ಮಡಿಕೇರಿ, ನ.27 : ದೇಶದ ಬೃಹತ್ ಕೈಗಾರಿಕೋದ್ಯಮಿಗಳು ಸುಮಾರು 6 ಲಕ್ಷ ಕೋಟಿ ರೂಪಾಯಿಯಷ್ಟು ಸಾಲವನ್ನು ಪಡೆದಿದ್ದು, ಇದನ್ನು ವಸೂಲಿ ಮಾಡಲಾಗದ ಕೇಂದ್ರ ಸರಕಾರ 500 ಹಾಗೂ 1000 ರೂ. ನೋಟುಗಳ ಚಲಾವಣೆಯನ್ನು ರದ್ದು ಪಡಿಸುವ ಮೂಲಕ ಜನಸಾಮಾನ್ಯರು ಕಷ್ಟಪಟ್ಟು ಕೂಡಿಟ್ಟಿದ್ದ ಹಣ ಬ್ಯಾಂಕ್‍ಗೆ ಭರ್ತಿಯಾಗುವಂತೆ ನೋಡಿಕೊಂಡಿದೆ ಎಂದು ಜಾತ್ಯತೀತ ಜನತಾದಳದ ಜಿಲ್ಲಾ ಘಟಕ ಆರೋಪಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್‍ನ ಮಡಿಕೇರಿ ತಾಲೂಕು ಅಧ್ಯಕ್ಷ ಡಾ.ಯಾಲದಾಳು ಮನೋಜ್ ಬೋಪಯ್ಯ ಬೃಹತ್ ಕೈಗಾರಿಕೋದ್ಯಮಿಗಳ ಕೈಗೊಂ¨ Éಯಾಗಿರುವ ಕೇಂದ್ರ ಸರಕಾರ ಈ ಉದ್ಯಮಿಗಳು ಮಾಡಿರುವ ಕೋಟ್ಯಾಂತರ ರೂಪಾಯಿ ಸಾಲವನ್ನು ಭರ್ತಿ ಮಾಡುವ ಉದ್ದೇಶದಿಂದ ನೋಟುಗಳನ್ನು ನಿಷೇಧ ಮಾಡುವ ಮೂಲಕ ಜನಸಾಮಾನ್ಯರ ಜೇಬಿಗೆ ಕೈ ಹಾಕಿದೆ ಎಂದು ಟೀಕಿಸಿದರು. ಈ ಬಗ್ಗೆ ಜನ ಜಾಗೃತರಾಗದಿದ್ದಲ್ಲಿ ಹಣಕ್ಕೆ ಕೈ ಹಾಕಿದ ಸರಕಾರ ಮುಂದೆ ಆಸ್ತಿಯ ಮೇಲೂ ಹಿಡಿತ ಸಾಧಿಸಬಹುದೆಂದು ಅಭಿಪ್ರಾಯಪಟ್ಟರು.

ದೇಶದ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕನ್ನು ನೀಡಲಾಗಿದೆ. ಆದರೆ ನೋಟುಗಳ ಅಪಮೌಲ್ಯದಿಂದ ಉಂಟಾಗಿರುವ ತೊಂದರೆಗಳ ಬಗ್ಗೆ ಮಾತನಾಡುವವರನ್ನು ಬಿಜೆಪಿ ಹಾಗೂ ಸಂಘ ಪರಿವಾರ ದೇಶ ದ್ರೋಹಿಗಳೆಂದು ಪ್ರತಿಬಿಂಬಿಸುತ್ತಿವೆ. ಬೃಹತ್ ಕೈಗಾರಿಕೋದ್ಯಮಿಗಳ ಪರ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರಕಾರ ನೋಟುಗಳ ಚಲಾವಣೆ ಯನ್ನು ರದ್ದು ಮಾಡುವ ಮೂಲಕ ದೇಶವನ್ನು ಉದ್ಧಾರ ಮಾಡುತ್ತಿರುವದಾಗಿ ಜನರ “ಬ್ರೈನ್ ವಾಶ್” ಮಾಡುವ ಕಾರ್ಯದಲ್ಲಿ ತೊಡಗಿದೆ. ಈ ರೀತಿಯ ಕ್ಲಿಷ್ಟಕರ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಪ್ರಧಾನಮಂತ್ರಿಯಾದವರು ಚರ್ಚಿಸುವ ಮತ್ತು ವಿಶ್ಲೇಷಿಸುವ ಕಾರ್ಯವನ್ನು ಮಾಡದೆ ಕ್ರಮ ಕೈಗೊಂಡಿರುವದು ದೇಶದ ದುರಂತವಾಗಿದೆ ಎಂದು ಡಾ.ಮನೋಜ್ ಬೋಪಯ್ಯ ಆರೋಪಿಸಿದರು.

ಜಿಲ್ಲಾ ವಕ್ತಾರ ಪಿ.ಎಸ್. ಭರತ್‍ಕುಮಾರ್ ಮಾತನಾಡಿ ಭಾರತ್ ಬಂದ್‍ಗೆ ಕರೆ ನೀಡಿದ್ದ ಕಾಂಗ್ರೆಸ್ ಸಾಕಷ್ಟು ಕಪ್ಪು ಹಣವನ್ನು ಹೊಂದಿದ್ದು, ಇದೀಗ ಆಕ್ರೋಶ ದಿನ ಎಂದು ಘೋಷಿಸುವ ಮೂಲಕ ಗೋಸುಂಬೆ ರಾಜಕಾರಣವನ್ನು ಪ್ರದರ್ಶಿಸಿದೆ ಎಂದು ಆರೋಪಿಸಿದರು.

ಪ್ರಧಾನಮಂತ್ರಿ ನರೇಂದ್ರಮೋದಿ ಅವರು ತಮ್ಮ ಪ್ರಯೋಗಗಳಿಗೆ ಜನಸಾಮಾನ್ಯರನ್ನು, ಬಡವರನ್ನು, ಕೂಲಿ ಕಾರ್ಮಿಕರನ್ನು, ಸಣ್ಣ ವ್ಯಾಪಾರಿ ಗಳನ್ನು, ರೈತರನ್ನು ಬಲಿಪಶುಗಳನ್ನಾಗಿ ಮಾಡುವದನ್ನು ಬಿಡಬೇಕು ಎಂದು ಭರತ್‍ಕುಮಾರ್ ಒತ್ತಾಯಿಸಿದರು. ತೆರಿಗೆ ವಂಚನೆ ಮೂಲಕ ದೇಶ ದ್ರೋಹ ಎಸಗುತ್ತಿರುವ ಬಂಡವಾಳ ಶಾಹಿಗಳ ವಿರುದ್ಧ ನೇರವಾಗಿ ಹೋರಾಟ ನಡೆಸಲಿ ಮತ್ತು ಜನಸಾಮಾನ್ಯರಿಗೆ ಆಗುತ್ತಿರುವ ಕಷ್ಟನಷ್ಟಗಳನ್ನು ದೂರ ಮಾಡಲು ಬ್ಯಾಂಕ್ ವ್ಯವಹಾರವನ್ನು ಸರಳೀಕರಣ ಗೊಳಿಸಲಿ ಎಂದು ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮಡಿಕೇರಿ ತಾಲೂಕು ಉಪಾಧ್ಯಕ್ಷ ಸಿ.ಟಿ.ಮಾದಪ್ಪ, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಮನ್ಸೂರ್ ಆಲಿ, ಹಾಗೂ ನಗರ ಕಾರ್ಯದರ್ಶಿ ಅಬ್ರಹಾರ್ ಉಪಸ್ಥಿತರಿದ್ದರು.