ಮಡಿಕೇರಿ, ಅ. 2: ಕೃಷಿ ಅಭಿಯಾನ-ಕೃಷಿ ಇಲಾಖೆ ವತಿಯಿಂದ ಇತ್ತೀಚೆಗೆ ಭಾಗಮಂಡಲ ಹೋಬಳಿ ಕೋಪಟ್ಟಿ ಗ್ರಾಮದಲ್ಲಿ ಕೃಷಿ ಅಭಿಯಾನ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್ ನೆರವೇರಿಸಿ, ಭತ್ತದ ಕೃಷಿಯನ್ನು ರೈತರು ಕೈಬಿಡದೆ ನೂತನ ಕೃಷಿ ಪದ್ಧತಿಯನ್ನು ಅಳವಡಿಸಿ ಅಧಿಕ ಇಳುವರಿ ಪಡೆಯುವಂತೆ ತಿಳಿಸಿದರು.

ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ, ಅರಣ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿವಿಧ ಕೃಷಿ ಯಂತ್ರೋಪಕರಣಗಳ ಮಾರಾಟ ಮಳಿಗೆಗಳ ವಸ್ತು ಪ್ರದರ್ಶನವನ್ನು ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ನೆರವೇರಿಸಿ, ಅಭಿವೃದ್ಧಿ ಇಲಾಖೆಗಳ ಅಧಿಕಾರಿಗಳ ಸೇವೆಯನ್ನು ಬಳಸಿಕೊಂಡು ಕಾಲಕ್ಕೆ ತಕ್ಕಂತೆ ಯೋಜನೆ ರೂಪಿಸಿಕೊಂಡು ಕೃಷಿ ಕಾರ್ಯ ಮಾಡುವದರಿಂದ ಅಧಿಕ ಉತ್ಪತ್ತಿ ಮತ್ತು ಲಾಭಗಳಿಸಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಚೇರಿ ಪಂಚಾಯಿತಿ ಅಧ್ಯಕ್ಷ ಜಯಪ್ರಕಾಶ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಕೆ. ಕುಮಾರ್, ತಾಲೂಕು ಪಂಚಾಯಿತಿ ಸದಸ್ಯರಾದ ದಬ್ಬಡ್ಕ ಶ್ರೀಧರ್, ಕೊಡಪಾಲು ಗಣಪತಿ, ಸಂದ್ಯಾ, ತುಂತಜೆ ಕುಮುದ ಭಾಗವಹಿಸಿದ್ದರು.

ಅರಣ್ಯ ಮಹಾ ವಿದ್ಯಾಲಯದ ತಜ್ಞರಿಂದ “ಕೃಷಿ ಸಂವಾದ” ಕಾರ್ಯಕ್ರಮ ನಡೆಯಿತು. ನವೀನ್ ನಂಜಪ್ಪ ಪ್ರಾರ್ಥಿಸಿ, ಸಹಾಯಕ ಕೃಷಿ ನಿರ್ದೇಶಕ ಹೆಚ್.ಎಸ್. ರಾಜಶೇಖರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎ.ಸಿ. ಗಿರೀಶ್ ಸ್ವಾಗತಿಸಿ, ವಸಂತ್ ಕುಮಾರ್ ವಂದಿಸಿದರು.