ಸುಂಟಿಕೊಪ್ಪ, ಸೆ. 13: ಕಂಬಿಬಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಪ್ಪುತೋಡು ನಿವಾಸಿ ಲಕ್ಕಣ್ಣ ರೈ ಎಂಬವರ ತೋಟ-ಗದ್ದೆಗೆ ಕಾಡಾನೆ ನುಗ್ಗಿ ಕೃಷಿ ಫಸಲನ್ನು ಧ್ವಂಸಗೊಳಿಸಿರುವ ಬಗ್ಗೆ ವರದಿಯಾಗಿದೆ.

ಉಪ್ಪುತೋಡು ನಿವಾಸಿ ಪ್ರಗತಿಪರ ಕೃಷಿಕ ಲಕ್ಕಣ್ಣರೈ ಅವರಿಗೆ ಸೇರಿದ ಕಾಫಿ, ತೆಂಗು, ಬಾಳೆ, ಭತ್ತದ ಕೃಷಿ ಜಮೀನಿಗೆ ಲಗ್ಗೆಯಿಟ್ಟ ಕಾಡಾನೆ ಹಿಂಡು ತಿಂದು-ತುಳಿದು ಧ್ವಂಸಗೊಳಸಿದೆ.

ಜಿಲ್ಲೆಯಲ್ಲಿ ನೈಸರ್ಗಿಕ ಮಳೆಯನ್ನೇ ಅವಲಂಭಿಸಿ ಕೃಷಿ ಚಟುವಟಿಕೆಯನ್ನು ನಡೆಸುತ್ತಿರುವ ಕೃಷಿಕರು ಈ ಬಾರಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗದೆ, ನೀರು ಇಲ್ಲದೆ ಕೃಷಿ ಚಟುವಟಿಕೆ ಹಿನ್ನಡೆಯಾಗಿದೆ. ಅಲ್ಪ-ಸಲ್ಪ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಕೃಷಿಕರು ಕಾಡಾನೆಗಳ ಹಾವಳಿಯಿಂದ ಚಿಂತೆಗೀಡಾಗುವಂತಾಗಿದೆ.

ಕೂಡಲೇ ಅರಣ್ಯ ಇಲಾಖೆಯವರು ಕಾಡಾನೆಗಳ ಹಾವಳಿಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ಕಾಡಾನೆಗಳು ತೋಟಗಳಲ್ಲಿಯೇ ವಾಸ್ತವ್ಯ ಹೂಡುತ್ತಿದ್ದು, ಕೃಷಿಕರು ಹಾಗೂ ಗ್ರಾಮಸ್ಥರಿಗೆ ಮುಂದಾಗಬಹುದಾದ ಅನಾಹುತವನ್ನು ತಡೆಯುವಂತಾಗಬೇಕೆಂದು ಲಕ್ಕಣ್ಣ ರೈ ಒತ್ತಾಯಿಸಿದ್ದಾರೆ.