ಮಡಿಕೇರಿ, ನ. 18: ಹೆರವನಾಡು ಗ್ರಾಮದ ಉಡೋತ್‍ಮೊಟ್ಟೆಗೆ ಬುಧವಾರ ಜಿಲ್ಲಾ ಪಂಚಾಯಿತಿ ಅಧÀ್ಯಕ್ಷ ಬಿ.ಎ.ಹರೀಶ್ ಅವರು ಭೇಟಿ ನೀಡಿ ಸಾರ್ವಜನಿಕ ಕುಂದುಕೊರತೆ ಆಲಿಸಿದರು.

ಉಡೋತ್‍ಮೊಟ್ಟೆ ಗ್ರಾಮಕ್ಕೆ ಇಂಜಿನಿಯರ್ ಹಾಗೂ ಗ್ರಾಮದ ಪ್ರಮುಖರೊಂದಿಗೆ ತೆರಳಿ ಸ್ಥಳೀಯರ ಹಾಗೂ ಗ್ರಾ.ಪಂ. ಸದಸ್ಯರ ಮುಖಾಂತರ ಅಹವಾಲುಗಳನ್ನು ಸ್ವೀಕರಿಸಿದರು ಹಾಗೂ ರಸ್ತೆ ಸುಧಾರಣೆ ಮಾಡುವದು, ಕುಡಿಯುವ ನೀರಿನ ಬವಣೆ ನಿವಾರಿಸುವದು, ಮತ್ತಿತರ ಹಲವು ಸಮಸ್ಯೆಗಳನ್ನು ಬಗೆಹರಿಸುವಂತೆ ಗ್ರಾಮಸ್ಥರು ಜಿ.ಪಂ. ಅಧ್ಯಕ್ಷರಿಗೆ ಮನವಿ ಮಾಡಿದರು.

ಮನವಿ ಆಲಿಸಿ ಮಾತನಾಡಿದ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಅವರು ಉಡೋತ್‍ಮೊಟ್ಟೆ ಗ್ರಾಮದ ಅಭಿವೃದ್ಧಿಗೆ ಜಿ.ಪಂ. ವತಿಯಿಂದ ಹೆಚ್ಚಿನ ಅನುದಾನ ಒದಗಿಸಲಾಗುವದು. ಗ್ರಾಮ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುವದು. ನೀರಿನ ಟ್ಯಾಂಕ್‍ಗೆ ಈಗಾಗಲೇ ಜಾಗ ಗುರುತಿಸಿದ್ದು, ಕಾಮಗಾರಿ ಸದ್ಯದಲ್ಲಿಯೇ ಆರಂಭಿಸಲಾಗುವದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ತಿರುಮಲ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.