ಕುಶಾಲನಗರ, ಜ. 10: ಗ್ರಾಮ ಸಾಹಿತ್ಯವನ್ನು ರಕ್ಷಣೆ ಮಾಡುವದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಕೊಡಗು ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಎಸ್.ಸಿ. ರಾಜಶೇಖರ್ ಕರೆ ನೀಡಿದ್ದಾರೆ. ಅವರು ಕುಶಾಲನಗರದ ರೈತ ಸಹಕಾರ ಭವನದ ಆರ್. ಗುಂಡುರಾವ್ ಸಭಾಂಗಣದಲ್ಲಿ ನಡೆದ ಸಮ್ಮೇಳನ ಉದ್ಘಾಟಿಸಿ ತಮ್ಮ ಭಾಷಣದಲ್ಲಿ, ಜನಪದ ಗೀತೆಗಳು ಗ್ರಾಮದ ಜೀವಾಳವಾಗಿದೆ. ಸಹಜ, ಸರಳ ಮತ್ತು ಗ್ರಾಮ ಜೀವನವನ್ನು ಚಿತ್ರಿಸುವ ಗೀತೆಗಳ ಬಗ್ಗೆ ಯುವಪೀಳಿಗೆಗೆ ಅರಿವು ಮೂಡಿಸಬೇಕಾಗಿದೆ. ಈ ಮೂಲಕ ಕಾಣುವ ತವರಿನ ಬಾಂಧವ್ಯ, ತಂದೆ-ತಾಯಿರ ಪ್ರೀತಿ-ವಾತ್ಸಲ್ಯ, ಸೋದರ-ಸಹೋದರಿಯರ ಮಧುರ ಬಾಂಧವ್ಯದ ಬಗ್ಗೆ ನೆನಪು ಮಾಡಬಹುದು.

ಹಿಂದಿನ ಕಾಲದಲ್ಲಿ ನೆರೆಮನೆಯೊಂದಿಗೆ ಇದ್ದ ಬಾಂಧವ್ಯಗಳ ಬಗ್ಗೆ ಮತ್ತಿತರ ಚಟುವಟಿಕೆಗಳ ಬಗ್ಗೆ ನೆನಪಿಸಬೇಕಾಗಿದೆ. ಇದರೊಂದಿಗೆ ಕನ್ನಡ ಭಾಷೆಯೊಂದಿಗೆ ಇತರೆ ಭಾಷೆಗಳಿಗೂ ಬೇಧಭಾವ ಕಲ್ಪಿಸದೆ ಭಾಷೆಗಳ ಮೇಲೆ ಯಾವದೇ ಅಧಿಕಾರ ಚಲಾಯಿಸಬಾರದು. ಮಾತೃ ಭಾಷೆಗೆ ಗೌರವ ಕೊಡುವದರೊಂದಿಗೆ ಕನ್ನಡಕ್ಕೆ ಆದ್ಯತೆ ಕಲ್ಪಿಸಿದಲ್ಲಿ ಭಾಷೆಯ ಉಳಿವು ಸಾಧ್ಯ ಎಂದರು.

ಕನ್ನಡ ಮಾತೃ ಭಾಷೆಯಲ್ಲದವರು ಕನ್ನಡ ನಾಡಿಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ ಎಂದ ಸಮ್ಮೇಳನಾಧ್ಯಕ್ಷರು, ಮರಾಠಿ ಭಾಷೆಯಾದ ಕವಿ ಬೇಂದ್ರೆಯವರು ಕನ್ನಡ ಬಗ್ಗೆ ಉತ್ಕøಷ್ಟ ಸಾಹಿತ್ಯವನ್ನು ರಚಿಸಿ ಕನ್ನಡ ಸೇವೆ ಮಾಡಿದ್ದಾರೆ.

ಅದೇ ರೀತಿ ಜಿ.ಪಿ.ರಾಜರತ್ನಂ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಟಿ.ಪಿ. ಕೈಲಾಶಂ ಮನೆ ಭಾಷೆ ತಮಿಳು ಆಗಿದ್ದರೂ ಸಹ ಕನ್ನಡದಲ್ಲಿ ಉತ್ತಮ ಸಾಹಿತ್ಯ ರಚನೆ ಮಾಡಿದ್ದಾರೆ. ಅದೇ ರೀತಿ ಕೆ.ಎಸ್. ನಿಸಾರ್ ಅಹಮ್ಮದ್ ಉರ್ದು ಮನೆ ಭಾಷೆಯಾಗಿದ್ದರೂ ಕನ್ನಡದಲ್ಲಿ ಪಾಂಡಿತ್ಯವನ್ನು ಹೊಂದಿದ ಸಾಹಿತ್ಯ ರಚನೆಗೆ ಕಾರಣರಾಗಿದ್ದಾರೆ ಎಂದರು.

ಕನ್ನಡ ಮನೆ ಭಾಷೆಯಾಗಿದ್ದವರು ಇಂಗ್ಲೀಷ್, ಕನ್ನಡ, ಸಂಸ್ಕøತ ಭಾಷೆಗಳಲ್ಲಿ ಪಾಂಡಿತ್ಯವನ್ನು ಪಡೆದವರಿದ್ದಾರೆ ಎಂದ ಅಧ್ಯಕ್ಷರು ಅವರುಗಳಲ್ಲಿ ಗೋಪಾಲಕೃಷ್ಣ ಅಡಿಗರು, ಎಸ್.ವಿ. ರಂಗಣ್ಣ, ಎಸ್.ಅನಂತನಾರಾಯಣ, ವಿ.ಕೃ. ಗೋಕಾಕ್, ಯು.ಆರ್. ಅನಂತಮೂರ್ತಿ ಅಂತವರೂ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ತಮ್ಮ ಭಾಷಣದಲ್ಲಿ ಮಾಹಿತಿ ಒದಗಿಸಿದರು.

ಅರಮೇರಿ ಶಾಂತಮಲ್ಲಿಕಾರ್ಜುನ ಸಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಕನ್ನಡ ಭಾಷೆ ಉಳಿದಿರುವದು ಸಾಹಿತ್ಯ ಸಂಘಟನೆಗಳ ಮೂಲಕ ಪರಿಷತ್ತಿನ ಕಾರ್ಯ ಚಟುವಟಿಕೆಗಳಿಂದ. ಗ್ರಾಮಾಂತರ ಪ್ರದೇಶದಲ್ಲಿ ಭದ್ರವಾಗಿ ನೆಲೆಯೂರಿದೆ. ಆದರೆ ನಗರ ಪ್ರದೇಶಗಳಲ್ಲಿ ಬೇರೆ ಬೇರೆ ಭಾಷೆ, ಸಂಸ್ಕøತಿಗಳ ದಾಳಿಯಿಂದ ಕನ್ನಡ ನಲುಗುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್, ವಿಧಾನ ಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ರೇಷ್ಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್, ಅರಣ್ಯ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯರಾದ ಕೆ.ಪಿ. ಚಂದ್ರಕಲಾ, ಕುಮುದಾ ಧರ್ಮಪ್ಪ, ಶ್ರೀನಿವಾಸ್, ಲತೀಫ್, ಸುನೀತಾ, ಮಂಜುಳಾ, ಪ.ಪಂ. ಅಧ್ಯಕ್ಷ ಚರಣ್, ಕಾಂಗ್ರೆಸ್ ಮುಖಂಡರಾದ ಮಿಟ್ಟುಚಂಗಪ್ಪ, ಅರುಣ್ ಮಾಚಯ್ಯ, ವಿ.ಪಿ. ಶಶಿಧರ್, ಎಸ್.ಎನ್. ನರಸಿಂಹಮೂರ್ತಿ, ಜಿಲ್ಲಾ, ತಾಲೂಕು, ಹೋಬಳಿ ಮಟ್ಟದ ಕಸಾಪ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭ ಪ್ರಮುಖ ಕೃತಿಗಳನ್ನು ಸಮ್ಮೇಳನಾಧ್ಯಕ್ಷರ ಸಮ್ಮುಖದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಮತ್ತಿತರ ಗಣ್ಯರು ಬಿಡುಗಡೆಗೊಳಿಸಿದರು.