ಮಡಿಕೇರಿ, ಆ. 7: ಕೊಡವ ಲ್ಯಾಂಡ್ ಕೇಂದ್ರಾಡಳಿತ ಪ್ರದೇಶ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾ. 9 ರಂದು ವಲ್ರ್ಡ್ ಇಂಡಿಜೀನಿಯಸ್ ಪೀಪಲ್ಸ್ ಡೇ ಯನ್ನು ಆಚರಿಸಲು ಕೊಡವ ನ್ಯಾಷನಲ್ ಕೌನ್ಸಿಲ್ ನಿರ್ಧರಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎನ್‍ಸಿ ಅಧ್ಯಕ್ಷ ಎನ್.ಯು. ನಾಚಪ್ಪ, ತಾ. 9 ರಂದು ಜಿಲ್ಲಾಧಿಕಾರಿಗಳ ಕಚೇರಿಯ ಎದುರಿನಲ್ಲಿ ಶಾಂತಿಯುತ ಸತ್ಯಾಗ್ರಹ ನಡೆಸುವದಾಗಿ ತಿಳಿಸಿದರು. ದೇಶದಲ್ಲಿ ಅಸ್ತಿತ್ವದಲ್ಲಿ ಇರುವ ಏಳು ಕೇಂದ್ರಾಡಳಿತ ಪ್ರದೇಶಗಳ ಮಾದರಿಯಲ್ಲೇ ಕೊಡವ ಲ್ಯಾಂಡ್ ಕೇಂದ್ರಾಡಳಿತ ಪ್ರದೇಶ ಸ್ಥಾಪನೆಯಾಗಬೇಕು. ಭಾಷಾ ಅಲ್ಪಸಂಖ್ಯಾತರಾಗಿರುವ ಕೊಡವರಿಗೆ ಬುಡಕಟ್ಟು ಜನಾಂಗದ ಸ್ಥಾನಮಾನ ನೀಡಬೇಕು, ವಿಶಿಷ್ಟ ಭಾಷೆಯಾಗಿರುವ ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್‍ಗೆ ಸೇರಿಸಬೇಕು, ಕೊಡವರಿಗೆ ವಿಶೇಷ ಭದ್ರತೆ ನೀಡಬೇಕು, ದೇವಟ್ ಪರಂಬುವಿನಲ್ಲಿ ರಾಷ್ಟ್ರೀಯ ಸ್ಮಾರಕ ನಿರ್ಮಿಸಬೇಕು, ಜಮ್ಮಾ ಹಿಡುವಳಿದಾರರ ಬಂದೂಕಿನ ವಿಶೇಷ ರಿಯಾಯಿತಿ ಹಕ್ಕನ್ನು ಅಭಾದಿತವಾಗಿ ಮುಂದುವರಿಸಬೇಕು ಎಂಬ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗುವದೆಂದು ತಿಳಿಸಿದರು. ಗೋಷ್ಠಿಯಲ್ಲಿ ಸಂಘಟನೆಯ ಅರೆಯಡ ಗಿರೀಶ್ ಉಪಸ್ಥಿತರಿದ್ದರು.