ವರದಿ: ರಾಜು ರೈ

ಸುಂಟಿಕೊಪ್ಪ, ಜೂ. 11: ದಶಕಗಳಿಂದ ತೀರಾ ಹಾಳಾಗಿ ಮಣ್ಣು ರಸ್ತೆಯಾಗಿ ಮಾರ್ಪಟ್ಟಿರುವ ಕೊಡಗರಹಳ್ಳಿ, ಕಂಬಿಬಾಣೆ, ಚಿಕ್ಲಿಹೊಳೆ ರಸ್ತೆಗೆ ಕಾಯಕಲ್ಪ ಯಾವಾಗ ಎಂದು ಈ ವಿಭಾಗದ ಗ್ರಾಮಸ್ಥರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಸುಂಟಿಕೊಪ್ಪ ಹೋಬಳಿಯ ಅನೇಕ ಗ್ರಾಮಗಳಿಗೆ ಸಂಪರ್ಕ ಸೇತುವೆಯಾದ ಕೊಡಗರಹಳ್ಳಿ-ಕಂಬಿಬಾಣೆ-ಚಿಕ್ಲಿಹೊಳೆಗೆ ಸೇರುವ 9 ಕಿ.ಮೀ. ರಸ್ತೆ ಹದಗೆಟ್ಟು ಹೋಗಿದೆ. 2009 ರ ಡಿಸೆಂಬರ್‍ನಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಕೊಡಗರಹಳ್ಳಿ ಉಪ್ಪುತೋಡಿನ ಪ್ರಗತಿಪರ ಸಾವಯವ ಕೃಷಿಕ ಮಂಜುನಾಥ ರೈ ಅವರ ಮನೆಗೆ ಸಾವಯವ ಕೃಷಿಗೆ ಸಂಬಂಧಿಸಿದಂತೆ ರೈತರ ಸಂವಾದ ಕಾರ್ಯಕ್ರಮಕ್ಕೆ ಆಗಮಿಸಿದಾಗ ಕಾವೇರಿ ನೀರಾವರಿ ನಿಗಮದ ವತಿಯಿಂದ ಈ ರಸ್ತೆಗೆ ತರಾತುರಿಯಲ್ಲಿ ಡಾಮರೀಕರಣ ಮಾಡಲಾಗಿತ್ತು. ಕಳಪೆ ಕಾಮಗಾರಿಯಿಂದ ನಿರ್ವಹಿಸಿದ್ದ ರಸ್ತೆ ಕೆಲವೇ ದಿನಗಳಲ್ಲಿ ಗುಂಡಿ ಬೀಳಲು ತೊಡಗಿ ಸಂಪೂರ್ಣ ಹಾಳಾಯಿತು.

ಆನಂತರ ಈ ರಸ್ತೆ ದುರಸ್ತಿಗಾಗಿ ಗ್ರಾಮಸ್ಥರು, ಶಾಲಾ ವಿದ್ಯಾರ್ಥಿಗಳು ಹಲವಾರು ಬಾರಿ ಪ್ರತಿಭಟನೆ ನಡೆಸಿದ್ದೂ ಇದೆ. ಆದರೆ ಅಧಿಕಾರಿಗಳ, ಜನಪ್ರತಿನಿಧಿಗಳ ಪ್ರತಿಷ್ಠೆಯಿಂದ ಕೊಡಗರಹಳ್ಳಿ, ಕಂಬಿಬಾಣೆ ರಸ್ತೆಗೆ ಇನ್ನೂ ಕಾಯಕಲ್ಪ ಸಿಕ್ಕಿಲ್ಲ.

ಕೊಡಗರಹಳ್ಳಿಯಿಂದ ಚಿಕ್ಲಿಹೊಳೆ ಯವರೆಗಿನ 9 ಕಿ.ಮೀ ಒಳಗೆ 5 ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಚಿಕ್ಲಿಹೊಳೆ ಕಿರಿಯ ಸರಕಾರಿ ಪ್ರಾಥಮಿಕ ಶಾಲೆ, ಆತ್ತೂರು-ನಲ್ಲೂರು ಹಿರಿಯ ಸರಕಾರಿ ಪ್ರಾಥಮಿಕ ಶಾಲೆ, ಕೊಡಗರಹಳ್ಳಿ ಹಿರಿಯ ಪ್ರಾಥಮಿಕ ಶಾಲೆ, ಸುಂಟಿಕೊಪ್ಪ ನಾಡು ಕೊಡಗರಹಳ್ಳಿ ಅನುದಾನ ರಹಿತ ಪ್ರೌಢಶಾಲೆ, ಕೊಡಗರಹಳ್ಳಿ ಶಾಂತಿನಿಕೇತನ ಪ್ರೌಢಶಾಲೆ ಈ ವ್ಯಾಪ್ತಿಗೆ ಬರುತ್ತದೆ. ಪ್ರತಿನಿತ್ಯ ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಈ ರಸ್ತೆಗಾಗಿ ಹಾದು ಹೋಗಬೇಕಾಗಿದೆ. ಖಾಸಗಿ ವಾಹನಗಳು, ಆಟೋ ರಿಕ್ಷಾದವರು ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಸಂಚರಿಸುತ್ತಿದ್ದಾರೆ. ಆದರೂ ಸಂಬಂಧಿಸಿದವರು ಈ ರಸ್ತೆಯ ಡಾಮರೀಕರಣಕ್ಕೆ ಮುಂದಾಗ ದಿರುವದು ವಿಷಾದನೀಯ.

ರಸ್ತೆ ಕೆಸರುಗದ್ದೆ

ಮಳೆಗಾಲದಲ್ಲಿ ಕೊಡಗರಹಳ್ಳಿ ಕಂಬಿಬಾಣೆ ರಸ್ತೆ ಅಕ್ಷರಶಃ ಕೆಸರುಗದ್ದೆಯಾಗಿ ಮಾರ್ಪಡುತ್ತದೆ. ಅಲ್ಲದೆ ಶಾಲಾ ಮಕ್ಕಳ ಪಾಡು ಶೋಚನೀಯ ವಾಗುತ್ತದೆ. ಸಾರ್ವಜನಿಕರು ಕೆಸರು ಗದ್ದೆಯಾದ ರಸ್ತೆಯಲ್ಲಿ ನಡೆದಾಡಲು ಹರಸಾಹಸ ಪಡುವಂತಾಗಿದೆ. ಕೊಡಗರಹಳ್ಳಿ ನಾಡು ಪ್ರೌಢಶಾಲೆಯ ಸುವರ್ಣ ಮಹೋತ್ಸವಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಗ್ರಾಮಸ್ಥರು, ಶಾಲೆಯ ಆಡಳಿತ ಮಂಡಳಿಯವರು, ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯವರು ಮನವಿ ಸಲ್ಲಿಸಿ ರಸ್ತೆ ಡಾಮರೀಕರಣಕ್ಕೆ ಆಗ್ರಹಿಸಿದ್ದರು. ದಿನೇಶ್ ಗುಂಡೂರಾವ್ ಅವರು ನೀರಾವರಿ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಅವರನ್ನು ಸ್ಥಳಕ್ಕೆ ಕರೆಸಿಕೊಂಡು ರಸ್ತೆ ಡಾಮರೀಕರಣದ ಕ್ರಿಯಾ ಯೋಜನೆ ತಯಾರಿಸಿ ಕೂಡಲೇ ಮಾಹಿತಿ ನೀಡಬೇಕು. ‘ತಾನು ಬೆಂಗಳೂರಿನಲ್ಲಿ ಸಂಬಂಧಿಸಿದ ಸಚಿವರೊಂದಿಗೆ, ನೀರಾವರಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯೊಂದಿಗೆ ಚರ್ಚಿಸು ತ್ತೇನೆ ಆದಷ್ಟು ಬೇಗ ರಸ್ತೆ ಡಾಮರೀ ಕರಣ ಮಾಡಿಸುತ್ತೇನೆ’ ಎಂದೂ ಸಭೆಗೆ ತಿಳಿಸಿದ್ದರು. ಆದರೆ ಮಳೆಗಾಲ ಆರಂಭವಾಗಿದೆ, ರಸ್ತೆ ಕಾಮಗಾರಿ ಇನ್ನೂ ನಡೆದಿಲ್ಲ. ಶಾಸಕರು ಸಹ ಈ ರಸ್ತೆ ಬಗೆ ಲೋಕಾಯುಕ್ತದಲ್ಲಿ ಮೊಕದ್ದಮೆ ದಾಖಲಾಗಿರುವದರಿಂದ ಕಾಮಗಾರಿ ವಿಳಂಬವಾಗಲು ಕಾರಣವಾಗಿದೆ. ಈ ಬಗ್ಗೆ ಸರಕಾರದೊಂದಿಗೆ ವ್ಯವಹರಿಸಿ ರಸ್ತೆ ಡಾಮರೀಕರಣಕ್ಕೆ ಪ್ರಯತ್ನಿಸುವ ದಾಗಿ ಆ ಸಭೆಯಲ್ಲಿ ತಿಳಿಸಿದ್ದರು. ಆದರೂ ರಸ್ತೆ ಆಯೋಮಯವಾಗಿದೆ.

ರಸ್ತೆಯಲ್ಲಿ ಹೆರಿಗೆ

ಕಂಬಿಬಾಣೆ, ಚಿಕ್ಲಿಹೊಳೆ ಕಡೆಯಿಂದ ಆಟೋ ರಿಕ್ಷಾದಲ್ಲಿ ಹಾಗೂ ಕಾರಿನಲ್ಲಿ ಗರ್ಭಿಣಿ ಮಹಿಳೆ ಆಸ್ಪತ್ರೆಗೆ ಬರುತ್ತಿದ್ದಾಗ ದಾರಿ ಮಧ್ಯೆ ಹೆರಿಗೆ ಆದ 2 ಘಟನೆಯೂ ಈ ರಸ್ತೆಯಲ್ಲಿ ನಡೆದಿದೆ. ಸುಂಟಿಕೊಪ್ಪ ಹೋಬಳಿಯ ಪ್ರಮುಖ ಸಂಪರ್ಕ ರಸ್ತೆ ಕೊಡಗರಹಳ್ಳಿ, ಕಂಬಿಬಾಣೆ, ಚಿಕ್ಲಿಹೊಳೆಗೆ ಯಾವಾಗ ಹೊಸ ರೂಪ ಬರುತ್ತದೆ ಎಂದು ಗ್ರಾಮಸ್ಥರು ನಿರೀಕ್ಷಿಸುತ್ತಿದ್ದಾರೆ. ಜನಪ್ರತಿನಿಧಿಗಳು ಅಧಿಕಾರಿಗಳು ಈ ಬಗ್ಗೆ ನಿಗಾವಹಿಸಲಿ ಎಂದು ಆಗ್ರಹಿಸಿದ್ದಾರೆ.