ಚೆಟ್ಟಳ್ಳಿ, ಜೂ. 18: 2016-17ನೇ ಸಾಲಿನ ತಾಲೂಕು ಪಂಚಾಯಿತಿ ಅನುದಾನದ ಕಾಮಗಾರಿಗೆ ಚೆಟ್ಟಳ್ಳಿ-ಕೆದಕಲ್ ಕ್ಷೇತ್ರದ ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಭೂಮಿ ಪೂಜೆ ನೆರವೇರಿಸುವ ಮೂಲಕ ರಸ್ತೆ ಹಾಗೂ ತಡೆಗೋಡೆ ಕಾಮಗಾರಿಗೆ ಚಾಲನೆ ನೀಡಿದರು.

ಕೂಡ್ಲೂರ್-ಚೆಟ್ಟಳ್ಳಿಯ ಗೌರಿಕೊಲ್ಲಿ ಶಾಲೆಯ ಕಡೆಗಿನ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಮನೆಗಳಿಗೆ ಹೋಗುವ ರಸ್ತೆಗಳಿಗೆ ರೂ.2,83,000 ಹಾಗೂ ಈರಳೆವಳಮುಡಿ ಗ್ರಾಮದ ಸಾರ್ವಜನಿಕ ರಸ್ತೆ ಬದಿಯ ತಡೆಗೋಡೆಗೆ ರೂ. 3 ಲಕ್ಷ ಹಾಗೂ ನೆಲ್ಲಿಹಡ್ಲು ಅಂಗವಿಕಲ ರಘು ಅವರ ಮನೆಯ ಪಕ್ಕದ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.

ಈ ಹಿಂದೆ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದಾಗ ನೀರಿನ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಹಲವು ಸಾರ್ವಜನಿಕ ಕೆಲಸ ಕಾರ್ಯವನ್ನು ಮಾಡಿದ್ದು, ಅದೇ ರೀತಿ ತಾಲೂಕು ಪಂಚಾಯಿತಿಗೆ ಸ್ಪರ್ಧಿಸುವಾಗ ನೀಡಿದ ಭರವಸೆಯಂತೆ ಹಲವು ವರ್ಷಗಳ ಜನರ ಬೇಡಿಕೆಯಾದ ರಸ್ತೆ ಕಾಮಗಾರಿಯನ್ನು ಮಾಡುತ್ತಿರುವದಾಗಿ ಮಣಿ ಉತ್ತಪ್ಪ ನುಡಿದರು. ಸಾರ್ವಜನಿಕ ರಸ್ತೆ ನಿರ್ಮಿಸಲು ಜಾಗ ಬಿಟ್ಟುಕೊಟ್ಟ ಚಂದ್ರ ಅವರಿಗೆ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಚೆಟ್ಟಳ್ಳಿ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಕಂಠಿ ಕಾರ್ಯಪ್ಪ, ಕೂಡ್ಲೂರು ಗ್ರಾಮ ಪಂಚಾಯಿತಿ ಸದಸ್ಯ ರವಿ, ದೇವಯಾನಿ, ಸೀತಮ್ಮ ಧನು ದೇವಯ್ಯ ಎನ್.ಡಿ. ನಾಣಯ್ಯ, ಕಾಫಿ ಬೆಳೆಗಾರರಾದ ಐಚೆಟ್ಟಿರ ಪ್ರಮೋದ್ ಪೂರ್ಣಚ್ಚ, ಐಚೆಟ್ಟಿರ ಅಶೋಕ್, ಅಂಬುದಾಸ್ ಹಾಗೂ ಗ್ರಾಮಸ್ಥರು ಹಾಜರಿದ್ದರು.