ಮಡಿಕೇರಿ, ಅ. 10: ದಸರಾ, ಮೊಹರಂ, ಕ್ರಿಸ್ಮಸ್ ಇತ್ಯಾದಿ ಹಬ್ಬಾಚರಣೆಯ ಜೊತೆ ಅಧ್ಯಾತ್ಮ ಜ್ಞಾನವನ್ನೂ ಅರಿಯುವಂತಾದರೆ ಆಚರಣೆಗೆ ಅರ್ಥ ಬರುತ್ತದೆ, ಜೀವನಕ್ಕೊಂದು ಅರ್ಥ ಬರುತ್ತದೆ ಎಂದು ಕೊಡಗು ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಹೇಳಿದರು.

ನಿನ್ನೆ ದಿನ ಮಕ್ಕಳ ದಸರಾ ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಆಚರಣೆ ಗಳಿಂದ ನಮ್ಮಲ್ಲಿ ಮನೋವಿಕಾಸ ಉಂಟಾಗುವದು ಅವಶ್ಯ, ಅದಕ್ಕಾಗಿ ಆಧ್ಯಾತ್ಮಿಕ ಜ್ಞಾನ ಮುಖ್ಯ ಎಂದರು. ಮಹಾಭಾರತದಲ್ಲಿ ಕೃಷ್ಣನನ್ನು ಅಂತರಾತ್ಮಕ್ಕೂ, ಪಾಂಡವರನ್ನು ಪಂಚೇಂದ್ರಿಯ ಗಳಿಗೂ, ಕೌರವರನ್ನು ಮನಸ್ಸನ್ನು ಹಾಳುಗೆಡಹುವ ಬೇಡದ ಆಲೋಚನೆಗಳಿಗೂ ಹೋಲಿಸಲಾಗಿದೆ ಎಂದ ಅವರು, ಮೊದಲು ಮನಸ್ಸನ್ನು ಗೆಲ್ಲಬೇಕು, ಇದನ್ನೆ ಪ್ರಾಫೆಟ್ ಮಹಮದರ "ಮನಸ್ಸು ನಮ್ಮ ದೊಡ್ಡವೈರಿ, ಅದನ್ನು ಮೊದಲು ಗೆಲ್ಲಬೇಕು ಇದೇ ಜಿಹಾದ್" ಎಂಬ ಮಾತನ್ನು ಉಲ್ಲೇಖಿಸಿದರು.

ವೃತ್ತ ನಿರೀಕ್ಷಕ ಮೇದಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿ ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ ಕೇಶವ ಪ್ರಸಾದ್ ಮಾತನಾಡಿ ಮಕ್ಕಳ ಸೃಜನಶೀಲತೆ ಬೆಳಕಿಗೆ ಬರಲು ಮಕ್ಕಳ ದಸರಾ ಸಹಕಾರಿ ಎಂದರು. ಶೇ. ಅರವತ್ತಕ್ಕಿಂತ ಹೆಚ್ಚು ಯುವ ಜನತೆ ಇರುವ ಭಾರತ ಮುಂದೊಂದು ದಿನ ರಾಷ್ಟ್ರದ ನಾಯಕನಾಗುತ್ತಾನೆ ಎಂದರು. ಭಾರತ ಮಧುಮೇಹದ ರಾಜಧಾನಿಯಾಗಿ ಪರಿವರ್ತಿತ ವಾಗುತ್ತಿದ್ದು, ರೋಟರಿ ಮಿಸ್ಟಿಹಿಲ್ಸ್ ಮಡಿಕೇರಿಯಲ್ಲಿ ಅದರ ನಿರ್ಮೂಲನೆಗೆ ಶಿಬಿರಗಳ ಮೂಲಕ ಕಾಳಜಿ ತೋರುತ್ತಿದೆ ಎಂದರು.

ನಗರಸಭಾ ಸದಸ್ಯ ರಮೇಶ್ ಅವರು ಮಾತನಾಡಿ, ದಸರಾ ಸಮಿತಿ ಅಚ್ಚುಕಟ್ಟಾಗಿ ಕಾರ್ಯಕ್ರಮ ರೂಪಿಸುತ್ತಿದ್ದು, ಜನತೆ ಖುದ್ದಾಗಿ ಬಂದು ಸಾಕ್ಷೀಕರಿಸಬೇಕು ಎಂದು ಕೋರಿದರು. ಸದಸ್ಯ ಉಸ್ಮಾನ್ ದಸರಾ ಆಚರಣೆಯ ಹಿಂದಿನ ಶ್ರಮವನ್ನು ಸ್ಮರಿಸಿದರು.

ಪ್ರಥಮ ಪ್ರಜೆ ಕಾವೇರಮ್ಮ ಸೋಮಣ್ಣ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಧ್ಯಕ್ಷ ಮಹೇಶ್ ಜೈನಿ, ನಗರಸಭಾ ಸದಸ್ಯರಾದ ಉಣ್ಣಿಕೃಷ್ಣ, ಅನಿತಾ ಪೂವಯ್ಯ, ಶ್ರೀಮತಿ ಬಂಗೇರ, ನಗರಸಭೆ ಆಯುಕ್ತೆ ಪುಷ್ಪಾವತಿ, ಲೀಲಾ ಶೇಷಮ್ಮ, ಉದಯಕುಮಾರ್, ಮಿಸ್ಟಿಹಿಲ್ಸ್ ಕಾರ್ಯದರ್ಶಿ ಡಾ. ನವೀನ್ ಹಾಜರಿದ್ದರು. ಉಪಾಧ್ಯಕ್ಷ ಬೈಶ್ರೀ ಪ್ರಕಾಶ್ ಸ್ವಾಗತಿಸಿ, ಚುಮ್ಮಿ ದೇವಯ್ಯ ವಂದನಾರ್ಪಣೆ ಮಾಡಿದರು.