ಕೆ.ಭರತ್ ಕುಮಾರ್, ಸಂಘಟನಾ ಕಾರ್ಯದರ್ಶಿ ಟಿ.ಹೆಚ್ ಸುದೀಂದ್ರ ಶೆಟ್ಟಿ ಹಾಗೂ ಇತರ ಸದಸ್ಯರು ಪತ್ರಿಕಾ ಹೇಳಿಕೆ ಮೂಲಕ ಒತ್ತಾಯಿಸಿದ್ದಾರೆ. ಬಂದ್ ದಿನ ಆಟೋ ಸಂಚಾರ ಸ್ಥಗಿತಗೊಳ್ಳುವ ಕಾರಣ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಅವರು ಕೋರಿದ್ದಾರೆ.

ಯುವ ಮೋರ್ಚಾ

ಡಿವೈಎಸ್‍ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಪರ ಸಂಘಟನೆಗಳು ಕೊಡಗು ಬಂದ್‍ಗೆ ಕರೆ ನೀಡಿದ್ದು, ಕಡಗದಾಳು, ಇಬ್ನಿವಳವಾಡಿ ಬಿಜೆಪಿ ಯುವ ಮೋರ್ಚಾ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಅಧ್ಯಕ್ಷ ಬಿ.ಬಿ. ಮಹೇಶ್, ಉಪಾಧ್ಯಕ್ಷ ಬಿ.ಕೆ.ಪ್ರವೀಣ್, ಬಿ.ಜೆ.ಗಣೇಶ್, ಸಂಘಟನಾಧ್ಯಕ್ಷ ಕೆ.ಎಸ್.ಗಣೇಶ್, ಪ್ರಧಾನ ಕಾರ್ಯದರ್ಶಿ ಜಯಣ್ಣ, ಖಜಾಂಚಿ ಯೋಗೇಶ್, ಸಂಘಟನಾ ಕಾರ್ಯದರ್ಶಿಗಳಾದ ಬಿ.ಕೆ.ಕಿರಣ್‍ಕುಮಾರ್, ರಂಜಿತ್, ದಿನೇಶ್, ರಾಜ ಹಾಗೂ ಪದಾಧಿಕಾರಿಗಳು, ಸದಸ್ಯರು ಪತ್ರಿಕೆ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದ್ದಾರೆ.

ಜಯಕರ್ನಾಟಕ

ಕೊಡಗು ಜಿಲ್ಲಾ ಜಯಕರ್ನಾಟಕ ಸಂಘಟನೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುವದಾಗಿ ಅಧ್ಯಕ್ಷ ರಾಬಿನ್ ಕುಟ್ಟಪ್ಪ ತಿಳಿಸಿದ್ದಾರೆ.

ಯುವ ವೇದಿಕೆ

ಡಿವೈಎಸ್ಪಿ ಗಣಪತಿ ಅವರ ಆತ್ಮಹತ್ಯೆಗೆ ಕಾರಣಕರ್ತರಾದವರ ವಿರುದ್ಧ ಸೂಕ್ತ ತನಿಖೆಯೊಂದಿಗೆ ಕ್ರಮ ಕೈಗೊಳ್ಳಬೇಕೆಂದು ಕೊಡಗು ಗೌಡ ಯುವ ವೇದಿಕೆ ಆಗ್ರಹಿಸಿದೆ. ಈ ಕುರಿತು ಹೇಳಿಕೆ ನೀಡಿರುವ ವೇದಿಕೆಯ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಅವರು ದಕ್ಷ ಅಧಿಕಾರಿಯ ಆತ್ಮಹತ್ಯೆ ಹಾಗೂ ನಂತರದ ಸರಕಾರದ ನಡಾವಳಿಕೆ ಖಂಡನೀಯ. ಎಲ್ಲರೂ ಪಕ್ಷಾತೀತ, ಜಾತ್ಯತೀತವಾಗಿ ಇದರ ವಿರುದ್ಧ ಹೋರಾಟ ಮಾಡಬೇಕಿದೆ. ಈ ಸಂಬಂಧ ತಾ. 14ರ ಬಂದ್‍ಗೆ ಯುವ ವೇದಿಕೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಹೇಳಿದ್ದಾರೆ. ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ.

ವೀರಾಜಪೇಟೆ ಜಾ.ವೇದಿಕೆ

ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಡಿವೈಎಸ್‍ಪಿ ಮಾದಪಂಡ ಗಣಪತಿ ಅವರ ಆತ್ಮಹತ್ಯೆ ಪ್ರಕರಣದ ಆರೋಪಿ ಮಾಜಿ ಗೃಹ ಮಂತ್ರಿ ಕೆ.ಜೆ ಜಾರ್ಜ್ ಅವರು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮೂವರು ಆರೋಪಿಗಳ ಮೇಲೆ ಎಫ್‍ಐಆರ್ ದಾಖಲಾಗಬೇಕು. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ಜುಲೈ 14ರಂದು ಹಿಂದೂ ಜಾಗರಣ ವೇದಿಕೆ ಕರೆ ನೀಡಿರುವ ಕೊಡಗು ಬಂದ್‍ಗೆ ವೀರಾಜಪೇಟೆ ಹಿಂದೂ ಜಾಗರಣ ವೇದಿಕೆ ಸಂಪೂರ್ಣ ಬೆಂಬಲ ನೀಡಲಿದೆ. ಇದಕ್ಕೆ ವಾಹನ ಮಾಲೀಕರು ಮತ್ತು ಚಾಲಕರು, ಹೊಟೇಲ್, ಅಂಗಡಿ ಮಾಲೀಕರು ಹಾಗೂ ವಿವಿಧ ಸಂಘಟನೆÉಗಳು, ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಸಹಕರಿಸುವಂತೆ ವೀರಾಜಪೇಟೆ ಹಿಂದೂ ಜಾಗರಣ ವೇದಿಕೆ ನಗರ ಸಮಿತಿ ಸಂಚಾಲಕ ಮುಕ್ಕಾಟಿರ ಅಯ್ಯಪ್ಪ, ಸಹ ಸಂಚಾಲಕ ಎನ್.ಎಸ್ ದರ್ಶನ್ ಅಧ್ಯಕ ಎಂ.ಬಿ ಚಂದ್ರನ್, ಉಪಾಧ್ಯಕ್ಷ ಬಿ.ಟಿ. ರತ್ನಾಕರ್ ತಾಲೂಕು ಸಂಚಾಲಕ ಬಿ.ಎನ್ ಯೋಗೇಶ್ ವಿನಂತಿಸಿಕೊಂಡಿದ್ದಾರೆ.

ಬಂದ್‍ಗೆ ಅ.ಕೊ.ಸ. ಬೆಂಬಲ

ಡಿವೈಎಸ್‍ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ತಾ. 14 ರಂದು (ನಾಳೆ) ಕರೆ ನೀಡಲಾಗಿರುವ ಕೊಡಗು ಜಿಲ್ಲಾ ಬಂದ್‍ಗೆ ಅಖಿಲ ಕೊಡವ ಸಮಾಜ ಬೆಂಬಲ ವ್ಯಕ್ತಪಡಿಸಲಿದೆ ಎಂದು ಸಮಾಜದ ಗೌರವ ಅಧ್ಯಕ್ಷ ಮಾತಂಡ ಸಿ. ಮೊಣ್ಣಪ್ಪ ಅವರು ತಿಳಿಸಿದ್ದಾರೆ.

ಪ್ರಕರಣದ ಬಗ್ಗೆ ನ್ಯಾಯೋಚಿತವಾದ ತನಿಖೆ ನಡೆಯಬೇಕಿದ್ದು, ಕುಟುಂಬಕ್ಕೆ ನ್ಯಾಯಸಿಗಬೇಕಿದೆ ಎಂದು ಒತ್ತಾಯಿಸಿರುವ ಮೊಣ್ಣಪ್ಪ ಬಂದ್‍ಗೆ ಸಮಾಜ ಬೆಂಬಲ ವ್ಯಕ್ತಪಡಿಸಲಿದೆ. ಆ ದಿನ ಸ್ವಯಂ ಪ್ರೇರಿತವಾಗಿ ಬಂದ್ ಆಚರಣೆಯಾಗಲಿ ಎಂದು ಹೇಳಿರುವ ಅವರು, ಜನರಿಗೆ ಸಮಸ್ಯೆಯಾಗದಂತೆ ಮದುವೆ ಮತ್ತಿತರ ನಿಗದಿತ ಕಾರ್ಯಕ್ರಮಗಳಿಗೆ ಬಂದ್‍ನಿಂದ ವಿನಾಯ್ತಿ ಇರಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕುಟ್ಟ ಕೊಡವ ಸಮಾಜ ಬೆಂಬಲ

ಡಿವೈಎಸ್‍ಪಿ ಗಣಪತಿ ಅವರ ಆತ್ಮಹತ್ಯೆ ಪ್ರಕರಣದ ಬಗ್ಗೆ ತಾ. 14ರ ಕೊಡಗು ಬಂದ್ ಕರೆಗೆ ಕುಟ್ಟ ಕೊಡವ ಸಮಾಜ ಬೆಂಬಲ ವ್ಯಕ್ತಪಡಿಸಿದೆ. ಅಂದು ಬೆಳಿಗ್ಗೆ 9 ಗಂಟೆಯಿಂದ ಕುಟ್ಟದಿಂದ ಮಡಿಕೇರಿಯವರೆಗೆ ವಾಹನ ಜಾಥಾ ಮಾಡಲು ತೀರ್ಮಾನಿಸಿರುವದಾಗಿ ತೀತಿರ ಮಂದಣ್ಣ, ಸುರೇಶ್, ಮಚ್ಚಾಮಾಡ ಸುಬ್ರಮಣಿ, ಮುಕ್ಕಾಟಿರ ನವೀನ್ ತಿಳಿಸಿದ್ದಾರೆ.

ಮಲಯಾಳಿ ಸಂಘ

ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆಗೆ ಕಾರಣಕರ್ತರಾದವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಹಿಂ.ಜಾ.ವೇ. ತಾ. 14 ರಂದು ನೀಡಿರುವ ಕೊಡಗು ಬಂದ್‍ಗೆ ಮಡಿಕೇರಿ ಹಿಂದೂ ಮಲಯಾಳಿ ಸಂಘ ಬೆಂಬಲ ವ್ಯಕ್ತಪಡಿಸಿದೆ. ಪ್ರಕರಣದ ಬಗ್ಗೆ ಸಿಬಿಐ ತನಿಖೆಯೊಂದಿಗೆ ಅವರ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಸಂಘದ ಅಧ್ಯಕ್ಷ ಕೆ.ಎಸ್. ರಮೇಶ್ ಒತ್ತಾಯಿಸಿದ್ದಾರೆ.

ಭಾರತೀಯ ಮಜ್ದೂರ್ ಸಂಘ

ಡಿವೈಎಸ್‍ಪಿ ಗಣಪತಿ ಅವರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಸೂಕ್ತ ತನಿಖೆಯ ಮೂಲಕ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಭಾರತೀಯ ಮಜ್ದೂರ್ ಸಂಘ ಒತ್ತಾಯಿಸಿದೆ. ತಾ.14 ರ ಕೊಡಗು ಬಂದ್‍ಗೆ ಬೆಂಬಲ ಸೂಚಿಸುವ ಮೂಲಕ ಸಂಘ ಪರಿವಾರದ ಪ್ರತಿಭಟನೆಯಲ್ಲಿ ಬಿಎಂಎಸ್‍ನ ಪದಾಧಿಕಾರಿಗಳು ಹಾಗೂ ಬೆಂಬಲಿಗರು ಪಾಲ್ಗೊಳ್ಳಲಿದ್ದಾರೆ ಎಂದು ಸಂಘದ ಜಿಲ್ಲಾಧ್ಯಕ್ಷ ಸೂದನ ಸತೀಶ್, ಪ್ರಧಾನ ಕಾರ್ಯದರ್ಶಿ ಯೋಗಾನಂದ್, ಖಜಾಂಚಿ ಟಿ.ಎ ಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆಟೋ ಚಾಲಕರ ಸಂಘ

ಡಿವೈಎಸ್‍ಪಿ ಗಣಪತಿ ಅವರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೊಳಪಡಿಸಬೇಕೆಂದು ಒತ್ತಾಯಿಸಿ ಹಿಂ.ಜಾ.ವೇ ಕರೆ ನೀಡಿರುವ ತಾ.14ರ ಕೊಡಗು ಬಂದ್‍ಗೆ ಕೊಡಗು ಜಿಲ್ಲಾ ಆಟೋ ಚಾಲಕ- ಮಾಲೀಕರ ಸಂಘ ಬೆಂಬಲ ಸೂಚಿಸಿದೆ. ಎಲ್ಲಾ ಆಟೋ ಚಾಲಕರು ಸಂಚಾರ ಸ್ಥಗಿತಗೊಳಿಸಿ ಬಂದ್‍ಗೆ ಸಹಕಾರ ನೀಡಲಿದ್ದು, ಒಂದು ವೇಳೆ ಯಾರಾದರೂ ಆಟೋ ಚಾಲಿಸಿ ಎಡರು-ತೊಡರುಗಳು ಸಂಭವಿಸಿದಲ್ಲಿ ಚಾಲಕರುಗಳೇ ಜವಾಬ್ದಾರರಾಗಿರುತ್ತಾರೆ ಎಂದು ಸಂಘದ ಅಧ್ಯಕ್ಷ ಡಿ.ಹೆಚ್. ಮೇದಪ್ಪ ತಿಳಿಸಿದ್ದಾರೆ.

ಶ್ರೀಮಂಗಲ

ಡಿವೈಎಸ್‍ಪಿ ಎಂ.ಕೆ. ಗಣಪತಿ ಆತ್ಮಹತ್ಯೆಗೆ ಕಾರಣರಾದವರನ್ನು ಬಂಧಿಸಲು ಆಗ್ರಹಿಸಿ ತಾ. 14 ರಂದು ಕರೆ ನೀಡಿರುವ ಕೊಡಗು ಬಂದ್‍ಗೆ ಜಿಲ್ಲಾ ರೈತ ಸಂಘ ಬೆಂಬಲ ವ್ಯಕ್ತಪಡಿಸಿದೆ. ಈ ಬಗ್ಗೆ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ, ಕಾರ್ಯದರ್ಶಿ ಸುಜಯ್ ಬೋಪಯ್ಯ, ಸಂಚಾಲಕ ಚಿಮ್ಮಂಗಡ ಗಣೇಶ್ ಹೇಳಿಕೆ ನೀಡಿದ್ದಾರೆ.

ಬೆಳೆಗಾರರ ಒಕ್ಕೂಟ

ಬಂದ್‍ಗೆ ಜಿಲ್ಲಾ ಬೆಳೆಗಾರರ ಒಕ್ಕೂಟ ಬೆಂಬಲ ನೀಡುತ್ತದೆ ಎಂದು ಒಕ್ಕೂಟದ ಅಧ್ಯಕ್ಷ ಅಜ್ಜಮಾಡ ಶಂಕರು ನಾಚಪ್ಪ ತಿಳಿಸಿದ್ದಾರೆ. ಟಿ.ಶೆಟ್ಟಿಗೇರಿ ಕೊಡವ ಸಮಾಜದ ಅಧ್ಯಕ್ಷ ಕೊಟ್ರಮಾಡ ಅರುಣ್ ಅಪ್ಪಣ್ಣ ಬಂದ್‍ಗೆ ಬೆಂಬಲ ನೀಡಿ ಹೇಳಿಕೆ ನೀಡಿದ್ದಾರೆ.

ಕಟ್ಟಡ ಕಾರ್ಮಿಕರ ಸಂಘ

ದಕ್ಷ ಅಧಿಕಾರಿ ಡಿವೈಎಸ್‍ಪಿ ಗಣಪತಿ ಅವರ ಆತ್ಮಹತ್ಯೆ ಪ್ರಕರಣವನ್ನು ಸರ್ಕಾರ ಮುಚ್ಚಿ ಹಾಕಲು ಯತ್ನಿಸುತ್ತಿದೆ ಎಂದು ಆರೋಪಿಸಿರುವ ಬಿಎಂಎಸ್ ಸಂಘಟನೆಯ ಕಟ್ಟಡ ಕಾರ್ಮಿಕರ ಸಂಘ ತಾ.14 ರ ಬಂದ್‍ಗೆ ಬೆಂಬಲ ಸೂಚಿಸಿದೆ. ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷÀ ಪಿ.ಪಿ.ಸುಕುಮಾರ್ ಹಾಗೂ ಕಾರ್ಯದರ್ಶಿ ಟಿ.ಎನ್.ಉಮೇಶ್ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಆಗ್ರಹಿಸಿದ್ದಾರೆ. ಬಂದ್ ಸಂದರ್ಭ ನಡೆಯುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ನ್ಯಾಯಕ್ಕಾಗಿ ಒತ್ತಾಯಿಸಲಾಗುವದು ಎಂದು ಹೇಳಿದ್ದಾರೆ.

ಬಿಜೆಪಿ ಯುವ ಮೋರ್ಚಾ

ಕಾಂಗ್ರೆಸ್ ಸರ್ಕಾರ ತನ್ನ ಗೂಂಡಾಗಿರಿ ವರ್ತನೆ ಮೂಲಕ ನಿರಂತರವಾಗಿ ದಕ್ಷ ಅಧಿಕಾರಿಗಳನ್ನು ಬಲಿ ತೆಗೆದುಕೊಳ್ಳುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ಯುವ ಮೋರ್ಚಾದ ಮೇಕೇರಿ, ಕಗ್ಗೋಡ್ಲು, ಹಾಕತ್ತೂರು ಮತ್ತು ಬಿಳಿಗೇರಿ ಘಟಕಗಳು ತಾ.14 ರ ಕೊಡಗು ಬಂದ್‍ಗೆ ಸಂಪೂರ್ಣ ಬೆಂಬಲ ಸೂಚಿಸಿವೆ. ಹಾಕತ್ತೂರು, ಕಗ್ಗೋಡ್ಲು ಘಟಕದ ಅಧ್ಯಕ್ಷ ಪರ್ಲಕೋಟಿ ಸಜನ್ ಹಾಗೂ ಮೇಕೇರಿ, ಬಿಳಿಗೇರಿ ಘಟಕದ ಅಧ್ಯಕ್ಷ ಉದಯಕುಮಾರ್ ಪತ್ರಿಕಾ ಹೇಳಿಕೆ ನೀಡಿ ಡಿವೈಎಸ್‍ಪಿ ಎಂ.ಕೆ.ಗಣಪತಿ ಅವರ ಆತ್ಮಹತ್ಯಾ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದ್ದಾರೆ.

ಸ್ವಾಗತ ಯುವಕ ಸಂಘ

ಹಿಂದೂ ಪರ ಸಂಘಟನೆಗಳು ತಾ.14 ರಂದು ಕರೆ ನೀಡಿರುವ ಕೊಡಗು ಬಂದ್‍ಗೆ ಮೇಕೇರಿಯ ಶ್ರೀ ಸ್ವಾಗತ ಯುವಕ ಸಂಘ ಮತ್ತು ಸುಭಾಷ್ ಯುವ ಸಮಿತಿ ಬೆಂಬಲ ಸೂಚಿಸಿದೆ. ಡಿವೈಎಸ್‍ಪಿ ಎಂ.ಕೆ. ಗಣಪತಿ ಅವರ ಸಾವು ಅತ್ಯಂತ ವಿಷಾದಕರವೆಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಪದಾಧಿಕಾರಿಗಳು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದ್ದಾರೆ.

ಜನ ಸೇವಾ ಸಂಘ

ಡಿವೈಎಸ್‍ಪಿ ಎಂ.ಕೆ.ಗಣಪತಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜು.14 ವಿವಿಧ ಸಂಘಟನೆಗಳು ಕೊಡಗು ಬಂದ್‍ಗೆ ಕರೆ ನೀಡಿದ್ದು, ಇದಕ್ಕೆ ಸ್ವಾಮಿ ವಿವೇಕಾನಂದ ಜನ ಸೇವಾ ಸಂಘವು ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಕಾರ್ಯದರ್ಶಿ ಆರ್.ರಾಮಸ್ವಾಮಿ, ಉಪಾಧ್ಯಕ್ಷ ಪಿ.ಪಿ.ಪ್ರಸಾದ್, ಖಜಾಂಚಿ ಕೆ.ಎಂ.ಸೋಮಶೇಖರ್ ಹಾಗೂ ಸದಸ್ಯರುಗಳಾದ ಪಿ.ಮಣಿ, ಎಸ್.ಸಿ.ಮಂಜುನಾಥ್, ಗಂಗಾಧರ, ಪಿ.ಜೆ. ಗಣೇಶ್, ಎಂ.ಕೆ.ನಜೀರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕುಶಾಲನಗರ ಕೊಡವ ಸಮಾಜ

ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಜುಲೈ 14 ರಂದು ವಿವಿಧ ಸಂಘಟನೆಗಳು ಕರೆ ನೀಡಿರುವ ಸ್ವಯಂಪ್ರೇರಿತ ಕೊಡಗು ಜಿಲ್ಲಾ ಬಂದ್‍ಗೆ ಕುಶಾಲನಗರ ಕೊಡವ ಸಮಾಜದ ಸಂಪೂರ್ಣ ಬೆಂಬಲವಿದೆ ಎಂದು ಸಮಾಜದ ಅಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ ಹೇಳಿದರು.

ಈ ಸಂದರ್ಭ ಸಮಾಜದ ಕಾರ್ಯದರ್ಶಿ ಎ.ಎಂ.ನಂಜಪ್ಪ, ಖಜಾಂಚಿ ಬಲ್ಯಾಟಂಡ ಆರತಿ ಚಿಂಗಪ್ಪ ಹಾಗೂ ಆಡಳಿತ ಮಂಡಳಿ ನಿರ್ದೇಶಕರು ಇದ್ದರು.

* ಡಿವೈಎಸ್ಪಿ ಆತ್ಮಹತ್ಯೆ ಪ್ರಕರಣ ಸಂಬಂಧ ಸೂಕ್ತ ನಾಯ ಒದಗಿಸಲು ಆಗ್ರಹಿಸಿ ಶಾಂತಿಯುತ ಪ್ರತಿಭಟನೆಯಲ್ಲಿ ತೊಡಗಿದ್ದ ವಿವಿಧ ಸಂಘಟನೆಗಳ ಕಾರ್ಯಕರ್ತರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಕುಶಾಲನಗರ ಬಿಜೆಪಿ ನಗರಾಧ್ಯಕ್ಷ ಕೆ.ಜಿ.ಮನು ಆರೋಪಿಸಿದ್ದಾರೆ.

ಜಿಲ್ಲೆಯ ಸೂಕ್ತ ನ್ಯಾಯಕ್ಕಾಗಿ ಆಗ್ರಹಿಸಿದ ಪ್ರತಿಭಟನಕಾರರಿಗೆ ಸ್ಪಂದಿಸದೆ ಪೊಲೀಸರ ಮೂಲಕ ದೌರ್ಜನ್ಯ ಎಸಗಿರುವ ಕ್ರಮವನ್ನು ಬಿಜೆಪಿ ಯುವಮೋರ್ಚಾ ಸೋಮವಾರಪೇಟೆ ತಾಲೂಕು ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೃಷ್ಣಪ್ಪ, ಕೂಡುಮಂಗಳೂರು ಗ್ರಾಮಪಂಚಾಯ್ತಿ ಸದಸ್ಯ ಭಾಸ್ಕರ್ ನಾಯಕ್, ನಿಡ್ಯಮಲೆ ದಿನೇಶ್ ಖಂಡಿಸಿದ್ದಾರೆ.