ಶನಿವಾರಸಂತೆ, ಜು. 19: ಶನಿವಾರಸಂತೆ ಸಮೀಪದ ಬೆಸೂರು ಪಂಚಾಯಿತಿ ವ್ಯಾಪ್ತಿಯ ನಿಲುವಾಗಿಲು ಗ್ರಾಮದ ಶ್ರೀ ಬಾಲ ತ್ರಿಪುರ ಸುಂದರಿ ದೇವಾಲಯದಲ್ಲಿ ಕೆಲವು ದಿನಗಳ ಹಿಂದೆ ಕಳ್ಳರು ಹುಂಡಿಗಳನ್ನು ಒಡೆದು ಸಾವಿರಾರು ರೂಪಾಯಿಗಳನ್ನು ಕಳವು ಮಾಡಿರುವ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಶನಿವಾರಸಂತೆ - ಕೊಡ್ಲಿಪೇಟೆ ಹೋಬಳಿಯಲ್ಲಿ ಸುಮಾರು 10 ದೇವಾಲಯಗಳಿದ್ದು, ದೇವಸ್ಥಾನಗಳ ಕಳ್ಳತನ ಮಾಡುವ ತಂಡ ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಮಾಹಿತಿ ಪೊಲೀಸ್ ಇಲಾಖೆಗೆ ಇರುವದರಿಂದ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದೇವಸ್ಥಾನಗಳ ಅಧ್ಯಕ್ಷರುಗಳ, ಅರ್ಚಕರು ಹಾಗೂ ಆಡಳಿತ ಮಂಡಳಿ ಸಭೆ ಕರೆದು ಎಚ್ಚರಿಕೆ ವಹಿಸಲು ಸಲಹೆ ಕೊಡಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಶನಿವಾರಸಂತೆ ಪೊಲೀಸ್ ಠಾಣೆಯ ಸಹಾಯಕ ಸಬ್‍ಇನ್ಸ್‍ಪೆಕ್ಟರ್ ಹೆಚ್.ಎಂ. ಗೋವಿಂದ್ ಮಾತನಾಡಿ ಅಗತ್ಯ ಸಲಹೆ ನೀಡಿದರು. ಸಿಸಿ ಟಿ.ವಿ. ವ್ಯವಸ್ಥೆ ಅಳವಡಿಸುವದು, ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡುವದು, ಬಾಗಿಲುಗಳಿಗೆ ಎಚ್ಚರಿಕೆಯ ಅಲರಾಂ ವ್ಯವಸ್ಥೆ ಅಳವಡಿಸುವಂತೆ ತಿಳಿಸಿದರು. ಎಚ್ಚರಿಕೆಯ ಸಭೆಯಲ್ಲಿ ಬಾಲ ತ್ರಿಪುರ ಸುಂದರಿ ದೇವಾಲಯದ ಅರ್ಚಕ ಶಿವಕುಮಾರ್, ಶ್ರೀ ರಾಮ ಮಂದಿರ ದೇವಾಲಯದ ಅಧ್ಯಕ್ಷ ಅರವಿಂದ್, ಶ್ರೀ ಗಣಪತಿ ದೇವಾಲಯದ ಅಧ್ಯಕ್ಷ ಎಸ್.ಸಿ. ಶರತ್, ಬನಶಂಕರಿ ದೇವಸ್ಥಾನದ ರಾಜಶೇಖರ್, ಗೌಡಳ್ಳಿ ದುರ್ಗಾ ಪರಮೇಶ್ವರಿ ದೇವಾಲಯದ ಮುತ್ತಣ್ಣ, ವಿಜಯ ವಿನಾಯಕ ದೇವಾಲಯದ ಮಧು, ಸಿದ್ದೇಶ್ವರ ದೇವಾಲಯದ ಪರಮೇಶ್, ವೀರಭದ್ರೇಶ್ವರ ದೇವಾಲಯದ ರುದ್ರಪ್ಪ, ಬಸವೇಶ್ವರ ದೇವಾಲಯದ ಚಂದ್ರಶೇಖರ್, ಚೌಡೇಶ್ವರಿ ದೇವಾಲಯದ ರಾಜಪ್ಪ ಇತರರು ಹಾಜರಿದ್ದರು. ಪೊಲೀಸ್ ಇಲಾಖೆಯ ಎ.ಎಸ್.ಐ. ಖತೀಜಾ, ಎ.ಎಸ್.ಐ. ಜನಾರ್ಧನ್, ಸಿಬ್ಬಂದಿಗಳಾದ ರಮೇಶ್, ಸಂತೋಷ್, ವಿವೇಕ್, ಶಿವಪ್ಪ, ಸಫೀರ್, ಹರೀಶ್, ಮಂಜ, ಶಶಿ, ಸವಿತಾ, ರಾಧ ಹಾಜರಿದ್ದರು.