ಕುಶಾಲನಗರ, ಜು. 12: ಗಣಪತಿ ಆತ್ಮಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ತನ್ನ ಸೊಸೆಗೆ ಅವಮಾನಕಾರಿಯಾಗುವಂತಹ ಹೇಳಿಕೆ ನೀಡಿದ ಗೃಹಮಂತ್ರಿ ಪರಮೇಶ್ವರ್ ಅವರ ವರ್ತನೆಗೆ ಗಣಪತಿ ಅವರ ತಂದೆ ಎಂ.ಕೆ.ಕುಶಾಲಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಂಗಸಮುದ್ರದ ತಮ್ಮ ನಿವಾಸದಲ್ಲಿ ಇಂದು ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣಪತಿ ಸಾವಿಗೆ ಅವರ ಪತ್ನಿಯ ಕಿರುಕುಳ ಕಾರಣ ಎಂಬ ಗೃಹ ಸಚಿವರ ಹೇಳಿಕೆಯಿಂದ ತಮ್ಮ ಕುಟುಂಬಕ್ಕೆ ಅತೀವ ನೋವಾಗಿದೆ ಎಂದು ಹೇಳಿದರು. ತಾ. 7 ರಂದು ಮಡಿಕೇರಿಯ ಲಾಡ್ಜ್‍ನಲ್ಲಿ ಗಣಪತಿ ಆತ್ಮಹತ್ಯೆ ಮಾಡಿಕೊಂಡ ಸಂದರ್ಭ ಮಾಹಿತಿ ತಿಳಿದು ತೆರಳಿದ ತನಗೆ ತಕ್ಷಣ ಘಟನಾ ಸ್ಥಳಕ್ಕೆ ತೆರಳಲು ಪೊಲೀಸರು ಅನುವು ಮಾಡದೆ ಹೇಳಿಕೆ ಪಡೆದ ನಂತರವಷ್ಟೇ ಮೃತದೇಹ ತೋರಿಸಿದ್ದಾರೆ. ಈ ಸಂದರ್ಭ ಕೊಠಡಿಯಲ್ಲಿ ಒಂದು ಕೀ ಮತ್ತು ಪತ್ರ ಕಂಡುಬಂದಿದ್ದು ನಂತರ ಸ್ಥಳ ಮಹಜರು ನಡೆಸಿ ಪೊಲೀಸರು ವಶಪಡಿಸಿಕೊಂಡ ವಸ್ತುಗಳನ್ನು ತೋರಿಸಿರುವದಿಲ್ಲ. ಗೊಂದಲದಲ್ಲಿ ನೀಡಿದ ಹೇಳಿಕೆಯನ್ನು ಆಧರಿಸಿ ಪೊಲೀಸರು ಕ್ರಮಕೈಗೊಳ್ಳುವದು ಸರಿಯಲ್ಲ. ತಮ್ಮ ಕುಟುಂಬ ಸದಸ್ಯರು ಕುಶಾಲನಗರ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಎಫ್‍ಐಆರ್ ಮಾಡದ ಪೊಲೀಸರಿಂದ ನ್ಯಾಯ ದೊರಕುವದು ಕಷ್ಟ ಸಾಧ್ಯ ಎಂದಿರುವ ಅವರು, ಇದೀಗ ಸಿಐಡಿ ತನಿಖೆ ಮೇಲೆ ನಮಗೆ ವಿಶ್ವಾಸ ಕ್ಷೀಣಿಸುತ್ತಿದೆ ಎಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಆಗಬೇಕಾಗಿದೆ ಎಂದು ಕುಟುಂಬ ಸದಸ್ಯರು ಒತ್ತಾಯಿಸಿದ್ದಾರೆ. ಗಣಪತಿ ಅವರು ಸಾವಿಗೆ ಮುನ್ನ ಮಾಧ್ಯಮದಲ್ಲಿ ನೀಡಿರುವ ಹೇಳಿಕೆಯನ್ನು ಆಧರಿಸಿ ಸಾವಿಗೆ ಕಾರಣಕರ್ತರಾದ ಮೂರು ಮಂದಿ ಮೇಲೆ ಕಾನೂನು ಕ್ರಮಕೈಗೊಳ್ಳ ಬೇಕೆಂದು ಒತ್ತಾಯಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನವ ಹಕ್ಕುಗಳ ಆಯೋಗಕ್ಕೆ ಈಗಾಗಲೇ ದೂರು ನೀಡಲಾಗಿದ್ದು ಸದನದಲ್ಲಿ ಗೃಹ ಸಚಿವರು ಅವಮಾನಕಾರಿ ಹೇಳಿಕೆ ನೀಡಿರುವ ಹಿನ್ನಲೆಯಲ್ಲಿ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಲು ನಿರ್ಧರಿಸಲಾಗುವದು ಎಂದು ಅವರು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಗಣಪತಿ ಅವರ ತಾಯಿ ಜಾಜಿ ಗಣಪತಿ, ಪತ್ನಿ ಪಾವನ, ಹಿರಿಯ ಪುತ್ರ ನೇಹಲ್ ಇದ್ದರು.