ಶ್ರೀಮಂಗಲ, ಜ. 18: ದ.ಕೊಡಗಿನ ಕೆ. ಬಾಡಗ ಗ್ರಾ.ಪಂ. ವ್ಯಾಪ್ತಿಯಲ್ಲಿ ಮೊದಲೇ ಉದ್ಘಾಟನೆಯಾದ ಕಾಮಗಾರಿಯನ್ನು ತಮ್ಮ ಪ್ರತಿಸ್ಪರ್ಧಿಯಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತ್ಯಲ್ಪ ಮತದಿಂದ ಸೋತಿದ್ದ ಬಿ.ಟಿ.ಪ್ರದೀಪ್ ಅವರು ಅಕಾಲಿಕವಾಗಿ ನಿಧನರಾದ ದಿನವೇ ಮತ್ತೆ ಉದ್ಘಾಟಿಸಿ, ಪಟಾಕಿ ಸಿಡಿಸಿ ಶಾಸಕ ಕೆ.ಜಿ. ಬೋಪಯ್ಯ ಅವಮಾನ ಮಾಡಿದ್ದಾರೆ ಎಂದು ಕುಟ್ಟ ತಾ.ಪಂ. ಸದಸ್ಯ ಪೊಯಿಲೇಂಗಡ ಪಲ್ವೀನ್ ಪೂಣಚ್ಚ ಕಟು ಟೀಕೆ ಮಾಡಿದ್ದಾರೆ.

ಅವರು ಕುಟ್ಟ ಸಮುದಾಯ ಭವನದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿ, ಕೆ.ಬಾಡಗ ಗ್ರಾ.ಪಂ. ವ್ಯಾಪ್ತಿಯ ಅಲಂದೋಡು-ಹೊಸಕೊಲ್ಲಿ ಗಿರಿಜನ ಕಾಲೋನಿ ರಸ್ತೆಗೆ ಪರಿಶಿಷ್ಟ ಪಂಗಡದ ವಿಶೇಷ ಯೋಜನೆ (ಟಿ.ಎಸ್.ಪಿ) ಅನುದಾನದ ಅಡಿಯಲ್ಲಿ ರೂ. 30 ಲಕ್ಷವನ್ನು ಗ್ರಾ.ಪಂ ಅಧ್ಯಕ್ಷೆ ಕೆ.ಎಂ. ಉಷಾ ಹಾಗೂ ಉಪಾಧ್ಯಕ್ಷ ಚೆಪ್ಪುಡಿರ ಡಿ. ಬೋಪಣ್ಣ ಅವರ ಕೋರಿಕೆಯ ಮೇರೆಗೆ ಜಿ.ಪಂ. ಸದಸ್ಯ ಶಿವು ಮಾದಪ್ಪ ಅವರು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸಂದರ್ಭ ಆಗಿನ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಮೂಲಕ ಶಿಪಾರಸ್ಸು ಮಾಡಿ ಅನುದಾನ ಒದಗಿಸಿದ್ದರು. ಆದರೆ ಈ ಕಾಮಗಾರಿಯನ್ನು ತಾ. 13ಕ್ಕೆ ಗ್ರಾ.ಪಂ. ಅಧ್ಯಕ್ಷೆ ಕೆ.ಎಂ.ಉಷಾ, ಜಿ.ಪಂ. ಸದಸ್ಯರಾದ ಶಿವು ಮಾದಪ್ಪ, ಬಾನಂಡ ಪ್ರಥ್ಯು ಉದ್ಘಾಟಿಸಿದ್ದರು. ಆದರೆ ಅದೇ ರಸ್ತೆಯನ್ನು ಸಜ್ಜನ ರಾಜಕಾರಣಿ ಬಿ.ಟಿ. ಪ್ರದೀಪ್ ಅವರು ಅಕಾಲಿಕವಾಗಿ ನಿಧನರಾದ ದಿನದಂದು ಅವರ ಅಂತ್ಯಕ್ರಿಯೆಗೆ ಮುಂಚೆ ಗ್ರಾ.ಪಂ.ನ ಅಧ್ಯಕ್ಷೆ ಹಾಗೂ ಸ್ಥಳೀಯ ವಾರ್ಡ್ ಸದಸ್ಯರನ್ನು ಕತ್ತಲೆಯಲ್ಲಿಟ್ಟು ಉದ್ಘಾಟನೆ ಮಾಡಿರುವದನ್ನು ತೀವ್ರವಾಗಿ ಖಂಡಿಸಿದರು.

ಗ್ರಾ.ಪಂ.ಉಪಾಧ್ಯಕ್ಷ ಚೆಪ್ಪುಡಿರ ಡಿ. ಬೋಪಣ್ಣ ಮಾತನಾಡಿ, ಸಜ್ಜನ ರಾಜಕಾರಣಿಯಾದ ಬಿ.ಟಿ. ಪ್ರದೀಪ್ ಅವರು ನಿಧನರಾದ ದಿನವೇ ಈ ಕಾಮಗಾರಿಯನ್ನು ಉದ್ಘಾಟನೆ ಮಾಡಿರುವದು ಶೋಭೆ ತರುವಂತದ್ದಲ್ಲ. ಪಕ್ಷಾತೀತವಾಗಿ ಬಿ.ಟಿ. ಪ್ರದೀಪ್ ನಿಧನಕ್ಕೆ ಜಿಲ್ಲಾದÀ್ಯಂತ ಶೋಕಸಾಗರ ಇದ್ದಾಗ ಕೆ.ಜಿ. ಬೋಪಯ್ಯ ಅವರು ಮುಂದಿನ ಚುನಾವಣೆಯ ದೃಷ್ಟಿಯಲ್ಲಿಟ್ಟುಕೊಂಡು ಶಾಸಕರ ಅನುದಾನ ಇಲ್ಲದಿದ್ದರೂ ತನ್ನದೇ ಅನುದಾನದ ಕಾಮಗಾರಿ ಎಂದು ಉದ್ಘಾಟನೆ ಮಾಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾ.ಪಂ. ಅಧ್ಯಕ್ಷೆ ಕೆ.ಎಂ. ಉಷಾ ಮಾತನಾಡಿ, ಅಲಂದೋಡು-ಹೊಸಕೊಲ್ಲಿಯಲ್ಲಿ ಕಾಂಗ್ರೆಸ್ ಪಕ್ಷದ ಜಿ.ಪಂ. ಸದಸ್ಯರ 8 ಲಕ್ಷ ಅನುದಾನದಲ್ಲಿ ನಿರ್ಮಾಣವಾಗಿರುವ ಕುಡಿಯುವ ನೀರಿನ ಕಿರು ನೀರಾವರಿ ಯೋಜನೆ ಕಾಮಗಾರಿಯನ್ನು ಸಹ ಇದೇ ದಿನ ಕೆ.ಜಿ. ಬೋಪಯ್ಯ ಉದ್ಘಾಟಿಸಿದ್ದಾರೆ. ಈ ಕಾಮಗಾರಿಯನ್ನು ಗುತ್ತಿಗೆದಾರರು ಇನ್ನು ಗ್ರಾ.ಪಂ.ಗೆ ಹಸ್ತಾಂತರಿಸಿಲ್ಲ. ಆದರೆ ರಾಜಕೀಯ ಲಾಭಕ್ಕಾಗಿ ಸ್ಥಳೀಯ ಗ್ರಾ.ಪಂ.ಗೆ ಶಿಷ್ಟಾಚಾರದಂತೆ ಯಾವದೇ ಮಾಹಿತಿ ನೀಡದೆ ಉದ್ಘಾಟನೆ ಮಾಡಿರುವದು ತಮಗೆಲ್ಲ ತೀವ್ರ ಬೇಸರ ಉಂಟುಮಾಡಿದೆ ಎಂದು ಹೇಳಿದರು.

ವೀರಾಜಪೇಟೆ ತಾಲೂಕು ಅಕ್ರಮ-ಸಕ್ರಮ ಸಮಿತಿ ಸದಸ್ಯ ಹೆಚ್.ವೈ ರಾಮಕೃಷ್ಣ ಮಾತನಾಡಿ, ಕಾಂಗ್ರೆಸ್ ಪಕ್ಷದ ಜನಪ್ರತಿನಿಧಿಗಳ ಪ್ರಯತ್ನದಿಂದ ಸರಕಾರದಿಂದ ತಂದÀ ಅನುದಾನದಲ್ಲಿ ಮಾಡಿರುವ ಕಾಮಗಾರಿಗಳನ್ನು ವಿಧಾನ ಸಭೆಯ ಮಾಜಿ ಸಭಾಧ್ಯಕ್ಷರಾಗಿದ್ದ ಶಾಸಕ ಕೆ.ಜಿ. ಬೋಪಯ್ಯ ಅವರು ಉದ್ಘಾಟನೆ ಮಾಡುತ್ತಿದ್ದಾರೆ. ಇದಲ್ಲದೆ ತಮ್ಮ ಪ್ರತಿಸ್ಪರ್ಧಿ ಬಿ.ಟಿ. ಪ್ರದೀಪ್ ಅವರು ನಿಧನರಾದ ದಿನವೇ ಅವರಿಗೆ ಅಂತಿಮ ನಮನ ಸಲ್ಲಿಸುವ ಮುಂಚೆಯೇ ಸಂಭ್ರಮಾಚರಣೆ ಮಾಡಿರುವದು ಜಿಲ್ಲೆಯ ರಾಜಕೀಯದಲ್ಲಿ ಕಪ್ಪು ಅಧ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.