ಮಡಿಕೇರಿ, ಆ. 7: ಅಧಿಕಾರಿಗಳು ಹಾಗೂ ಜನಪ್ರತಿನಿಧಿ ಗಳು ದಲಿತರನ್ನು ನಿರ್ಲಕ್ಷಿಸುತ್ತಲೇ ಬರುತ್ತಿದ್ದು, ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ ಎಂದು ಆರೋಪಿಸಿರುವ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕ ಇದೇ ತಾ. 14 ರಂದು ಮಧ್ಯರಾತ್ರಿ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಧರಣಿ ಸತ್ಯಾಗ್ರಹವನ್ನು ನಡೆಸಲು ನಿರ್ಧರಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ವಿಭಾಗೀಯ ಸಂಚಾಲಕ ಎನ್. ವೀರಭದ್ರಯ್ಯ ಹಾಗೂ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್, 69 ನೇ ಸ್ವಾತಂತ್ರ್ಯೋತ್ಸವದ ಆಚರಣೆಯ ಸಂದರ್ಭ ಮಧ್ಯರಾತ್ರಿ ಧರಣಿ ಸತ್ಯಾಗ್ರಹದ ಮೂಲಕ ದಲಿತರ ನೋವನ್ನು ಆಡಳಿತ ವ್ಯವಸ್ಥೆಯ ಗಮನಕ್ಕೆ ತರಲಾಗುವದು ಎಂದರು. ದೇಶಕ್ಕೆ ಸ್ವಾತಂತ್ರ್ಯ ಬಂದು 69 ವರ್ಷಗಳೇ ಕಳೆದಿದ್ದರೂ ದೇಶದಲ್ಲಿರುವ ದಲಿತರ ಅಭಿವೃದ್ಧಿ ಇನ್ನೂ ಕೂಡ ಸಾಧ್ಯವಾಗಿಲ್ಲ. ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿ ಸರ್ವ ಸಮಾನತೆಗಾಗಿ ಶ್ರಮಿಸಿದರು. ಆದರೆ ದೇಶದಲ್ಲಿ ಇಂದಿಗೂ ಮೇಲು- ಕೀಳೆನ್ನುವ ಮನೋಭಾವ ಮುಂದುವರೆದಿದೆ. ದಲಿತರ ಮೇಲಿನ ಶೋಷಣೆ, ವಂಚನೆ ಹೆಚ್ಚಾಗುತ್ತಲೇ ಇದ್ದು, ನೊಂದ ದುರ್ಬಲ ವರ್ಗದ ನೋವು ಅರಣ್ಯ ರೋದನವಾಗಿದೆ. ಇಷ್ಟು ವರ್ಷಗಳ ಕಾಲ ದೇಶವನ್ನು ಆಳಿದ ಸರಕಾರಗಳು ದಲಿತರ ಉದ್ಧಾರದ ಪೊಳ್ಳು ಮಾತುಗಳ ನ್ನಾಡಿವೆ ಮತ್ತು ದಲಿತರ ಹೆಸರಿನಲ್ಲಿ ಹಣ ಪೋಲು ಮಾಡಿವೆ. ಆದರೆ ಇಂದಿಗೂ ದಲಿತ ಸಮುದಾಯದ ಅನೇಕ ಮಂದಿ ಕನಿಷ್ಟ ಸೂರಿಲ್ಲದೆ ಜೀತದಾಳುಗಳಂತೆ ಉಳ್ಳವರ ಮನೆಯಲ್ಲಿ ತಮ್ಮ ಜೀವನವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಮಾದಾಪುರ ಕಾಲೇಜಿನ ಪ್ರಾಂಶುಪಾಲ ಸುದೇಶ್ ಅವರು ಮಂಗಳೂರು ಲಾಡ್ಜ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡು ಹಲವು ತಿಂಗಳುಗಳೇ ಕಳೆದಿದ್ದರೂ ಯಾವದೇ ತನಿಖೆಯನ್ನು ಕೈಗೊಳ್ಳದೆ ನಿರ್ಲಕ್ಷ್ಯ ತೋರಲಾಗಿದೆ. ಜಿಲ್ಲೆಯಲ್ಲಿರುವ ಆದಿವಾಸಿಗಳ ಸ್ಥಿತಿ ಚಿಂತಾಜನಕವಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗೆಂದು ಬಿಡುಗಡೆಯಾಗುತ್ತಿರುವ ಅನುದಾನ ನಿರಂತರವಾಗಿ ದುರುಪಯೋಗ ವಾಗುತ್ತಿದೆ. ಇದಕ್ಕೆ ರಾಜಕಾರಣಿಗಳ ಕುಮ್ಮಕ್ಕೂ ಇದ್ದು, ಸರಕಾರದ ಯಾವದೇ ಯೋಜನೆಗಳು ಅರ್ಹ ದಲಿತ ಫಲಾನುಭವಿಗಳಿಗೆ ತಲಪುತ್ತಿಲ್ಲ. ಶ್ರೀಮಂತರು ಒತ್ತುವರಿ ಮಾಡಿ ಕೊಂಡಿರುವ ಸರಕಾರಿ ಭೂಮಿಯನ್ನು ತೆರವುಗೊಳಿಸಿ ಬಡವರಿಗೆ ಹಂಚದೆ ಬಡವರ್ಗದ ದಲಿತ ಮಂದಿಯ ಒತ್ತುವರಿಯನ್ನು ತೆರವು ಗೊಳಿಸಲಾಗುತ್ತಿದೆ. ಆದಿವಾಸಿಗಳನ್ನು ಅರಣ್ಯದ ಮೂಲಸ್ಥಾನದಿಂದ ಹೊರ ಕಳುಹಿಸಿ ನೆಲೆ ಇಲ್ಲದಂತೆ ಮಾಡಲಾ ಗುತ್ತಿದೆ ಎಂದು ಎನ್. ವೀರಭದ್ರಯ್ಯ ಹಾಗೂ ಹೆಚ್.ಎಲ್. ದಿವಾಕರ್ ಆರೋಪಿಸಿದರು.

ಈ ಎಲ್ಲಾ ಬೆಳವಣಿಗೆಗಳನ್ನು ಖಂಡಿಸಿ ತಾ. 14 ರಂದು ಮಧ್ಯರಾತ್ರಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.

ದಲಿತ ನಾಯಕರ ವಿರುದ್ಧ ಅವಹೇಳನಕಾರಿಯಾಗಿ ಯಾರು ನಡೆದುಕೊಂಡರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕಾನೂನು ರೂಪಿಸಬೇಕು. ಮಹದಾಯಿ ವಿವಾದದಲ್ಲಿ ರೈತರ ಮೇಲೆ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

ಕಣ್ಣಂಗಾಲ ಗ್ರಾ.ಪಂ. ಅಧ್ಯಕ್ಷೆ ಈಶ್ವರಿ ಅವರ ಮೇಲೆ ನಡೆದ ದೌರ್ಜನ್ಯ ಪ್ರಕರಣದಂತೆ ಜಿಲ್ಲೆಯ ಇತರೆಡೆ ಕೂಡ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿರುವ ಬೆಳವಣಿಗೆ ಸಂಘಟನೆ ಗಮನಕ್ಕೆ ಬಂದಿದೆ. ಇದನ್ನು ನಿಯಂತ್ರಿಸಲು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಸ್ವತ: ಕಾಳಜಿ ವಹಿಸಿ ದಲಿತರು ಹೆಚ್ಚಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಅಭಯ ನೀಡಬೇಕು ಮತ್ತು ದೌರ್ಜನ್ಯ ನಡೆಸುವವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು.

ಮಾದಾಪುರ ಕಾಲೇಜು ಪ್ರಾಂಶುಪಾಲ ಸುದೇಶ್ ಅವರ ಆತ್ಮಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆದಿವಾಸಿಗಳನ್ನು ಅರಣ್ಯ ಭಾಗದಿಂದ ಒಕ್ಕಲೆಬ್ಬಿಸದೆ ಹಕ್ಕುಪತ್ರ ನೀಡಿ ಆದಿವಾಸಿ ಕಾಯ್ದೆ ಯನ್ನು ಶೀಘ್ರ ಅನುಷ್ಠಾನ ಗೊಳಿಸಬೇಕು. ದಲಿತ ಸಮುದಾಯದ ಅಭಿವೃದ್ಧಿಗಾಗಿ ಬಿಡುಗಡೆಯಾಗಿರುವ ಅನುದಾನ ದುರುಪಯೋಗ ವಾಗಿರುವದನ್ನು ಪತ್ತೆಹಚ್ಚಿ, ತನಿಖೆ ನಡೆಸಿ, ಪ್ರತಿಯೊಂದು ಖರ್ಚು ವೆಚ್ಚದ ಆಡಿಟಿಂಗ್ ವರದಿಯನ್ನು ಬಹಿರಂಗ ಪಡಿಸಿ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ವಸತಿ ರಹಿತ ದಲಿತರಿಗೆ ನಿವೇಶನ ಮತ್ತು ವಸತಿಯನ್ನು ನೀಡಿ ಹಕ್ಕುಪತ್ರ ವಿತರಿಸಬೇಕು ಎಂದು ಒತ್ತಾಯಿಸಿ ತಾ. 14 ರಂದು ಪ್ರತಿಭಟನೆ ನಡೆಸು ತ್ತಿರುವದಾಗಿ ಅವರು ತಿಳಿಸಿದರು. ಎಲ್ಲಾ ರಾಜಕೀಯ ಪಕ್ಷಗಳು ಮತ ಬ್ಯಾಂಕ್ ರಾಜಕಾರಣಕ್ಕಾಗಿ ದಲಿತ ರನ್ನು ಬಳಸಿಕೊಳ್ಳುತ್ತಿವೆ. ಡಿಸೆಂಬರ್ ತಿಂಗಳಿನಲ್ಲಿ ಮಡಿಕೇರಿಯಲ್ಲಿ ದಲಿತರ ಬೃಹತ್ ಸಮಾವೇಶ ನಡೆಸಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷವನ್ನು ಬೆಂಬಲಿಸಬೇಕೆಂದು ನಿರ್ಧಾರ ಕೈಕೊಳ್ಳುವದಾಗಿ ಎನ್. ವೀರಭದ್ರಯ್ಯ ಹಾಗೂ ಹೆಚ್.ಎಲ್. ದಿವಾಕರ್ ಹೇಳಿದರು. ಸಂಘಟನಾ ಸಂಚಾಲಕ ಹೆಚ್.ಎ. ರವಿ, ಪ್ರಮುಖರಾದ ನಂದೀಶ್ ಕುಮಾರ್ ಹಾಗೂ ಸಾವಿತ್ರಿ ಉಪಸ್ಥಿತರಿದ್ದರು.