ಕುಶಾಲನಗರ, ಡಿ. 25: ಒಕ್ಕಲಿಗರ ಯುವ ವೇದಿಕೆ ಆಶ್ರಯದಲ್ಲಿ ತಾ. 29 ರಂದು ಪಟ್ಟಣದಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆಯನ್ನು ಆಚರಿಸಲಾಗುವದು ಎಂದು ವೇದಿಕೆ ಅಧ್ಯಕ್ಷ ಎಂ.ಡಿ. ಕೃಷ್ಣಪ್ಪ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ವೇದಿಕೆಯ ಕಚೇರಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕಾರ್ಯಕ್ರಮ ನಡೆಯುವ ರೈತ ಸಹಕಾರ ಭವನದಿಂದ ಅಂದು ಬೆಳಿಗ್ಗೆ 9 ಗಂಟೆಗೆ ಮೆರವಣಿಗೆ ಆಯೋಜಿಸಲಾಗಿದ್ದು, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದ ತನಕ ಸಾಗಿ, ಮಡಿಕೇರಿ ರಸ್ತೆ ಮುಖಾಂತರ ಪುನಃ ರೈತ ಭವನದ ಸಭಾಂಗಣಕ್ಕೆ ಸಾಗಲಿದೆ. ಡೊಳ್ಳುಕುಣಿತ, ಕೀಲುಗೊಂಬೆ, ವೀರಗಾಸೆ ಸೇರಿದಂತೆ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.

ನಂತರ ನಡೆಯುವ ಸಭಾ ಕಾರ್ಯಕ್ರಮವನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕೊಡಗು ಮತ್ತು ಹಾಸನ ಶಾಖಾ ಮಠದ ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಇವರ ಜೊತೆಗೆ ವಿವಿಧ ಮಠಾಧೀಶರು ಕೂಡ ಆಗಮಿಸಲಿದ್ದಾರೆ.

ಮೈಸೂರು ವಿಜಯನಗರದಲ್ಲಿರುವ ಸರ್ಕಾರಿ ಮಹಿಳಾ ಕಾಲೇಜು ಸಹ ಪ್ರಾಧ್ಯಾಪಕ ಡಾ. ಪಿ. ಬೆಟ್ಟೇಗೌಡ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಲಿದ್ದಾರೆ.

ಸಭಾ ಕಾರ್ಯಕ್ರಮದ ನಂತರ ಜನಾಂಗದ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.

ಈ ತಿಂಗಳ 25 ರಂದು ಸಮುದಾಯದ ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗೆ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಅಂದು ಬೆಳಿಗ್ಗೆ 9 ಗಂಟೆಗೆ ಕುಶಾಲನಗರದ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಕ್ರೀಡಾಕೂಟ ನಡೆಯುವದು. ವಿಜೇತರಾದವರಿಗೆ ಬಹುಮಾನವನ್ನು ಸಮಾರಂಭದಲ್ಲಿ ವಿತರಿಸಲಾಗುತ್ತದೆ ಎಂದು ಕೃಷ್ಣಪ್ಪ ಹೇಳಿದರು.

ಉಪಾಧ್ಯಕ್ಷ ವಿ.ಎಸ್. ರಾಜಶೇಖರ್, ಕಾರ್ಯದರ್ಶಿ ಎಂ.ಸಿ. ಅನಿಲ್, ಸಹಕಾರ್ಯದರ್ಶಿ ವಿ.ಬಿ. ಜಯರಾಜ್, ಖಜಾಂಚಿ ಎಂ.ಕೆ. ಮಂಜುನಾಥ್, ಕಿರಣ್, ಎಂ.ಡಿ. ರಮೇಶ್, ಕೆ.ಕೆ. ಹೇಮ ಕುಮಾರ್, ಗಿರೀಶ್ ಗೌಡ, ಎಂ.ಹೆಚ್. ಯಶ್ವಂತ್, ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಎಸ್. ರಾಜೇಶ್ ಗೋಷ್ಠಿಯಲ್ಲಿ ಇದ್ದರು.