ಚೆಟ್ಟಳ್ಳಿ, ಜ. 25: ದುಬಾರೆಯ ಆನೆಶಿಬಿರದಲ್ಲಿ ಅರಣ್ಯದಿಂದ ಬಂದ ಮದವೇರಿದ ಕಾಡಾನೆಯೊಂದು ಕಳೆದ ಹತ್ತುದಿನಗಳಿಂದ ಸುತ್ತಾಡುತ್ತಾ ದಾಂಧಲೆ ನಡೆಸುತ್ತಿದೆ.ಆನೆ ಶಿಬಿರದಲ್ಲಿ ಸುಮಾರು 33 ಸಾಕಾನೆಗಳಿದ್ದು ಬೆಳಗಿನ ಉಪಹಾರದ ನಂತರ ಆನೆಗಳನ್ನೆಲ್ಲ ಮೇಯಲು ಕಾಡಿಗೆ ಬಿಡಲಾಗುತ್ತಿದೆ. ಕೆಲವೊಮ್ಮೆ ಆನೆಗಳ ಜಾಡನ್ನು ಹಿಡಿದು ಬರುವ ಕಾಡಾನೆಗಳು ಕೆಲ ಸಮಯ ಆನೆಯೊಂದಿಗೆ ಸರಸ ಸಲ್ಲಾಪವಾಡಿ ಹಿಂದಿರುಗುತ್ತವೆ.

ಆದರೆ ಕೆಲವು ದಿನಗಳಿಂದ ಮದವೇರಿದ ಕಾಡಾನೆಯೊಂದು ಸಾಕಾನೆಯ ಜಾಡನ್ನು ಹಿಡಿದು ದುಬಾರೆಯ ಆನೆ ಶಿಬಿರದೊಳಗೆ ನುಗ್ಗಿ ಸಾಕಾನೆಯೊಳಗೆ ಸೇರಿಕೊಂಡು ತೊಂದರೆ ನೀಡುತ್ತಿದೆ. ಸಾಕಾನೆಗಳಾದ ತೀರ್ಥರಾಮ, ಅಜೇಯ, ಗೋಪಿಯ ಮೇಲೆಲ್ಲ ಎರಗಿ ಗಾಯ ಮಾಡಿದೆ. ಮದವೇರಿದರಿಂದ ಶಿಬಿರದ ಹೆಣ್ಣಾನೆಗಳ ಮೇಲೆರಗುತಿದೆ.

ಸಿಬ್ಬಂದಿಗಳ ವಸತಿಗೃಹ, ಶಾಲೆ ಹಾಗೂ ಸ್ಕ್ರಾಲ್‍ಗಳಲ್ಲಿ ಬಂಧಿತ ಪುಂಡಾನೆಗಳತ್ತ ತೆರಳುತ್ತಾ ಓಡಾಡುತ್ತಿದೆ. ಪ್ರವಾಸಿಗರು ಬರುವ ಜಾಗದಲ್ಲೇ ತೆರಳಿ ಹೊಳೆಯ ಬದಿಯಲ್ಲೇ ಓಡಾಡುತ್ತಿರುವದರಿಂದ ಸುತ್ತಲಿನ ಜನತೆಗೆ ಎಚ್ಚರಿಕೆಯಿಂದಿರಲು ಅರಣ್ಯ ಇಲಾಖೆ ಮಾಹಿತಿ

(ಮೊದಲ ಪುಟದಿಂದ) ನೀಡಿರುವದರ ಜೊತೆಗೆ ನಾಲ್ಕುದಿನಗಳವರೆಗೆ ಆನೆ ಶಿಬಿರಕ್ಕೆ ಪ್ರವಾಸಿಗರ ಪ್ರವೇಶವನ್ನು ಕಡ್ಡಾಯವಾಗಿ ನಿಷೇದಿಸಿದೆ.

ಆನೆಕಾಡಿನ ಉಪವಲಯ ಅರಣ್ಯಾಧಿಕಾರಿ ಕನ್ನಂಡ ರಂಜನ್ ಅವರನ್ನು ಸಂಪರ್ಕಿಸಿದಾಗ ಮದವೇರಿದ ಕಾಡಾನೆಯೊಂದು ಶಿಬಿರದಲ್ಲಿ ನುಗ್ಗಿದ್ದು, ಮೇಲಾಧಿಕಾರಿ ಗಳಿಗೆ ತಿಳಿಸಲಾಗಿ ಅವರ ಮಾರ್ಗ ದರ್ಶನದಂತೆ ಕಾಡಾನೆಯನ್ನು ಕಾಡಿಗೆ ಅಟ್ಟಲು ಪ್ರಯತ್ನಿಸುತ್ತಿರುವ ದಾಗಿ, ಸಾಕಾನೆಗಳಿಗೆ ತೊಂದರೆ ಯಾಗದಂತೆ ಆನೆ ಮಾವುತರು, ಕಾವಾಡಿಗಳು, ಸಿಬ್ಬಂದಿಗಳು ಬೆಂಕಿಹಾಕುತ್ತಾ ಹಗಲಿರುಳು ಕಾವಲು ಕಾಯುತ್ತಾ ಭಯ ದಿಂದಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. - ಕರುಣ್‍ಕಾಳಯ್ಯ