ಮಡಿಕೇರಿ, ನ. 23: ಇದೊಂದು ವಿಚಾರ ಪೊಲೀಸರ ನಿದ್ದೆ ಕೆಡಿಸುತ್ತಿದೆ. ಜಿಲ್ಲೆಯ ವಿವಿಧೆಡೆ 4-5 ಮಂದಿ ಅಪರಿಚಿತರು ಶಾಲೆಗಳ ಸುತ್ತಾ ಸುತ್ತುತ್ತಿದ್ದಾರೆ. 4 ರಿಂದ 7ನೇ ತರಗತಿವರೆಗಿನ ಮಕ್ಕಳ ಚಲನ-ವಲನಗಳನ್ನು ಗಮನಿಸುತ್ತಿದ್ದಾರೆ. ಒಂಟಿಯಾಗಿ ಓಡಾಡುವ ಮಗುವಿಗೆ ಚಾಕಲೆಟ್ ನೀಡಿ ಮಾತಿಗೆ ಆಹ್ವಾನಿಸುತ್ತಿದ್ದಾರೆ... ಅಪಹರಣಕ್ಕೆ ಯತ್ನಿಸುತ್ತಿದ್ದಾರೆ.

ಜಿಲ್ಲೆಯ ವೀರಾಜಪೇಟೆ, ಸಿದ್ದಾಪುರ, ಕಡಂಗ, ಭಾಗಮಂಡಲ ಹಾಗೂ ಇತರ ಗ್ರಾಮೀಣ ಪ್ರದೇಶಗಳಲ್ಲಿ ಕಳೆದ 15 ದಿನಗಳಿಂದ ವಿಚಿತ್ರ ಬೆಳವಣಿಗೆಗಳು ಕಂಡು ಬಂದಿವೆ.

ವೀರಾಜಪೇಟೆ ಪಟ್ಟಣ ಮಧ್ಯದಲ್ಲೇ ಒಂಟಿ ವಿದ್ಯಾರ್ಥಿ ಬಾಲೆಗೆ ಚಾಕಲೆಟ್ ನೀಡಿದ ಅಪರಿಚಿತರ ತಂಡ ಆಕೆಯನ್ನು ಮಾತನಾಡಿಸಿದೆ. ಆಕೆ ಉತ್ತರಿಸದೆ ಓಡಿ ಹೋಗಿ ಚಾಕಲೆಟ್ ಬಿಸಾಕಿದ್ದಾಳೆ. ಅಪರಿಚಿತರು ಆ ಚಾಕಲೆಟ್ ಅನ್ನು ಮತ್ತೆ ಹೆಕ್ಕಿ ಪರಾರಿಯಾಗಿದ್ದಾರೆ.

ಕಡಂಗದಲ್ಲಿ ಮುಸ್ಲಿಂ ವಿದ್ಯಾರ್ಥಿಯೊಬ್ಬಳೊಂದಿಗೆ ಕೂಡಾ ಹೀಗೇ ವರ್ತಿಸಲಾಗಿದೆ. ಮತ್ತೊಂದೆಡೆ ಬಾಲಕನನ್ನು ಶಾಲೆ ಹೊರಗೆ ತಡೆದು ‘ನಿಮ್ಮ ತಂದೆ ಬಂದಿದ್ದಾರೆ ಬಾ’ ಎಂದು ಕರೆದಿದ್ದಾರೆ. ಗಾಬರಿಗೊಂಡ ಬಾಲಕ ಶಾಲೆ ಒಳಗೆ ಓಡಿ ಶಿಕ್ಷಕರ ಸಹಾಯದಿಂದ ತಂದೆಗೆ ಫೋನಾಯಿಸಿದಾಗ ಅವರು ಬಂದಿಲ್ಲ ಎಂಬದು ಖಚಿತವಾಗಿದೆ.

ತಾ. 21 ರಂದು ತಾವೂರು - ಚೆಟ್ಟಿಮಾನಿಯಲ್ಲಿ ಮಹಿಳೆ ಮತ್ತು ಮಕ್ಕಳು ಮಾತ್ರ ಇರುವ ಮನೆ ಗುರುತಿಸಿ ಕೀಟಲೆ ಮಾಡಲಾಗಿದೆ.

ಮೈಸೂರು - ಬೆಂಗಳೂರುಗಳಲ್ಲಿ ಮಕ್ಕಳ ಮಾರಾಟ ಜಾಲ ಇದ್ದು, ಮಕ್ಕಳನ್ನು ಅಪಹರಿಸಿ ಲಕ್ಷಾಂತರ ರೂಪಾಯಿಗಳಿಗೆ ಮಾರುವ ದಂಧೆ ಇರುವ ಬಗ್ಗೆ ಈಗಾಗಲೇ ಮಾಧ್ಯಮಗಳಲ್ಲಿ ಪ್ರಕಟಗೊಂಡಿದೆ.

ಈ ಮಧ್ಯೆ ಇಂತಹಾ ದೊಡ್ಡ ‘ರ್ಯಾಕೆಟ್’ ಅನ್ನು ಇತ್ತೀಚೆಗೆ ಮೈಸೂರಿನಲ್ಲಿ ಪೊಲೀಸರು ಪತ್ತೆಹಚ್ಚಿ ಕೆ.ಆರ್. ಆಸ್ಪತ್ರೆಯ ನೌಕರ, ಖಾಸಗಿ ವೈದ್ಯೆ ಸೇರಿದಂತೆ ಹಲವರನ್ನು ಜೈಲಿಗೆ ತಳ್ಳಿದ್ದಾರೆ.

ಮಕ್ಕಳ ಮಾರಾಟವಲ್ಲದೆ ಹಲವರ ಮೂತ್ರಪಿಂಡಗಳನ್ನು ಆಪರೇಷನ್ ಮೂಲಕ ಕಿತ್ತು ಮಾರಾಟ ಮಾಡುವ ಜಾಲದ ಬಗ್ಗೆಯೂ ಪೊಲೀಸರು ಗಮನಹರಿಸಿದ್ದಾರೆ.

ಪ್ರವಾಸಿಗರು, ವ್ಯಾಪಾರಿಗಳ ಸೋಗಿನಲ್ಲಿ ಕೊಡಗನ್ನು ಪರಿಚಯಿಸಿಕೊಳ್ಳುವ ಸಮಾಜ ಘಾತುಕರು, ಅಕ್ರಮ ಚಟುವಟಿಕೆಗಳಿಗೆ ಕೊಡಗನ್ನು ಗುರಿಯಾಗಿಸಿಕೊಂಡಿರುವದು ವಿಪರ್ಯಾಸ.

ಪುಟ್ಟ ಮಕ್ಕಳಿರುವ ಶಾಲೆಗಳಲ್ಲಿ ಕ್ಯಾಮರಾಗಳ ಅಳವಡಿಕೆ, ಮಕ್ಕಳಿಗೆ ಅಪರಿಚಿತರು ಬಂದರೆ ಶಾಲೆಗೆ ಬಂದು ಮಾಹಿತಿ ನೀಡಲು ತಿಳುವಳಿಕೆ, ಒಬ್ಬೊಬ್ಬರೇ ಆವರಣದಿಂದ ಹೊರಗೆ ಉಳಿಯದಂತೆ ಕಿವಿಮಾತು, ಶಾಲೆಗಳಲ್ಲಿ ಸೂಕ್ತ ರಕ್ಷಣಾ ವ್ಯವಸ್ಥೆ ಬಗ್ಗೆ ತುರ್ತು ಗಮನಹರಿಸಬೇಕಿದೆ. ಪೋಷಕರೂ ಕೂಡಾ ಮಕ್ಕಳ ಚಲನ-ವಲನಗಳ ಬಗ್ಗೆ ಎಚ್ಚರವಹಿಸುವದು ಅಗತ್ಯ.

ಶಾಲೆಗಳಿರುವ ಎಲ್ಲಾ ಊರುಗಳಲ್ಲಿ ಜನತೆ ಕೂಡಾ ಅಪರಿಚಿತ ವ್ಯಕ್ತಿಗಳ ಆಗಮನದ ಬಗ್ಗೆ ಮಾಹಿತಿ ಪಡೆಯುವದು, ಅಂತಹ ವ್ಯಕ್ತಿಗಳು ಪ್ರವಾಸಿಗರು ಎಂದಾದಲ್ಲಿ ಅವರು ಉಳಿದುಕೊಳ್ಳುವ ಹೋಂಸ್ಟೇ, ವಸತಿ ಗೃಹಗಳ ಪೂರ್ಣ ದಾಖಲಾತಿ ನೀಡುವಂತೆ ಒತ್ತಾಯಿಸಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವದು ಸೂಕ್ತ. ಗ್ರಾಮ ಪಂಚಾಯಿತಿಗಳು ಕೂಡಾ ಗ್ರಾಮಸ್ಥರ ತುರ್ತು ಸಭೆ ಕರೆದು ಇಂತಹ ಸಂದರ್ಭಗಳಲ್ಲಿ ಅನುಸರಿಸಬೇಕಾದ ಮುಂಜಾಗ್ರತೆ, ಪೊಲೀಸ್ ಇಲಾಖೆಯ ದೂರವಾಣಿ ಸಂಖ್ಯೆ ನೀಡುವ ಬಗ್ಗೆ ಚರ್ಚಿಸಬೇಕಿದೆ. ಪೊಲೀಸ್ ಇಲಾಖೆ ಕೂಡಾ ನಾಗರಿಕರ, ಪೋಷಕರ ಜವಾಬ್ದಾರಿ ಬಗ್ಗೆ ಸಾರ್ವಜನಿಕ ಪ್ರಕಟಣೆ ನೀಡಬೇಕಿದೆ.

- ಜಿ. ಚಿದ್ವೀಲಾಸ್