ಮಡಿಕೇರಿ, ಆ. 30: ಕೊಡಗಿನಲ್ಲಿ ಕರಿಮೆಣಸನ್ನು ಆರ್‍ಎಂಸಿಯಿಂದ ಮುಕ್ತಗೊಳಿಸಬೇಕೆಂದು ಜಿಲ್ಲೆಯ ಸಹಕಾರ ಸಂಘಗಳ ಅಧ್ಯಕ್ಷರುಗಳು ನಿರ್ಣಯ ಕೈಗೊಂಡಿದ್ದಾರೆ. ಇಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಹಾಗೂ ಜಿಲ್ಲಾ ಸಹಕಾರ ಯೂನಿಯನ್ ಸಂಯುಕ್ತಾಶ್ರಯದಲ್ಲಿ ವ್ಯಾಲಿವ್ಯೂ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಸಹಕಾರಿ ಸಂಘಗಳ ಅಧ್ಯಕ್ಷರುಗಳಿಗೆ ರಾಜ್ಯಮಟ್ಟದ ತರಬೇತಿ ಕಾರ್ಯಕ್ರಮದಲ್ಲಿ ಕರಿಮೆಣಸು ಬೆಳೆ ಹಾಗೂ ಕಾಫಿ ಕಾಯ್ದೆಯ ಬಗ್ಗೆ ಕೆಲ ಹೊತ್ತು ಚರ್ಚೆ ನಡೆಯಿತು.ಕೊಡಗು ಜಿಲ್ಲೆಯಲ್ಲಿ ಕರಿಮೆಣಸು ಬೆಳೆ ಆರ್‍ಎಂಸಿ ವ್ಯವಸ್ಥೆಗೊಳಪಟ್ಟಿರುವ ಹಿನ್ನೆಲೆ ಬೆಳೆಗಾರರಿಗೆ ಅದರಿಂದ ಸೂಕ್ತ ಲಾಭ ಸಿಗುತ್ತಿಲ್ಲ. ಆದ್ದರಿಂದ ಕರಿಮೆಣಸನ್ನು ಆರ್‍ಎಂಸಿಯಿಂದ ಮುಕ್ತಗೊಳಿಸ ಬೇಕು. ಈ ದಿಸೆಯಲ್ಲಿ ಸಂಬಂಧಿಸಿ ದವರಿಗೆ ಶಿಫಾರಸ್ಸು ಮಾಡಲು ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.

ಕಾಫಿ ಕಾಯ್ದೆ ರಚನೆಗೆ ಸಂಬಂಧಿಸಿದಂತೆ ಕೆಲ ಬೇಡಿಕೆಗಳನ್ನು ಮುಂದಿಡಲು ಸಭೆ ನಿರ್ಧರಿಸಿತು. ಅದರಂತೆ ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಬೆಳೆಗಾರರನ್ನೇ ನೇಮಿಸಬೇಕು. ಒಟ್ಟು 23 ಸದಸ್ಯ ಸ್ಥಾನಗಳಲ್ಲಿ 12 ಸ್ಥಾನ ಬೆಳೆಗಾರರಿಗೆ ಸಿಗಬೇಕು ಎಂಬ ಬೇಡಿಕೆಯನ್ನು ಕೇಂದ್ರ ಸರ್ಕಾರದ ಮುಂದಿಡಲು ನಿರ್ಣಯಿಸಲಾಯಿತು.

ತರಬೇತಿ ಕಾರ್ಯಕ್ರಮವನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕೊಡಗಿನಲ್ಲಿ ಸಹಕಾರಿ ಸಂಘಗಳಲ್ಲಿ ಸಾಲಪಡೆಯುವವರ ಸಂಖ್ಯೆ ಕಡಿಮೆಯಿಂದ ಸಹಕಾರ ಸಂಘಗಳತ್ತ ಜನರನ್ನು ಸೆಳೆಯುವ ಕೆಲಸವಾಗಬೇಕು. ಕೊಡಗಿನ ಸುಮಾರು 6ಲಕ್ಷ ಜನರಲ್ಲಿ 2.75ಲಕ್ಷ ಜನರು ಮಾತ್ರ ಸಹಕಾರ ಸಂಘದಲ್ಲಿದ್ದು, ಇದು ಇನ್ನೂ ಹೆಚ್ಚಾಗಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ ಮಾತನಾಡಿ, ಸಹಕಾರಿ ಕಾಯ್ದೆಗಳ ಬಗ್ಗೆ ಸಹಕಾರಿ ಸಂಘಗಳ ಅಧ್ಯಕ್ಷರುಗಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ತರಬೇತಿ ಕಾರ್ಯಾ ಗಾರವನ್ನು ಹಮ್ಮಿಕೊಳ್ಳ ಲಾಗಿದೆ. ಕಾಫಿ ಕಾಯ್ದೆ ಹಾಗೂ ಕರಿಮೆಣಸು ಬೆಳೆ ಸಂಬಂಧ ಇಂದಿನ ತೀರ್ಮಾನವನ್ನು ಸಂಬಂಧಿಸಿದವರಿಗೆ ತಲಪಿಸುವ ಕೆಲಸ ಮಾಡಲಾಗುವದೆಂದರು. ಸಹಕಾರ ಸಂಘಗಳ ಅಪರ ನಿಬಂಧಕರಾದ ಎ.ಸಿ. ದಿವಾಕರ್, ಹಾಸನದ ಚಾರ್ಟಡ್ ಅಕೌಂಟೆಂಟ್ ಎಸ್.ವಿ. ಶಂಭುಲಿಂಗಪ್ಪ ಇವರುಗಳು ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಎಸ್.ಪಿ. ನಿಂಗಪ್ಪ, ನಿರ್ದೇಶಕರುಗಳಾದ ರಮೇಶ್ ಚಂಗಪ್ಪ, ರಾಮಚಂದ್ರ, ಎಂ.ಬಿ. ಜೋಯಪ್ಪ, ಡಿ.ಪಿ. ಬೋಪಣ್ಣ, ಕೆ.ಎಸ್. ಗಣಪತಿ, ಕೆ.ಕೆ. ಮಂದಣ್ಣ, ಕನ್ನಂಡ ಸಂಪತ್ ಉಪಸ್ಥಿತರಿದ್ದರು.