ಸೋಮವಾರಪೇಟೆ,ಆ.7: ತಾಲೂಕು ಹಿಂದೂ ಜಾಗರಣಾ ವೇದಿಕೆ ವತಿಯಿಂದ ಅಖಂಡ ಭಾರತ ಸಂಕಲ್ಪ ಸಪ್ತಾಯದ ಅಂಗವಾಗಿ ಇಂದು ಸೋಮವಾರಪೇಟೆ ನಗರದಲ್ಲಿ ವಾಹನ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಇಲ್ಲಿನ ಆಂಜನೇಯ ದೇವಾಲಯದಿಂದ ನಗರದ ಪ್ರಮುಖ ಮಾರ್ಗಗಳಲ್ಲಿ ಮೆರವಣಿಗೆ ನಡೆಯಿತು. ಕಕ್ಕೆಹೊಳೆ ಜಂಕ್ಷನ್, ಸಿ.ಕೆ. ಸುಬ್ಬಯ್ಯ ರಸ್ತೆ, ಎಂ.ಜಿ. ರಸ್ತೆ, ಬಾಣಾವರ ರಸ್ತೆ, ದೇವಾಲಯ ರಸ್ತೆ, ಮುಖ್ಯರಸ್ತೆ, ಬಸ್ ನಿಲ್ದಾಣ, ಕ್ಲಬ್ ರಸ್ತೆ ಮೂಲಕ ಸಭಾ ಕಾರ್ಯಕ್ರಮ ಆಯೋಜಿತಗೊಂಡಿದ್ದ ವಕ್ಕಲಿಗರ ಸಭಾಂಗಣದವರೆಗೆ ನೂರಾರು ವಾಹನಗಳ ಜಾಥಾ ನಡೆಯಿತು.

ಮೆರವಣಿಗೆಯಲ್ಲಿ ಭಾರತ್ ಮಾತಾಕಿ ಜೈ ಘೋಷಣೆಗಳು ಮೊಳಗಿದವು. ಪ್ರಮುಖರುಗಳಾದ ಸುಭಾಶ್ ತಿಮ್ಮಯ್ಯ, ದರ್ಶನ್ ಜೋಯಪ್ಪ, ಎಸ್.ಜಿ. ಮೇದಪ್ಪ, ರಮೇಶ್, ಶಶಿಕಾಂತ್, ಉಮೇಶ್, ಬನ್ನಳ್ಳಿ ಗೋಪಾಲ್ ಸೇರಿದಂತೆ ಇತರರು ಜಾಥಾದ ನೇತೃತ್ವ ವಹಿಸಿದ್ದರು. ಹಿಂದೂ ಜಾಗರಣಾ ವೇದಿಕೆಯ ಪದಾಧಿಕಾರಿಗಳು, ಕಾರ್ಯಕರ್ತರು ಸೇರಿದಂತೆ ನೂರಾರು ಮಂದಿ ಜಾಥಾದಲ್ಲಿ ಭಾಗವಹಿಸಿದ್ದರು.