ಮಡಿಕೇರಿ, ನ. ೨೬: ಇತಿಹಾಸ ಪ್ರಸಿದ್ಧ ಕುಂದ ಸಮೀಪದ ಬೊಟ್ಟಿಯತ್ ಮೂಂದ್‌ನಾಡ್ ಕೈಮುಡಿಕೆ ಪುತ್ತರಿ ಕೋಲ್ ಮಂದ್ ತಾ. ೨೮ರಂದು ನಡೆಯಲಿದೆ.

ಬೊಟ್ಟಿಯತ್ ನಾಡ್, ಕುತ್ತ್ ನಾಡ್ ಹಾಗೂ ಬೇರಳಿ ನಾಡಿಗೆ ಸೇರುವ ಎಲ್ಲಾ ಗ್ರಾಮಗಳು ಒಂದೆಡೆ ಸೇರಿ ಕೈಮುಡಿಕೆ ಪುತ್ತರಿ ಕೋಲ್‌ಮಂದ್ ನಡೆಸುತ್ತವೆ. ಪುತ್ತರಿ ಕೋಲಾಟ್, ಉಮ್ಮತಾಟ್, ಬೊಳಕಾಟ್, ಕತ್ತಿಯಾಟ್, ಪರೆಯಕಳಿ, ವಾಲಗತಾಟ್, ಎರವ ಆಟ್ ಹಾಗೂ ಕೊಡವ ಪಾಟ್ ಪೈಪೋಟಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ಹಾಗೂ ಸಾರ್ವಜನಿಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಬೆಳಿಗ್ಗೆ ೧೦ ಗಂಟೆಗೆ ಮೂರು ನಾಡಿನವರು ಸೇರಿ “ಮಂದ್ ಪುಡಿಪೊ” ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ, ಮೂರು ನಾಡಿನ ಸಾಂಪ್ರದಾಯಿಕ ಪುತ್ತರಿ ಕೋಲಾಟ ನಡೆಯಲಿದೆ. ೧೦.೩೦ಕ್ಕೆ ನಡೆಯುವ ಸಭಾ ಕಾರ್ಯಕ್ರಮ ಬೊಟ್ಟಿಯತ್ ಮೂಂದ್ ನಾಡ್ ಅಧ್ಯಕ್ಷ ಹಾಗೂ ತಕ್ಕಮುಖ್ಯಸ್ಥರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಬೆಂಗಳೂರು ಕೊಡವ ಸಮಾಜ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ, ಭಾಗಮಂಡಲ ಹಾಗೂ ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾನಂಡ ಪ್ರಥ್ಯು ಭಾಗವಹಿಸಲಿದ್ದಾರೆ. ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಗುತ್ತದೆ. ಕುತ್ತ್ ನಾಡ್ ತಕ್ಕರಾದ ಪಂದಿಮಾಡ ರಮೇಶ್ ಅಚ್ಚಪ್ಪ, ಬೇರಳಿನಾಡ್ ತಕ್ಕರಾದ ಮಳವಂಡ ಭುವೇಶ್ ದೇವಯ್ಯ ಸೇರಿದಂತೆ ಮೂರು ನಾಡಿನ ಊರು ತಕ್ಕರು, ಮಂದ್ ಕಾರ್ಯದರ್ಶಿಗಳು ಉಪಸ್ಥಿತರಿರಲಿದ್ದಾರೆ. ಸಭೆಯ ನಂತರ ಸಾಂಸ್ಕೃತಿಕ ಪೈಪೋಟಿ ನಡೆಯಲಿದೆ ಎಂದು ಮಂದ್ ಕಾರ್ಯದರ್ಶಿ ಉಮೇಶ್ ಕೇಚಮಯ್ಯ ತಿಳಿಸಿದ್ದಾರೆ.