ಮಡಿಕೇರಿ, ನ. 19: ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಲ್ಕನೇ ಅಂಗವಾಗಿರುವ ಪತ್ರಿಕಾ ರಂಗ ದೇಶವನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಪತ್ರಿಕೆಗಳು ಋಣಾತ್ಮಕ ಮತ್ತು ಧನಾತ್ಮಕ ವರದಿಗಳನ್ನು ಪ್ರಕಟಿಸುವ ಅಗತ್ಯವಿದೆ ಎಂದು ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಹಾಗೂ ಉದ್ಯಮಿ ಕೇಶವ ಪ್ರಸಾದ್ ಮುಳಿಯ ಅಭಿಪ್ರಾಯಪಟ್ಟಿದ್ದಾರೆ.

“ಪ್ರಜಾಸತ್ಯ” ದಿನಪತ್ರಿಕೆಯ ಮೊದಲ ವಾರ್ಷಿಕೋತ್ಸವದ ಪ್ರಯುಕ್ತ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ “ಪ್ರಜಾಸತ್ಯ” ಕ್ರಿಕೆಟ್ ಟ್ರೋಫಿ-2016” ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದೊಂದಿಗೆ ಪತ್ರಿಕಾ ರಂಗ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿರುವದರಿಂದ ಮಹತ್ತರ ಜವಬ್ದಾರಿಗಳಿರುತ್ತವೆ. ಉತ್ತಮ ಚಿಂತನೆಯ ವರದಿಗಳನ್ನು ಹಾಗೂ ವಿಚಾರಧಾರೆಗಳನ್ನು ಪ್ರಕಟಿಸುವ ಮೂಲಕ ಅಭ್ಯುದಯವನ್ನು ಕಾಣುವದರೊಂದಿಗೆ ದೇಶವನ್ನು ಕಟ್ಟಿ ಬೆಳೆಸುವ ಕೆಲಸವೂ ಆಗಬೇಕೆಂದು ಕೇಶವ ಪ್ರಸಾದ್ ಮುಳಿಯ ಹೇಳಿದರು.

“ಪ್ರಜಾಸತ್ಯ” ದಿನಪತ್ರಿಕೆಯ ಪ್ರಧಾನ ಸಂಪಾದಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ಸಿ. ನವೀನ್ ಕುಮಾರ್ ಮಾತನಾಡಿ, ಕ್ರೀಡೆಗೆ ಸಾಮಾಜಿಕ ವ್ಯಕ್ತಿತ್ವ ರೂಪಿಸುವ ಶಕ್ತಿ ಇದೆ ಎಂದು ಅಭಿಪ್ರಾಯಪಟ್ಟರು. ಕ್ರೀಡಾಕ್ಷೇತ್ರ ಹಾಗೂ ಸಾಂಸ್ಕøತಿಕ ಕ್ಷೇತ್ರ ಜಾತಿ, ಮತ, ಬೇಧದವಿಲ್ಲದ ಕ್ಷೇತ್ರಗಳಾಗಿದ್ದು, ಶಾಂತಿ-ಸಹಬಾಳ್ವೆಗೆ ಮತ್ತು ಸಾಮರಸ್ಯಕ್ಕೆ ಸಹಕಾರಿಯಾಗಿದೆ ಎಂದರು. ಪತ್ರಿಕೆಯ ಹಿರಿಯ ವರದಿಗಾರ ಬಿ.ಸಿ. ದಿನೇಶ್ ಉಪಸ್ಥಿತರಿದ್ದರು. ಬ್ಯಾಟಿಂಗ್ ಮಾಡುವ ಮೂಲಕ ಉದ್ಯಮಿ ಕೇಶವ ಪ್ರಸಾದ್ ಮುಳಿಯ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದರು. ಮೊದಲ ಪಂದ್ಯ ಟೀಮ್ ಪ್ರಜಾಸತ್ಯ ಹಾಗೂ ಚೆಂಬು ಗ್ರಾಮದ ಅಂಬಾಭಾವನಿ ತಂಡಗಳ ನಡುವೆ ನಡೆದು ಪ್ರಜಾಸತ್ಯ ತಂಡ ಗೆಲುವು ಸಾಧಿಸಿತು. ಸುಮಾರು 45 ಕ್ಕೂ ಅಧಿಕ ತಂಡಗಳು ಪಂದ್ಯಾವಳಿ ಯಲ್ಲಿ ಪಾಲ್ಗೊಂಡಿವೆ. ಪಂದ್ಯಾವಳಿಯ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭ ತಾ. 21 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.