ಮಡಿಕೇರಿ, ಜು. 18: ಕರ್ನಾಟಕದಲ್ಲಿ ಸ್ಫೋಟಗೊಂಡ ಬೆಳವಣಿಗೆ ಪಡೆದಿದ್ದ ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಇದೀಗ ನ್ಯಾಯ ದೊರಕುವ ಆಶಾಕಿರಣ ಮೂಡಿ ಬಂದಿದೆ. ಎಲ್ಲ ವಿಪಕ್ಷಗಳ ಛಾಟಿ ಏಟಿಗೂ ಮಣಿಯದೆ, ತನ್ನದೇ ನ್ಯಾಯ ಎಂಬಂತೆ ತೊಡೆ ತಟ್ಟಿ ನಿಂತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಖ ಭಂಗವಾಗಿದೆ. ಮಂಗಳೂರಿನಲ್ಲಿ ಡಿವೈಎಸ್ಪಿಯಾಗಿ ಕರ್ತವ್ಯ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದ ಕೊಡಗು ಮೂಲದ ಎಂ.ಕೆ. ಗಣಪತಿ ತನ್ನ ಸಾವಿಗೂ ಮುನ್ನ ಮಾಧ್ಯಮಗಳಿಗೆ ನೀಡಿದ್ದ ಸಂದರ್ಶನದ ಆರೋಪಗಳಿಗೆ ಇದೀಗ ನ್ಯಾಯಾಲಯದ ಸ್ಪಂದನ ದೊರಕಿದೆ.

ಗಣಪತಿ ತನಗೇನಾದರೂ ಸಂಚಕಾರವಾದರೆ ಅದಕ್ಕೆ ಕಾರಣವಾದ ಪ್ರಮುಖ ವ್ಯಕ್ತಿಗಳಲ್ಲಿ ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಅವರನ್ನು ಹೆಸರಿಸಿದ್ದು, ನೈತಿಕ ಹೊಣೆ ಹೊತ್ತು ಇದೀಗ ಜಾರ್ಜ್ ರಾಜೀನಾಮೆ ನೀಡಿದ್ದಾರೆ. ಮಡಿಕೇರಿ ನ್ಯಾಯಾಲಯದ ಆದೇಶಕ್ಕೆ ತಲೆಬಾಗುವ ಅನಿವಾರ್ಯತೆಯಿಂದ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.ಗಣಪತಿ ಹೆಸರಿಸಿದ್ದ ಇನ್ನಿಬ್ಬರು ಪ್ರಮುಖ ಆರೋಪಿಗಳಾದ ಲೋಕಾಯುಕ್ತ ಐಜಿಪಿ ಪ್ರಣಬ್ ಮೊಹಾಂತಿ ಹಾಗೂ ರಾಜ್ಯ ಇಂಟೆಲಿಜೆನ್ಸ್ ಎಡಿಜಿಪಿ ಎ.ಎಂ. ಪ್ರಸಾದ್ ಇವರುಗಳನ್ನು ಸರ್ಕಾರ ಕಡ್ಡಾಯ ರಜೆ ಮೇಲೆ ಕಳುಹಿಸಲು ಚಿಂತನೆ ನಡೆಸಿದೆ.

ಈ ಎಲ್ಲಾ ಬೆಳವಣಿಗೆಯನ್ನು ಗಮನಿಸಿದ ಮುಖ್ಯಮಂತ್ರಿ ಅನಿವಾರ್ಯವಾಗಿ ಜಾರ್ಜ್ ರಾಜೀನಾಮೆಯನ್ನು ಅಂಗೀಕರಿಸಿರುವದಾಗಿ ತಿಳಿಸಿದ್ದಾರೆ. ಈ ನಡುವೆ ಮುಖ್ಯಮಂತ್ರಿಯನ್ನು ತಮ್ಮ ಸಚಿವ ಸಂಪುಟದ ಹಿರಿಯ ಸಚಿವರುಗಳೊಂದಿಗೆ ತುರ್ತು ಸಭೆ ನಡೆಸಿ ಮುಂದೆ ಎದುರಾಗುವ ಸನ್ನಿವೇಶದ ಕುರಿತು ಚರ್ಚಿಸಿದರು.

ಗಣಪತಿ ಆತ್ಮಹತ್ಯೆಗೂ ಮುನ್ನ ಮಾಧ್ಯಮಗಳಿಗೆ ನೀಡಿದ್ದ ಹೇಳಿಕೆಯನ್ನು ಮರಣಪೂರ್ವ ಹೇಳಿಕೆಯಾಗಿ ಪರಿಗಣಿಸಿ ಎಫ್‍ಐಆರ್ ದಾಖಲಿಸಲು ಕೂಡ ರಾಜಕೀಯ ಒತ್ತಡದಿಂದ ಪೊಲೀಸ್ ಇಲಾಖೆ ನಿರಾಕರಿಸಿತ್ತು. ಮೃತರ ಪತ್ನಿ ಮತ್ತು ಪುತ್ರ ನೀಡಿದ ದೂರನ್ನು ಕೂಡ ಕಡೆಗಣಿಸಿತ್ತು. ಇಂತಹ ದಾರುಣ ಸನ್ನಿವೇಶವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರಭಾವಿತರ ಕುರ್ಚಿ ಉಳಿಸುವದಕ್ಕಾಗಿ ತಮಾಷೆಯಾಗಿ ಪರಿಗಣಿಸಿ ತೀರ ಅಸಹ್ಯಕರವಾಗಿ ಅತ್ಯಂತ ಹೀನವಾಗಿ ಸತ್ತವರ ಕುಟುಂಬ ವರ್ಗಕ್ಕೂ ಅವಮಾನಕರ ವಾದ ರೀತಿಯಲ್ಲಿ ವರ್ತಿಸಿ, ಬಾಲಿಶ ನಡೆಯನ್ನು ಪ್ರದರ್ಶಿಸಿತ್ತು. ವಿಪಕ್ಷಗಳ ನಿರಂತರ ವಾಕ್‍ಛಾಟಿಯೇಟಿಗೂ ಮಣಿಯದೆ ಸಿಬಿಐ ತನಿಖೆಯ ಆಗ್ರಹಕ್ಕೂ ಸ್ಪಂದಿಸದೆ ಮುಖ್ಯಮಂತ್ರಿ ಆರೋಪಿತ ಸಚಿವರನ್ನು ಮತ್ತು ಅಧಿಕಾರಿಗಳನ್ನು ಸದನದಲ್ಲಿ ಸಮರ್ಥಿಸಿಕೊಂಡು ಸಾರ್ವತ್ರಿಕ ಆಕ್ರೋಶಕ್ಕೆ ಒಳಗಾಗಿದ್ದರು. ಇದೀಗ ಕೊಡಗಿನ ನೆಲದಲ್ಲಿಯೇ ಮಡಿಕೇರಿಯ ನ್ಯಾಯಾಧೀಶರೊಬ್ಬರು ನೀಡಿದ ಆದೇಶದಿಂದ ತಲ್ಲಣ ಗೊಂಡು ಸರಕಾರದ ಬಿಗಿಮುಷ್ಠಿ ಸಡಿಲಗೊಂಡಿದ್ದು, ಮೃತರ ಕುಟುಂಬಕ್ಕೆ ನ್ಯಾಯ ದೊರಕುವ ಹೊಸ ಬೆಳಕು ಮೂಡಿದೆ.