ಕುಶಾಲನಗರ, ಜು. 19: ಉನ್ನತ ವ್ಯಾಸಂಗದ ಮೂಲಕ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಾರ್ಮಥ್ರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಕೆ.ಎಂ. ಲೋಕೇಶ್ ಹೇಳಿದರು.

ಚಿಕ್ಕಅಳುವಾರದಲ್ಲಿನ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಆಯೋಜಿಸಿದ್ದ ‘ಓಪನ್ ಹೌಸ್-ತೆರೆದ ಮನೆ 2016’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪದವಿ ಹಾಗೂ ಪದವಿಪೂರ್ವ ಹಂತದಲ್ಲಿಯೇ ಶಿಕ್ಷಣವನ್ನು ಮೊಟಕು ಗೊಳಿಸುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಅಧಿಕಗೊಂಡಿದೆ. ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿ ಗಳಿಗೆ ಒದಗಿಸುತ್ತಿರುವ ಸೌಲಭ್ಯಗಳ ಹಾಗೂ ಶೈಕ್ಷಣಿಕ ವಿಷಯಗಳ ಸದುಪಯೋಗಗಳ ಕುರಿತು ಮಾಹಿತಿ ಒದಗಿಸುವ ಮೂಲಕ ಉನ್ನತ ವ್ಯಾಸಂಗದತ್ತ ಆಕರ್ಷಿಸುವ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವದು ಈ ಕಾರ್ಯ ಕ್ರಮದ ಉದ್ದೇಶವಾಗಿದೆ ಎಂದರು.

ಈ ನಿಟ್ಟಿನಲ್ಲಿ ಈ ಮಾದರಿಯ ಓಪನ್ ಹೌಸ್ ಕಾರ್ಯಕ್ರಮವನ್ನು ಕೇಂದ್ರದಲ್ಲಿ ಆಯೋಜಿಸಲಾಗಿದೆ ಎಂದರು. ವಿದ್ಯಾರ್ಥಿಗಳು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮುಕ್ತ ಸಮಾಲೋಚನೆ ಮೂಲಕ ಸ್ನಾತಕೋತ್ತರ ವಿಷಯಗಳ ಕುರಿತು ಸಮಗ್ರ ಮಾಹಿತಿ ಪಡೆದು ಕೊಳ್ಳಬೇಕೆಂದು ಅವರು ಕರೆ ನೀಡಿದರು.

ಸ್ನಾತಕೋತ್ತರ ಕೇಂದ್ರದ ಪ್ರಬಾರ ನಿರ್ದೇಶಕ ಪ್ರೊ. ವಿ. ರವೀಂದ್ರಾಚಾರಿ ಮಾತನಾಡಿ, ಕೇಂದ್ರದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬರ ಸಹಕಾರ ಅಮೂಲ್ಯವಾಗಿದ್ದು, ಸ್ನಾತಕೋತ್ತರ ಕೇಂದ್ರ ಪ್ರತ್ಯೇಕ ವಿಶ್ವವಿದ್ಯಾನಿಲಯವಾ ಗುವ ಸಾಧ್ಯತೆಯ ಕುರಿತಾಗಿ ಅಭಿಪ್ರಾಯ ಹಂಚಿಕೊಂಡರು.

ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವರಾಜ್, ಕೇಂದ್ರದ ಉಪನ್ಯಾಸಕ ಡಾ. ಕೆ.ಎಸ್. ಚಂದ್ರಶೇಖರಯ್ಯ, ಅಭಿವೃದ್ಧಿ ಸಲಹಾ ಸಮಿತಿ ಸದಸ್ಯ ಪ್ರೇಮ್‍ಕುಮಾರ್ ಸೇರಿದಂತೆ ಉಪನ್ಯಾಸಕ ವೃಂದದವರು ಹಾಗೂ ವಿದ್ಯಾರ್ಥಿಗಳು ಇದ್ದರು.

ಕೇಂದ್ರದ ಆವರಣದಲ್ಲಿ ಸ್ನಾತಕೋತ್ತರ ವಿಷಯಗಳ ಹಾಗೂ ಕೇಂದ್ರದಲ್ಲಿನ ಸೌಲಭ್ಯಗಳ ಕುರಿತಾಗಿ ದಾಖಲಾತಿಗೆ ಆಗಮಿಸಿದ್ದ ನೂತನ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಮಾಹಿತಿ ಒದಗಿಸಲಾಯಿತು.

ಡಾ. ಕೆ.ಎಸ್. ಚಂದ್ರಶೇಖರಯ್ಯ ಸ್ವಾಗತಿಸಿದರು, ಉಕ್ರಪ್ಪ ನಾಯಕ್ ವಂದಿಸಿದರು.