ಮಡಿಕೇರಿ, ಜು. 2: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಚೇರಂಬಾಣೆ ಬೇಂಗ್‍ನಾಡ್ ಕೊಡವ ಸಮಾಜ ಆವರಣದಲ್ಲಿ ಆಟ್-ಪಾಟ್-ಪಡಿಪು ಸಮಾರೋಪ ಸಮಾರಂಭ ಜರುಗಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಾಪೋಕ್ಲು ಸರಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕ ಅಯ್ಯಂಡ ರಾಮಕೃಷ್ಣ ಅವರು ಕೊಡವ ಮತ್ತು ಕೊಡವ ಭಾಷಿಕ ಜನಾಂಗದ ಸಾಂಪ್ರದಾಯಿಕ ಕಲೆಯನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ಕಾರ್ಯ ಪ್ರವೃತ್ತರಾಗಿರುವದು ಶ್ಲಾಘನೀಯ ಎಂದರು.

ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪುಟ್ಟ ಮಕ್ಕಳಿಗೆ ಜಾನಪದ ಆಚಾರ, ವಿಚಾರಗಳನ್ನು ಕಲಿಸಿದ್ದೇ ಆದಲ್ಲಿ ಅವರು ಮುಂದೊಂದು ದಿನ ಮತ್ತೊಬ್ಬರಿಗೆ ಕಲಿಸುವದರ ಮೂಲಕ ನಮ್ಮ ಸಂಸ್ಕøತಿ ಉಳಿಸುವಲ್ಲಿ ಸಹಕಾರಿಯಾಗುತ್ತಾರೆ. ಕೊಡವ ಭಾಷಿಕರ ಬದುಕಿನ ಮೂಲವಾದ ‘ಮಂದ್-ಮಂದ್-ಮಾನಿ’ ಇಂದು ಮೂಲೆ ಗುಂಪಾಗುತ್ತಿದೆ. ಅವುಗಳನ್ನು ಉಳಿಸುವ ಅನಿವಾರ್ಯತೆ ಇದೆ. ಅದಕ್ಕಾಗಿ ಅಕಾಡೆಮಿ ವತಿಯಿಂದ ಮುಂದ್‍ಮನೆ-ಬಲ್ಯಮನೆ ಕಾರ್ಯಕ್ರಮಗಳು ಊರು, ನಾಡಿನಲ್ಲಿ ನಿಂತು ಹೋಗಿರುವ ಅತಿಕ್ರಮಣ ಗೊಂಡಿರುವ ಮಂದ್‍ಗಳನ್ನು ತೆರೆದು ಅಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದೆ. ಜಿಲ್ಲೆಯ ಕೊಡವ ಭಾಷಿಕರು ಅಕಾಡೆಮಿಯಿಂದ ಪ್ರಯೋಜನ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಸಭೆಯಲ್ಲಿ ಬೇಂಗ್‍ನಾಡ್ ಕೊಡವ ಸಮಾಜದ ಅಧ್ಯಕ್ಷ ಕುಟ್ಟೇಟಿರ ಕುಂಞಪ್ಪ, ನಿರ್ದೇಶಕ ಪಟ್ಟಮಾಡ ಪೂಣಚ್ಚ, ಅಕಾಡೆಮಿ ಸದಸ್ಯರಾದ ಮಾದೇಟಿರ ಬೆಳ್ಯಪ್ಪ, ಚೀರಮ್ಮನ ವಾಣಿ ಚಂಗುವಮ್ಮಯ್ಯ, ಕೊಡವ ಸಮಾಜದ ನಿರ್ದೇಶಕರು, ಸದಸ್ಯರು ಸೇರಿದಂತೆ ನೂರಾರು ಜನ ಸೇರಿದ್ದರು. ಕೊಟ್ಟುಕತ್ತಿರ ಪೆಮ್ಮಯ್ಯ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಈ ಸಂದರ್ಭ ಶಿಬಿರದಲ್ಲಿ ತರಬೇತಿ ಹೊಂದಿದ ತಂಡದಿಂದ ಆಟ್-ಪಾಟ್ ಪ್ರದರ್ಶನ ನಡೆಯಿತು.