ಕುಶಾಲನಗರ, ಸೆ. 12: ವೇಶ್ಯಾವಾಟಿಕೆ ನಡೆಸುತ್ತಿದ್ದ ಹೋಂಸ್ಟೇ ಒಂದಕ್ಕೆ ಕುಶಾಲನಗರ ಗ್ರಾಮಾಂತರ ಪೊಲೀಸರು ಧಾಳಿ ಮಾಡಿ ಓರ್ವ ಮಹಿಳೆ ಸೇರಿದಂತೆ ಒಟ್ಟು 5 ಮಂದಿಯನ್ನು ಬಂಧಿಸಿದ ಪ್ರಕರಣ ಗುಡ್ಡೆಹೊಸೂರು ಸಮೀಪದ ಚಿಕ್ಕಬೆಟ್ಟಗೇರಿ ಬಳಿ ನಡೆದಿದೆ.ಅಲ್ಲಿನ ರಿವರ್ ವ್ಯೂ ಎಂಬ ಹೋಂಸ್ಟೇಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ತಿಳಿದ ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಕ್ಯಾತೆಗೌಡ ನೇತೃತ್ವದಲ್ಲಿ ಗ್ರಾಮಾಂತರ ಠಾಣಾಧಿಕಾರಿ ಜೆ.ಇ.ಮಹೇಶ್ ಮತ್ತು ಸಿಬ್ಬಂದಿಗಳು ಭಾನುವಾರ ರಾತ್ರಿ ಧಾಳಿ ಮಾಡಿ ಹೋಂಸ್ಟೇ ನಡೆಸುತ್ತಿದ್ದ ಪ್ರಸನ್ನ, ಸೋಮವಾರಪೇಟೆಯ ಕೂಗೆಕೋಡಿ ಹಾಗೂ ಶಾಂತವೇರಿಯ ಮಧು, ಪ್ರಮೋದ್ ಹಾಗೂ ವಕೀಲ, ಕುಶಾಲನಗರದ ಹೋಟೆಲ್ ಉದ್ಯಮಿ ರಾಜೀವ್ ಎಂಬವರುಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ಸೋಮವಾರಪೇಟೆ ವ್ಯಾಪ್ತಿಯ ಮಹಿಳೆಯನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಕೂಡಿಗೆಯ ಅಬಲಾಶ್ರಮಕ್ಕೆ ಸೇರಿಸಿದ್ದು, ಹೆಚ್ಚಿನ ವಿಚಾರಣೆ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವದು ಎಂದು ವೃತ್ತ ನಿರೀಕ್ಷಕ ಕ್ಯಾತೆಗೌಡ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಸೇರಿದ ಮಾರುತಿ ಅಲ್ಟೋ ಕಾರು ಮತ್ತು ರೂ. 30,500 ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಜೆ.ಇ.ಮಹೇಶ್ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಸಹಾಯಕ ಠಾಣಾಧಿಕಾರಿ ಭಾರತಿ, ಸಿಬ್ಬಂದಿಗಳಾದ ಆಶಾ, ಜಯಪ್ರಕಾಶ್, ಲೋಕೇಶ್, ಮಹೇಶ್, ಸುಧೀಶ್ ಮತ್ತು ಚಾಲಕ ಪಾಲ್ಗೊಂಡಿದ್ದರು.