ವೀರಾಜಪೇಟೆ, ಅ. 2: ವೀರಾಜಪೇಟೆ ಪಟ್ಟಣ ವ್ಯಾಪ್ತಿಯ ಪ್ರತಿಯೊಬ್ಬ ವರ್ತಕರು, ಉದ್ದಿಮೆದಾರರು ಕಡ್ಡಾಯವಾಗಿ ಪರವಾನಗಿಯನ್ನು ಪಡೆಯಬೇಕು. ವರ್ತಕರು ಪರವಾನಗಿಯನ್ನು ಪಡೆಯುವ ವ್ಯವಸ್ಥೆಯನ್ನು ಸರಳೀಕರಣಗೊಳಿಸಿ ಆನ್‍ಲೈನ್ ತಂತ್ರಾಂಶದ ಮೂಲಕ ಡಿಜಿಟಲ್ ಸಹಿಯೊಂದಿಗೆ ಅಗತ್ಯ ದಾಖಲಾತಿಗಳನ್ನು ಹಾಜರುಪಡಿಸಿ ತಕ್ಷಣ ಪಡೆಯಬಹುದು ಎಂದು ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ತಿಳಿಸಿದ್ದಾರೆ.

ವರ್ತಕರ ಅನುಕೂಲಕ್ಕಾಗಿ ವೀರಾಜಪೇಟೆ ಪಟ್ಟಣದ ಆಯ್ದ ನಾಲ್ಕು ಕಡೆಗಳಲ್ಲಿ ಆನ್‍ಲೈನ್ ಪರವಾನಗಿ ಪಡೆಯುವ ಕೇಂದ್ರಗಳನ್ನು ಆರಂಭಿಸಲಾಗಿದೆ. ಪಟ್ಟಣ ಪಂಚಾಯಿತಿ ಆರಂಭಿಸಿರುವ ಉದ್ದಿಮೆ ಪರವಾನಗಿ ವಿಶೇಷ ಆಂದೋಲನದಲ್ಲಿ ವಿಳಂಬವಿಲ್ಲದೆ ಪರವಾನಗಿ ಪಡೆಯಬಹುದು.

ನಿಗದಿತ ಅವಧಿಯೊಳಗೆ ಉದ್ದಿಮೆ ಪರವಾನಗಿ ಇಲ್ಲವೇ ಪರವಾನಗಿಯನ್ನು ನವೀಕರಿಸದಿದ್ದರೆ ಪಂಚಾಯಿತಿಯಿಂದ ನೀಡುತ್ತಿರುವ ಸ್ವಚ್ಛತೆ, ನೀರು, ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಪರವಾನಗಿ ಶುಲ್ಕ ವಸೂಲಾತಿಗಾಗಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವದು ಎಂದು ಕೃಷ್ಣಪ್ರಸಾದ್ ತಿಳಿಸಿದ್ದಾರೆ.

ವೀರಾಜಪೇಟೆ ಪಟ್ಟಣದಲ್ಲಿ ದಾಖಲೆ ಪ್ರಕಾರ ಸುಮಾರು 800 ವರ್ತಕರಿದ್ದು ಈ ಪೈಕಿ ಕಚೇರಿಯಲ್ಲಿಯೇ 290 ಮಂದಿ ಆನ್‍ಲೈನ್ ಮೂಲಕ ಪರವಾನಗಿ ಪಡೆದಿದ್ದಾರೆ.

ಉದ್ದಿಮೆ ಪರವಾನಗಿ ವಿಶೇಷ ಆಂದೋಲನ ಶಿಬಿರದಲ್ಲಿ ಈಗಾಗಲೇ 52 ಮಂದಿ ಆನ್‍ಲೈನ್ ಪರವಾನಗಿಯನ್ನು ಪಡೆದಿದ್ದು, ಆಂದೋಲನ ಶಿಬಿರ ಇನ್ನು ಒಂದು ತಿಂಗಳವರೆಗೆ ಮುಂದುವರೆಯಲಿದೆ. ವರ್ತಕರು ಆನ್‍ಲೈನ್‍ನಲ್ಲಿ ಪರವಾನಗಿ ಪಡೆಯಲು ಗಡಿಯಾರ ಕಂಬದ ಗಣಪತಿ ದೇವಸ್ಥಾನದ ಪಕ್ಕದಲ್ಲಿರುವ ಪ್ರಯಾಣಿಕರ ತಂಗುದಾಣ, ದೊಡ್ಡಟ್ಟಿ ಚೌಕಿಯ ತಂಗುದಾಣ, ರಿಜೆನ್ಸಿ ಲಾಡ್ಜ್ ಕಟ್ಟಡದ ಬಳಿ ಹಾಗೂ ಗೋಣಿಕೊಪ್ಪ ರಸ್ತೆಯ ಕಾಂಟಿನೆಂಟಲ್ ಲಾಡ್ಜ್ ಕಟ್ಟಡದ ಹತ್ತಿರ ಶಿಬಿರ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಕೃಷ್ಣ ಪ್ರಸಾದ್ ತಿಳಿಸಿದರು.