ಸೋಮವಾರಪೇಟೆ, ಜ. 12: ಯಾವದೇ ಒಂದು ಗುರಿ ಸಾಧನೆಯಾಗಬೇಕಾದರೆ ಆ ನಿಟ್ಟಿನಲ್ಲಿ ಲಕ್ಷ್ಯವಹಿಸಬೇಕು. ಗುರಿಯೆಡೆ ಲಕ್ಷ್ಯವಿದ್ದಲ್ಲಿ ಸಾಧನೆ ನಿಶ್ಚಿತ ಎಂದು ವಿವೇಕಾನಂದ ಜಯಂತ್ಯೋತ್ಸವ ಸಮಿತಿ ಗೌರವಾಧ್ಯಕ್ಷ ಹಾಗೂ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ವಿದ್ಯಾರ್ಥಿ ಗಳಿಗೆ ಕಿವಿಮಾತು ಹೇಳಿದರು.

ರಾಷ್ಟ್ರೀಯ ಯುವ ದಿನ ಹಾಗೂ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಅಂಗವಾಗಿ ಇಲ್ಲಿನ ವಿವೇಕಾನಂದ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

ಭಾರತದ ಶ್ರೀಮಂತ ಸಂಸ್ಕøತಿಯ ಕೀರ್ತಿ ಪತಾಕೆಯನ್ನು ಜಗತ್ತಿನಾದ್ಯಂತ ಪಸರಿಸುವಂತೆ ಮಾಡಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಸಿಡಿಲಿನಂತಹ ತತ್ವಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳ ಬೇಕು. ವಿವೇಕಾನಂದರ ವಿಚಾರ ಧಾರೆಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಕಾರ್ಯವಾಗಬೇಕು. ದೇಶಭಕ್ತರಾಗಿ ವಿದ್ಯಾರ್ಥಿಗಳು ರೂಪುಗೊಳ್ಳಬೇಕು. ಆರೋಗ್ಯವಂತ ಯುವ ಸಮುದಾಯ ದೇಶದ ಸಂಪತ್ತಾಗಿದ್ದು, ಯುವ ಜನಾಂಗ ದೇಶ ನಿರ್ಮಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ ಸಮಿತಿ ವತಿಯಿಂದ ಅಧ್ಯಕ್ಷ ಸದಾನಂದ್ ಹಾಗೂ ಪದಾಧಿಕಾರಿಗಳು ಮಾಲಾರ್ಪಣೆ ಮಾಡಿದರು. ಜ್ಞಾನವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವಿವೇಕಾನಂದ ಪ್ರತಿಮೆಯಿಂದ ಶಾಲೆಯವರೆಗೆ ಮೆರವಣಿಗೆ ನಡೆಸಿ ವಿವೇಕಾನಂದರ ಪರ ಜಯಘೋಷ ಮೊಳಗಿಸಿದರು.

ಈ ಸಂದರ್ಭ ಜಿ.ಪಂ. ಸದಸ್ಯ ಬಿ.ಜೆ. ದೀಪಕ್, ವಕೀಲ ನಾಗೇಶ್, ಪ್ರಮುಖರಾದ ಹೃಷಿಕೇಶ್, ಎಸ್. ಮಹೇಶ್, ಜಯಣ್ಣ, ವನಮಾಲಿ ಹೆಬ್ಬಾರ್, ಎ.ಪಿ. ವೀರರಾಜು, ಯಶ್‍ವಂತ್, ಶುಭಾಕರ್, ಆಶಾ, ಶೋಭಾ, ರಾಜ್‍ಶ್ರೀ, ಬಿ.ಎಂ. ದಿನೇಶ್, ಪ್ರಕಾಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.