ಸುಂಟಿಕೊಪ್ಪ, ಅ.10: ಸಮಾಜದಲ್ಲಿ ಸಾಮರಸ್ಯ ನೆಲೆಸಿ ಒಡೆದ ಮನಸ್ಸುಗಳು ಮತ್ತೆ ಒಂದಾಗುವ ನಿಟ್ಟಿನಲ್ಲಿ ಆಯುಧ ಪೂಜಾ ಹಾಗೂ ವಿಜಯದಶಮಿಯ ಶುಭ ಸಂದರ್ಭದಲ್ಲಿ ದೇವಿ ಹಾರೈಸಲಿ ಎಂದು ಜಿ.ಪಂ.ಸದಸ್ಯೆ ಕೆ.ಪಿ.ಚಂದ್ರಕಲಾ ಹೇಳಿದರು.

ಸುಂಟಿಕೊಪ್ಪ ಆಟೋರಿಕ್ಷಾ ಚಾಲಕರ ಸಂಘದಲ್ಲಿ ಆಟೋರಿಕ್ಷಾ ಚಾಲಕರ ವೇದಿಕೆಯಲ್ಲಿ ಆಯೋಜಿಸಲಾದ ಆಯುಧಪೂಜಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಎಲ್ಲಾ ಜಾತಿ, ಧರ್ಮ, ಮತ ಬಾಂಧವರಲ್ಲಿ ಮುರಿದು ಹೋದ ಮನಸ್ಸು ಒಂದಾಗುವ ಅನಿವಾರ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.

ಮುಖ್ಯ ಮಂತ್ರಿಗಳ ವಿಶೇಷ ನಿಧಿಯಿಂದ ಸುಂಟಿಕೊಪ್ಪದ ಅಭಿವೃದ್ಧಿಗೆ 40 ಲಕ್ಷ ರೂ. ಅನುದಾನ ಹಾಗೂ ಜಿ.ಪಂ.ನಿಧಿಯಿಂದ 10 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ಪ್ರತ್ಯೇಕವಾಗಿ 40 ಲಕ್ಷ ರೂ ಮಂಜೂರಾಗಿದೆ. ತನ್ನ 5 ವರ್ಷದ ಅಧಿಕಾರಾವಧಿಯಲ್ಲಿ ಸುಂಟಿಕೊಪ್ಪದಲ್ಲಿ ಹೈಟೆಕ್ ಮಾರುಕಟ್ಟೆ ಬಸ್ ನಿಲ್ದಾಣ ನಿರ್ಮಿಸುವ ಗುರಿ ಇದೆ ಎಂದು ಹೇಳಿದರು.

ಮುಸ್ಲಿಂ ಧಾರ್ಮಿಕ ಗುರು ಹಮೀದ್ ಮೌಲವಿ ಮಾತನಾಡಿ, ಎಲ್ಲಾ ಧರ್ಮದ ಸಾರ ಶಾಂತಿ ನೆಮ್ಮದಿ ನೆಲೆಸುವದೇ ಆಗಿದೆ. ಜಾತಿ, ಮತವನ್ನು ಮೀರಿ ಸೌಹಾರ್ದತೆ, ಏಕತೆ ಸಹೋದರತ್ವತೆಗೆ ಪ್ರತಿಯೊಬ್ಬರೂ ಆದ್ಯತೆ ನೀಡಿದರೆ ಸಮಾಜದಲ್ಲಿ ಶಾಂತಿ ನೆಲೆಸಲಿದೆ ಎಂದರು.

ಕ್ರಿಶ್ಚಿಯನ್ ಧರ್ಮಗುರು ವಿಲ್ಸನ್ ಸಾಧು ಮಾತನಾಡಿ ಪ್ರತಿ ಧರ್ಮದ ಆಚಾರ - ವಿಚಾರ, ಸಂಸ್ಕøತಿ ಬೇರೆ ಬೇರೆಯಾದರೂ ಪ್ರತಿಯೊಬ್ಬ ಮಾನವನಲ್ಲಿ ಮಾನವೀಯ ಮೌಲ್ಯಗಳು ತುಂಬಿದರೆ ಸಮಾಜದ ಎಲ್ಲಾ ಅನಾಹುತಗಳನ್ನು ತಹಬದಿಗೆ ತರಬಹುದು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ಜಿ.ಪಂ. ಮಾಜಿ ಸದಸ್ಯ ವಿ.ಪಿ.ಶಶಿಧರ್ ಮಾತನಾಡಿ, ಕೆಡುಕನ್ನು ಹೋಗಲಾಡಿಸಿ ಒಳಿತನ್ನು ಉಂಟುಮಾಡುವ ಆಯುಧ ಪೂಜೆ ಹಾಗೂ ವಿಜಯದಶಮಿಯ ಸಂದರ್ಭದಲ್ಲಿ ಭಯೋತ್ಪಾದನೆ ಮತಾಂತರ ಅರಾಜಕತೆ ವಿರುದ್ಧವಾಗಿ ಜನರ ಮನಸ್ಸು ಪುಟಿದೇಳಬೇಕು ಶಾಂತಿ ಸೌಹಾರ್ದತೆ ಸಮಾಜದಲ್ಲಿ ನೆಲೆಸಬೇಕೆಂದರು. ತಾಲೂಕು ಪಂಚಾಯಿತಿ ಸದಸ್ಯೆ ಒಡಿಯಪ್ಪನ ವಿಮಾಲಾವತಿ, ಠಾಣಾಧಿಕಾರಿ ಅನೂಪ್ ಮಾದಪ್ಪ, ಗ್ರಾ.ಪಂ. ಮಾಜಿ ಅಧ್ಯಕ್ಷ ಎಂ.ಎ.ಉಸ್ಮಾನ್ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಿ.ಆರ್.ಸುಕುಮಾರ್ ಜನತೆಗೆ ಆಯುಧ ಪೂಜೆ ಹಾಗೂ ವಿಜಯದಶಮಿಯ ಶುಭಾಶಯ ಕೋರಿದರು. ವೇದಿಕೆಯಲ್ಲಿ ಗ್ರಾ.ಪಂ. ಸದಸ್ಯರುಗಳಾದ ಕೆ.ಇ.ಕರೀಂ,ರಜಾಕ್, ಸೋಮಯ್ಯ, ಗಂಗಮ್ಮ ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷ ಡಿ.ನರಸಿಂಹ ಉಪಸ್ಥಿತರಿದ್ದರು.

ಸುಂಟಿಕೊಪ್ಪದಲ್ಲಿ ಹೆಚ್ಚುವರಿ ಆಟೋ ನಿಲ್ದಾಣದಲ್ಲಿ ಹೆಚ್ಚುವರಿ ಆಟೋ ನಿಲ್ದಾಣ ಕಲ್ಪಿಸಿಕೊಡ ಬೇಕೆಂದು ಜನಪ್ರತಿನಿಧಿಗಳಿಗೆ ಆಟೋಚಾಲಕರ ಸಂಘದ ಅಧ್ಯಕ್ಷ ಮುಸ್ತಾಫ ಮನವಿ ಸಲ್ಲಿಸಿದರು.

ಸರಕಾರಿ ಪ್ರೌಢಶಾಲಾ ಮಕ್ಕಳು ಪ್ರಾರ್ಥಿಸಿ, ಆಟೋಚಾಲಕ ಶಿವಮಣಿ ನಿರೂಪಿಸಿ, ಸಂಘದ ಪದಾಧಿಕಾರಿ ರವೀಂದ್ರ ಸ್ವಾಗತಿಸಿ, ವಂದಿಸಿದರು.