*ಗೋಣಿಕೊಪ್ಪಲು, ಜು. 12: ಡಿ.ವೈ.ಎಸ್.ಪಿ ಎಂ.ಕೆ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿ.ಬಿ.ಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಇಲ್ಲಿನ ಕಾವೇರಿ ಕಾಲೇಜು ಆವರಣದಿಂದ ಬಸ್ ನಿಲ್ದಾಣದವರೆಗೆ ಕಾವೇರಿ ಪದವಿ ಪೂರ್ವ ಮತ್ತು ಪದವಿ ತರಗತಿಯ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು. ನಂತರ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ರಚಿಸಿ ಸರಕಾರದ ವಿರುದ್ದ ಘೋಷಣೆ ಹಾಕಿದರು.

ಭ್ರಷ್ಟ ಸರಕಾರ ಅಧಿಕಾರಿಗಳನ್ನು ಕೊಲ್ಲುವ ಯೋಜನೆ ರೂಪಿಸಿದೆ. ಇಂತಹ ಸರಕಾರ ಆಡಳಿತದಲ್ಲಿ ಇರುವದು ವಿಷಾದನೀಯ. ಗಣಪತಿ ಸೇರಿದಂತೆ ಇತರ ಅಧಿಕಾರಿಗಳಿಗೆ ಮಾನಸಿಕ ಕಿರುಕುಳ ನೀಡಿ ಸಾವಿಗೆ ದೂಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಗೃಹ ಸಚಿವ ಜಾರ್ಜ್ ಅವರು ರಾಜಿನಾಮೆ ನೀಡಬೇಕು ಎಂದು ವಿದ್ಯಾರ್ಥಿಗಳು ಘೋಷಣೆ ಕೂಗಿದರು.

ಆತ್ಮಹತ್ಯೆಗೂ ಮುನ್ನ ತನ್ನ ಸಾವಿಗೆ ಮಾಜಿ ಗೃಹ ಸಚಿವ ಜಾರ್ಜ್ ಮತ್ತು ಪೊಲೀಸ್ ಅಧಿಕಾರಿಗಳಾದ ಮೊಹಂತಿ, ಪ್ರಸಾದ್ ಅವರೇ ಕಾರಣ ಎಂದು ಎಂ.ಕೆ ಗಣಪತಿ ಅವರು ಸಾಕ್ಷಿ ಒದಗಿಸಿದರೂ ಇವರ ವಿರುದ್ಧ ಎಫ್.ಐ.ಆರ್ ದಾಖಲಾಗಿಲ್ಲ. ಈ ಮೂವರ ಮೇಲೆ ಕೊಲೆ ಪ್ರಕರಣ ದಾಖಲಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.

ಅಂತಿಮ ಬಿ.ಎಸ್.ಸಿ ವಿದ್ಯಾರ್ಥಿನಿ ಕಂಪನ ಮಾತನಾಡಿ ಸರಕಾರದ ಈ ನಡೆಯಿಂದ ಯುವ ಸಮುದಾಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಜನರಿಗೆ ಭದ್ರತೆ ಮತ್ತು ನ್ಯಾಯ ಒದಗಿಸುವ ಪೊಲೀಸ್ ಇಲಾಖೆಯ ಮೇಲೆ ಸರಕಾರ ದೌರ್ಜನ್ಯ ನಡೆಸುತ್ತಿದೆ. ಇದು ಸಮಾಜದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತಿದೆ. ಎಂ.ಕೆ ಗಣಪತಿ ಅವರ ಆತ್ಮಹತ್ಯೆ ಪ್ರಕರಣವನ್ನು ಸಿಬಿ.ಐಗೆ ಒಪ್ಪಿಸಬೇಕು ಎಂದು ಹೇಳಿದರು.

ಈ ಮೂಲಕ ತಪ್ಪಿತಸ್ಥರನ್ನು ಬಂಧಿಸುವಂತೆ ಆಗ್ರಹಿಸಿದ ಮನವಿಯನ್ನು ವಿದ್ಯಾರ್ಥಿಗಳು ವೃತ್ತ ನಿರೀಕ್ಷಕ ರಾಜು ಹಾಗೂ ಉಪನಿರೀಕ್ಷಕ ಗೋವಿಂದರಾಜು ಅವರ ಮೂಲಕ ಅಧಿಕಾರಿಗಳಿಗೆ ಹಾಗೂ ಸರಕಾರಕ್ಕೆ ಕಳುಹಿಸುವಂತೆ ಸಲ್ಲಿಸಲಾಯಿತು.