ಬೆAಗಳೂರು, ನ. ೨೭: ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಸಂಬAಧಿಸಿದAತೆ ಕೇಂದ್ರ ಸರ್ಕಾರದ ಕರಡು ಅಧಿಸೂಚನೆಗೆ ಪರ್ಯಾಯವಾಗಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಕಸ್ತೂರಿರಂಗನ್ ವರದಿಯಲ್ಲಿನ ಶಿಫಾರಸುಗಳು ಹಾಗೂ ಅದರ ಅನುಷ್ಠಾನದಿಂದ ಉಂಟಾಗಬಹುದಾದ ಪರಿಣಾಮಗಳನ್ನು ಪರಿಶೀಲಿಸಲು ಕರ್ನಾಟಕ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ'ಕುನ್ಹಾ ಅವರ ಅಧ್ಯಕ್ಷತೆಯಲ್ಲಿ ಒಂಬತ್ತು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಇದರ ಜೊತೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಸಮಿತಿಗಳನ್ನು ನೇಮಿಸಿ ಅಧಿಸೂಚನೆ ಹೊರಡಿಸಲಾಗಿದೆ.
ಡಿ'ಕುನ್ಹಾ ನೇತೃತ್ವದ ಸಮಿತಿಯು ಪಶ್ಚಿಮ ಘಟ್ಟ ಪ್ರದೇಶದ ನೈಜ ಪರಿಸ್ಥಿತಿಯನ್ನು ಅಧ್ಯಯನ ಮಾಡಿ, ಕಸ್ತೂರಿರಂಗನ್ ವರದಿಯಲ್ಲಿ ಅಗತ್ಯವಿರುವ ತಿದ್ದುಪಡಿಗಳು ಮತ್ತು ಪರಿಷ್ಕರಣೆಗಳ ಕುರಿತು ಸರ್ಕಾರಕ್ಕೆ ಶಿಫಾರಸುಗಳನ್ನು ಸಲ್ಲಿಸಲಿದೆ. ಪ್ರದೇಶದ ಭೌಗೋಳಿಕ ಸ್ಥಿತಿ, ಭೂಮಿಯ ಬಳಕೆ, ಈಗಾಗಲೇ ನೀಡಿರುವ ಭೂ ಮಂಜೂರಾತಿ, ಹಕ್ಕುಪತ್ರಗಳಿಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳು ಸೇರಿದಂತೆ ವಿವಿಧ ಅಂಶಗಳನ್ನು ಪರಿಶೀಲನೆಗೆ ಒಳಪಡಿಸಲಿದೆ.
ಸ್ಥಳ ಪರಿಶೀಲನೆ ನಡೆಸಿ ಸ್ಥಳೀಯರ ಅಭಿಪ್ರಾಯಗಳನ್ನು ಸಂಗ್ರಹಿಸುವ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿ ಮಟ್ಟದ ಸಮಿತಿಗಳಿಗೆ ವಹಿಸಲಾಗಿದೆ. ಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲಿ ನಾಲ್ವರು ಸದಸ್ಯರನ್ನು ಒಳಗೊಂಡ ಈ ಸಮಿತಿಗಳು ಸಂಬAಧಪಟ್ಟ ಗ್ರಾಮಗಳಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಲಿವೆ. ಜನರಿಗೆ ಪ್ರಸ್ತಾವಿತ ಪರಿಸರ ಸೂಕ್ಷ್ಮ ವಲಯದ ಬಗ್ಗೆ ಮಾಹಿತಿ ನೀಡುವುದು, ಅವರ ಆಕ್ಷೇಪಣೆ ಮತ್ತು ಸಲಹೆಗಳನ್ನು ಸ್ವೀಕರಿಸುವುದರ ಜೊತೆಗೆ ಗ್ರಾಮಗಳ ನಕ್ಷೆಗಳನ್ನು ಸಿದ್ಧಪಡಿಸಿ ಅಂತಿಮಗೊಳಿಸುವುದು ಇವುಗಳ ಕರ್ತವ್ಯವಾಗಿದೆ. ನಂತರ ಈ ದಾಖಲೆಗಳನ್ನು ಉನ್ನತಮಟ್ಟದ ಸಮಿತಿಗೆ ಸಲ್ಲಿಸಬೇಕಿದೆ.
ಇಸ್ರೋ ಮಾಜಿ ಅಧ್ಯಕ್ಷ ಕೆ. ಕಸ್ತೂರಿರಂಗನ್ ನೇತೃತ್ವದ ಸಮಿತಿ ನೀಡಿದ್ದ ವರದಿಯನ್ನು ಆಧರಿಸಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಪಶ್ಚಿಮಘಟ್ಟದ ಹಲವು ಭಾಗಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸುವ ಪ್ರಕ್ರಿಯೆ ನಡೆಸುತ್ತಿದೆ. ೨೦೧೪ರಲ್ಲಿ ಮೊದಲ ಕರಡು ಅಧಿಸೂಚನೆ ಹೊರಬಂದಿದ್ದು, ಈ ವರ್ಷದ ಜುಲೈನಲ್ಲಿ ಆರನೇ ಕರಡು ಅಧಿಸೂಚನೆ ಪ್ರಕಟಿಸಲಾಗಿದೆ. ಆದರೆ, ಈ ಪ್ರಸ್ತಾವನೆಗೆ ಕರ್ನಾಟಕದ ವಿವಿಧ ಪಕ್ಷಗಳ ಜನಪ್ರತಿನಿಧಿಗಳಿಂದ ನಿರಂತರ ವಿರೋಧ ವ್ಯಕ್ತವಾಗುತ್ತಿದೆ.
ಪಶ್ಚಿಮಘಟ್ಟದ ಒಟ್ಟು ೫೬,೮೨೫.೭ ಚದರ ಕಿಲೋಮೀಟರ್ ಪ್ರದೇಶವನ್ನು ಪರಿಸರ ಸೂಕ್ಷö್ಮ ವಲಯವೆಂದು ಗುರುತಿಸುವ ಪ್ರಸ್ತಾವನೆಯಲ್ಲಿ ಕರ್ನಾಟಕದ ಪಾಲು ೨೦,೬೬೮ ಚದರ ಕಿಲೋಮೀಟರ್ ಆಗಿದೆ. ಅಂದರೆ ಒಟ್ಟು ಪ್ರಸ್ತಾವಿತ ಪ್ರದೇಶದ ಶೇ ೩೬.೩ರಷ್ಟು ಕರ್ನಾಟಕದಲ್ಲಿದೆ. ಮಹಾರಾಷ್ಟç, ಕರ್ನಾಟಕ, ಕೇರಳ, ತಮಿಳುನಾಡು, ಗೋವಾ ಮತ್ತು ಗುಜರಾತ್ ರಾಜ್ಯಗಳ ವ್ಯಾಪ್ತಿಯಲ್ಲಿ ಪಶ್ಚಿಮಘಟ್ಟದ ಈ ಪ್ರದೇಶ ಹರಡಿಕೊಂಡಿದೆ.
ಕೇAದ್ರದ ಆರನೇ ಕರಡು ಅಧಿಸೂಚನೆ ಕುರಿತು ಚರ್ಚಿಸಲು ರಾಜ್ಯ ಸರ್ಕಾರ ಸೆಪ್ಟೆಂಬರ್ನಲ್ಲಿ ಮೂರು ದಿನಗಳ ವಿಶೇಷ ವಿಧಾನಮಂಡಲ ಅಧಿವೇಶನ ಕರೆದಿತ್ತು. ಈ ಸಂದರ್ಭ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯನ್ನು ಅಧಿಸೂಚಿತ ಅರಣ್ಯ ಪ್ರದೇಶಗಳಿಗೆ ಮಾತ್ರ ಸೀಮಿತಗೊಳಿಸಬೇಕು, ಕೃಷಿ ಮತ್ತು ಜನವಸತಿ ಪ್ರದೇಶಗಳನ್ನು ಹೊರಗಿಡಬೇಕು ಹಾಗೂ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿ ಕಾಯುತ್ತಿರುವವರ ಭೂಮಿಯನ್ನು ಪ್ರಸ್ತಾವಿತ ವ್ಯಾಪ್ತಿಯಿಂದ ಕೈಬಿಡಬೇಕು ಎಂದು ಕೇಂದ್ರವನ್ನು ಒತ್ತಾಯಿಸುವ ನಿರ್ಣಯವನ್ನು ವಿಧಾನಸಭೆ ಮತ್ತು ವಿಧಾನಪರಿಷತ್ತು ಸರ್ವಾನುಮತದಿಂದ ಅಂಗೀಕರಿಸಿದ್ದವು.
ಇದೇ ವೇಳೆ, ಕಸ್ತೂರಿರಂಗನ್ ವರದಿಯ ಬಗ್ಗೆ ಜನರಿಗೆ ಸಮರ್ಪಕ ಮಾಹಿತಿ ನೀಡುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂಬ ಟೀಕೆಗಳೂ ಕೇಳಿಬಂದಿವೆ. ವರದಿಯ ಕನ್ನಡ ಅನುವಾದವನ್ನು ಜನರಿಗೆ ಲಭ್ಯವಾಗಿಸದಿರುವುದರಿಂದ ಸ್ಥಳೀಯರಲ್ಲಿ ಗೊಂದಲ ಮತ್ತು ಆತಂಕ ಮೂಡಿದೆ ಎಂದು ಪರಿಸರ ಸಂಘಟನೆಗಳು ಹಾಗೂ ನಾಗರಿಕ ಸಮಾಜದ ಪ್ರತಿನಿಧಿಗಳು ಆರೋಪಿಸಿದ್ದಾರೆ. ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳಿಗೆ ಕರಡು ಅಧಿಸೂಚನೆಯಲ್ಲಿ ಈಗಾಗಲೇ ವಿನಾಯಿತಿ ನೀಡಲಾಗಿದ್ದರೂ, ತಮ್ಮ ಕೃಷಿ ಚಟುವಟಿಕೆಗಳಿಗೆ ನಿರ್ಬಂಧ ಬೀಳಬಹುದು ಎಂಬ ಆತಂಕ ರೈತರಲ್ಲಿ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.
ಪರಿಸರ ಸೂಕ್ಷ್ಮ ವಲಯದ ಪ್ರಸ್ತಾವಿತ ವ್ಯಾಪ್ತಿಯಲ್ಲಿ ಗಣಿಗಾರಿಕೆ, ಕೆಲವು ಬಗೆಯ ಕಟ್ಟಡ ನಿರ್ಮಾಣ, ಶಾಖೋತ್ಪನ್ನ ವಿದ್ಯುತ್ ಘಟಕಗಳು ಮತ್ತು ಕೆಂಪು ವರ್ಗದ ಕೈಗಾರಿಕೆಗಳಿಗೆ ನಿರ್ಬಂಧ ವಿಧಿಸುವ ಪ್ರಸ್ತಾವನೆ ಇದೆ. ಹೀಗಾಗಿ ಪರಿಸರ ಸಂರಕ್ಷಣೆಯ ಉದ್ದೇಶ ಮತ್ತು ಸ್ಥಳೀಯ ಜನರ ಬದುಕು, ಕೃಷಿ ಹಾಗೂ ಭೂಹಕ್ಕುಗಳ ನಡುವಿನ ಸಮತೋಲನ ಸಾಧಿಸುವುದು ರಾಜ್ಯ ಸರ್ಕಾರ ರಚಿಸಿರುವ ಸಮಿತಿಗಳ ಮುಂದಿರುವ ಪ್ರಮುಖ ಸವಾಲಾಗಿದೆ. ಡಿ'ಕುನ್ಹಾ ಸಮಿತಿಯ ಪರಿಶೀಲನೆ ಮತ್ತು ಗ್ರಾಮಮಟ್ಟದ ಸಮಿತಿಗಳ ವರದಿಗಳ ಆಧಾರದ ಮೇಲೆ ರಾಜ್ಯದ ಮುಂದಿನ ನಿಲುವು ರೂಪುಗೊಳ್ಳುವ ನಿರೀಕ್ಷೆಯಿದೆ.