ಸೋಮವಾರಪೇಟೆ,ನ.೨೭: ಮಂಗಳೂರಿಗೆ ಕೆಲಸಕ್ಕೆಂದು ತೆರಳುತ್ತಿದ್ದ ಪಟ್ಟಣ ಸಮೀಪದ ಕಲ್ಕಂದೂರು ಗ್ರಾಮದ ಯುವಕನೋರ್ವ, ನೆರೆಯ ಸುಬ್ರಹ್ಮಣ್ಯ-ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿರುವ ಬಿಳಿನೆಲೆ ಎಂಬಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾಗಿರುವ ಘಟನೆ ಇಂದು ನಡೆದಿದೆ.

ಕಲ್ಕಂದೂರು ಗ್ರಾಮದ ಕೃಷ್ಣಪ್ಪ ಎಂಬವರ ಪುತ್ರ, ಅವಿವಾಹಿತನಾಗಿದ್ದ ವಿಶ್ವಾಸ್ (೩೧) ಎಂಬಾತನೇ ಭೀಕರ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾದ ಯುವಕ. ಮಂಗಳೂರಿನ ಖಾಸಗಿ ಕಂಪೆನಿಯೊAದರಲ್ಲಿ ಕೆಲಸ ಮಾಡುತ್ತಿದ್ದ ವಿಶ್ವಾಸ್, ಕಳೆದ ಎರಡು ದಿನಗಳ ಹಿಂದೆ ರಜೆ ಮೇಲೆ ಕಲ್ಕಂದೂರಿನ ಮನೆಗೆ ಆಗಮಿಸಿದ್ದ. ತನ್ನ ಸ್ಕೂಟರ್‌ನಲ್ಲಿ ಇಂದು ವಾಪಸ್ ಮಂಗಳೂರಿಗೆ ತೆರಳುತ್ತಿದ್ದ ಸಂದರ್ಭ ಪೂರ್ವಾಹ್ನ ೧೧.೫೦ರ ಸುಮಾರಿಗೆ ಸುಬ್ರಹ್ಮಣ್ಯ-ಧರ್ಮಸ್ಥಳ ರಾಜ್ಯ ಹೆದ್ದಾರಿಯ ಕಡಬ ತಾಲೂಕಿಗೆ ಒಳಪಟ್ಟ ಬಿಳಿನೆಲೆ ಗ್ರಾಮದ ಕೋಟೆ ಹೊಳೆ ಸೇತುವೆ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಅಸುನೀಗಿದ್ದಾನೆ. ಕಡಬದಿಂದ ಸುಬ್ರಹ್ಮಣ್ಯ ಕಡೆಗೆ ಆಗಮಿಸುತ್ತಿದ್ದ ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಕಿಯಾ ಕಂಪೆನಿಯ ಕಾರು (ಕೆ.ಎ.೧೨, ಎಂ.ಎ.೮೬೫೩) ಚಾಲಕನ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಎದುರು ಭಾಗದಲ್ಲಿ ತೆರಳುತ್ತಿದ್ದ ವಾಹನವೊಂದನ್ನು ಓವರ್ ಟೇಕ್ ಮಾಡುತ್ತಾ ರಭಸದಲ್ಲಿ ನುಗ್ಗಿದ ಕಾರು, ಸ್ಕೂಟರ್‌ಗೆ ನೇರ ಢಿಕ್ಕಿಯಾದ ಪರಿಣಾಮ ಸ್ಕೂಟರ್ ಸಹಿತ ವಿಶ್ವಾಸ್ ರಸ್ತೆಗೆ ಎಸೆಯಲ್ಪಟ್ಟಿದ್ದಾನೆ.

ತಕ್ಷಣ ಸ್ಥಳೀಯರಾದ ಪ್ರಕಾಶ್, ತಿಲಕ್ ಎಂಬವರುಗಳು ತೆರಳಿ ಗಾಯಾಳುವನ್ನು ಉಪಚರಿಸಿ ಆಂಬ್ಯುಲೆನ್ಸ್ ಮೂಲಕ ಕಡಬ ಆಸ್ಪತ್ರೆಗೆ ಸಾಗಿಸಿದ್ದಾರೆ. ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಅದಾಗಲೇ ಯುವಕ ಮೃತಪಟ್ಟಿರುವ ಬಗ್ಗೆ ದೃಢಪಡಿಸಿದ್ದಾರೆ. ಅಪಘಾತದಿಂದ ವಿಶ್ವಾಸ್‌ನ ಬಲಗಾಲು ತೊಡೆಯ ಭಾಗದಿಂದಲೇ ತುಂಡಾಗಿದ್ದು, ತಲೆ ಸೇರಿದಂತೆ ದೇಹದ ಇತರ ಭಾಗಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದೆ.

ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಕಾರು ಚಲಾಯಿಸಿ ಸ್ಕೂಟರ್ ಸವಾರನ ಸಾವಿಗೆ ಕಾರಣನಾದ ಕಿಯಾ ಕಂಪೆನಿಯ ಕಾರಿನ ಚಾಲಕ ನಂದನ್ ಎಂಬಾತನ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಘಟನೆಯ ಪ್ರತ್ಯಕ್ಷದರ್ಶಿ, ಬಿಳಿನೆಲೆ ಗ್ರಾಮದಲ್ಲಿ ಶಾಮಿಯಾನ ಅಂಗಡಿ ಇಟ್ಟುಕೊಂಡಿರುವ ಪ್ರಕಾಶ್ ಅವರು ಕಾರಿನ ಚಾಲಕನ ವಿರುದ್ಧ ಕಡಬ ಠಾಣೆಗೆ ದೂರು ನೀಡಿದ್ದು, ಪಿಎಸ್‌ಐ ಸಂತೋಷ್ ಅವರು ಸ್ಥಳ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ. ಮೃತ ವಿಶ್ವಾಸ ತಂದೆ ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾನೆ.