ಮಡಿಕೇರಿ, ಅ. 10: ಹೃದಯಾಘಾತಕ್ಕೊಳಗಾಗಿ ನಿಧನರಾದ ವಕೀಲ, ವೀರಾಜಪೇಟೆ ತಾಲೂಕು ಕ.ಸಾ.ಪ. ಮಾಜಿ ಅಧ್ಯಕ್ಷ ಬಿ.ಜಿ. ರಘುನಾಥ್ ನಾಯಕ್ ಅವರ ಆತ್ಮಕ್ಕೆ ಶಾಂತಿಕೋರಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಕ.ಸಾ.ಪ. ಜಿಲ್ಲಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಗೌರವ ಕಾರ್ಯದರ್ಶಿ ಡಾ. ಮೇಚಿರ ಸುಭಾಶ್ ನಾಣಯ್ಯ ಅವರು ಚಟುವಟಿಕೆಯಿಂದ ಕೂಡಿದ್ದ ರಘುನಾಥ್ ನಾಯಕ್ ಉತ್ತಮ ಕವಿಗಳಾಗಿದ್ದರು. ಕವನಗಳ ಮೂಲಕ ಛಾಪು ಮೂಡಿಸಿದ್ದರು. ಅವರ ಅಗಲಿಕೆಯಿಂದ ಪರಿಷತ್‍ಗೆ ನಷ್ಟವಾಗಿದೆ ಎಂದರು.

ಮಡಿಕೇರಿ ತಾಲೂಕು ಘಟಕದ ಅಧ್ಯಕ್ಷ ಕುಡೆಕಲ್ ಸಂತೋಷ್ ಮಾತನಾಡಿ ಮುಂದಾಲೋಚನೆ ಹೊಂದಿದ ರಘುನಾಥ್ ನಾಯಕ್ ಪರಿಷತ್‍ನಲ್ಲಿ ಬದಲಾವಣೆ ಬಯಸಿದ್ದರು. ನೇರ ನಡೆ - ನುಡಿ ಹೊಂದಿದ್ದ ಅವರು, ಅವಕಾಶ ವಂಚಿತ ಪ್ರತಿಭೆಗಳನ್ನು ಗುರುತಿಸುವ ಕಾರ್ಯವಾಗಬೇಕೆಂಬ ಕನಸು ಕಂಡಿದ್ದರು. ಅವರ ಸಾವು ಸಾಹಿತ್ಯಲೋಕಕ್ಕೆ ನಷ್ಟವಾದಂತಾಗಿದೆ ಎಂದರು. ಶಿಕ್ಷಕರಾದ ಸಿದ್ಧರಾಜು ಬೆಳ್ಳಯ್ಯ, ಎಸ್.ಡಿ. ಪ್ರಶಾಂತ್ ಅವರುಗಳು ಮಾತನಾಡಿದರು. ಈ ಸಂದರ್ಭ ಜಿಲ್ಲಾ ಗೌರವ ಕಾರ್ಯದರ್ಶಿ ಕೆ.ಎಸ್. ರಮೇಶ್, ತಾಲೂಕು ಕಾರ್ಯದರ್ಶಿ ಕೂಡಕಂಡಿ ದಯಾನಂದ, ರಾಜಣ್ಣ, ತನುಶ್ರೀ, ಪವಿತಾ ಇನ್ನಿತರರಿದ್ದರು.

ಸಂತಾಪ

ಸಾಹಿತಿ ರಘುನಾಥ್ ನಾಯಕ್ ಅವರ ಅಕಾಲಿಕ ನಿಧನಕ್ಕೆ ಕ.ಸಾ.ಪ. ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಮಡಿಕೇರಿ ತಾಲೂಕು ಮಾಜಿ ಅಧ್ಯಕ್ಷ ಕೆ.ಟಿ. ಬೇಬಿ ಮ್ಯಾಥ್ಯು ಅವರುಗಳು ಸಂತಾಪ ಸೂಚಿಸಿದ್ದಾರೆ.

ಸಂಘ ಸಂಸ್ಥೆಗಳ ಸಂತಾಪ

ವೀರಾಜಪೇಟೆ: ವೀರಾಜಪೇಟೆ ವಕೀಲ ಬಿ.ಜಿ. ರಘುನಾಥ್ ನಾಯಕ್ ಅವರ ನಿಧನಕ್ಕೆ ಜೆಡಿಎಸ್. ಜಿಲ್ಲಾ ಸಮಿತಿಯ ಕಾರ್ಯಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.

ವಕೀಲನಾಗಿ, ರಾಜಕೀಯ ಮುತ್ಸದ್ಧಿಯಾಗಿ, ಸಾಹಿತಿಯಾಗಿ, ಕಾರ್ಮಿಕ ಸಂಘಟನೆಗಳ ಅಧ್ಯಕ್ಷರಾಗಿ, ಸಲಹೆಗಾರರಾಗಿ, ಸಮಾಜ ಸೇವಕರಾಗಿ ರಘುನಾಥ್ ನಾಯಕ್ ಅವರು ಸಲ್ಲಿಸಿದ ಸೇವೆಯನ್ನು ಜನತೆ ಮರೆಯುವಂತಿಲ್ಲ ಎಂದು ಸಂಕೇತ್ ಪೂವಯ್ಯ ತಿಳಿಸಿದ್ದಾರೆ.

ವೀರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕ್‍ನ ಮಾಜಿ ಅಧ್ಯಕ್ಷರಾಗಿದ್ದ ವಕೀಲ ಬಿ.ಜಿ. ರಘುನಾಥ್ ಅವರು ನಿರ್ದೇಶಕರಾಗಿಯೂ ಪಟ್ಟಣ ಬ್ಯಾಂಕ್ ಮೂಲಕ ಸಹಕಾರ ಕ್ಷೇತ್ರದಲ್ಲಿ ದುಡಿಯುತ್ತಿದ್ದರು. ಇವರ ನಿಧನಕ್ಕೆ ಬ್ಯಾಂಕ್‍ನ ಆಡಳಿತ ಮಂಡಳಿ ಅಧ್ಯಕ್ಷ ಕರ್ನಂಡ ಎಂ. ಸೋಮಯ್ಯ ಹಾಗೂ ವ್ಯವಸ್ಥಾಪಕ ಸಿ.ಎಸ್. ಪ್ರಕಾಶ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದ ರಘುನಾಥ್ ನಾಯಕ್ ಅವರ ನಿಧನಕ್ಕೆ ಕಾಂಗ್ರೆಸ್ ಸೇವಾದಳದ ಜಿಲ್ಲಾ ಸಮಿತಿಯ ಅಧ್ಯಕ್ಷ ಚಿಲ್ಲವಂಡ ಪಿ. ಕಾವೇರಪ್ಪ ಹಾಗೂ ಎಂ.ಎಲ್. ಸೈನುದ್ದೀನ್ ಸಂತಾಪ ವ್ಯಕ್ತ ಪಡಿಸಿದ್ದಾರೆ.

ಸಂತಾಪ

ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷ ಬಿ.ಜಿ. ರಘುನಾಥ್ ನಾಯಕ್ ಅವರ ಅಕಾಲಿಕ ಮರಣಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಂತಾಪ ವ್ಯಕ್ತಪಡಿಸಿದೆ. ಇಂದು ತುರ್ತು ಸಭೆ ಸೇರಿದ ಪರಿಷತ್ತಿನ ಸದಸ್ಯರು ಶ್ರದ್ಧಾಂಜಲಿ ಸಲ್ಲಿಸುವದರೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು.

ಈ ಸಂದರ್ಭ ವೀರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮುಲ್ಲೇಂಗಡ ಮಧೋಶ್ ಪೂವಯ್ಯ ಮಾತನಾಡಿ, ರಘುನಾಥ್ ನಾಯಕ್ ಅವರ ಅಗಲಿಕೆ ಕನ್ನಡ ಸಾಹಿತ್ಯ ಪರಿಷತ್ತಿಗೆ ತುಂಬಲಾರದ ನಷ್ಟ ಎಂದರು ಹೇಳಿದರು. ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಉಪಸ್ಥಿತರಿದ್ದು ಸಂತಾಪ ಸೂಚಿಸಿದರು.