ಕುಶಾಲನಗರ, ನ. ೨೪: ಕುಶಾಲನಗರ ಗೌಡ ಸಮಾಜದ ಆಶ್ರಯದಲ್ಲಿ ತಾ. ೨೫ ರಂದು (ಇಂದು) ಹುತ್ತರಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುವುದು ಎಂದು ಸಮಾಜದ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್ ತಿಳಿಸಿದ್ದಾರೆ.

ಗೌಡ ಸಮಾಜದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಮ್ಮನಕೊಲ್ಲಿಯ ಹಾರಂಗಿ ರಸ್ತೆ ಸಮೀಪದಲ್ಲಿರುವ ಗೌಡ ಯುವಕ ಸಂಘದ ಗದ್ದೆಯಲ್ಲಿ ಈ ಬಾರಿಯ ಹುತ್ತರಿ ಆಚರಣೆ ನಡೆಯಲಿದೆ. ಸಮಾಜದ ವಿವಿಧ ಸಹ ಸಂಘಟನೆಗಳ ಸಹಯೋಗದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಗೌಡ ನಿವೃತ್ತ ಸೈನಿಕರ ಕೂಟ ಹಾಗೂ ಗೌಡ ಸಾಂಸ್ಕೃತಿಕ ವೇದಿಕೆಯ ಸಹಕಾರದೊಂದಿಗೆ ಸಂಜೆ ೬.೩೦ಕ್ಕೆ ಶ್ರೀ ವೆಂಕಟರಮಣ ಸ್ವಾಮಿಯ ನೆಲ್ಲಕ್ಕಿ ಅಡಿಯಲ್ಲಿ ಪ್ರಾರ್ಥನೆ ಸಲ್ಲಿಸಿ, ನೆರೆಕಟ್ಟುವ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಗುವುದು. ಬಳಿಕ ಸಮಾಜದ ಹಿರಿಯರು ಹಾಗೂ ಪ್ರಮುಖರಾದ ಕುಲ್ಲಚೆಟ್ಟಿ ಕಾಶಿ ಪೂವಯ್ಯ ಅವರು ಕದಿರು ಗುತ್ತಿಯನ್ನು ಹೊತ್ತುಕೊಂಡು, ಸಮಾಜದ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್ ಹಾಗೂ ಆಡಳಿತ ಮಂಡಳಿಯ ನೇತೃತ್ವದಲ್ಲಿ ಮೆರವಣಿಗೆ ಮೂಲಕ ಗಣಪತಿ ದೇವಸ್ಥಾನಕ್ಕೆ ತೆರಳಲಿದ್ದಾರೆ. ಅಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಗುಮ್ಮನಕೊಲ್ಲಿಯ ಗೌಡ ಯುವಕ ಸಂಘದ ಹುತ್ತರಿ ಗದ್ದೆಗೆ ತೆರಳಲಾಗುವುದು. ರಾತ್ರಿ ೭.೩೦ಕ್ಕೆ ಕದಿರು ಕೊಯ್ಲು ನೆರವೇರಿಸಿ ನೆರೆದಿರುವವರಿಗೆ ಕದಿರು ವಿತರಿಸಲಾಗುವುದು ಎಂದು ತಿಳಿಸಿದರು. ಗೌಡ ಯುವಕ ಸಂಘ ಹಾಗೂ ಗೌಡ ಯೂತ್ ಕ್ಲಬ್ ಸದಸ್ಯರು ಹುತ್ತರಿ ಹಬ್ಬದ ಸಂಪ್ರದಾಯದAತೆ ಐದು ಬಗೆಯ ಸೊಪ್ಪುಗಳು, ಬಾಳೆಕಂಬ ಹಾಗೂ ತೋರಣಗಳಿಂದ ಗದ್ದೆಯನ್ನು ಸಿಂಗರಿಸಲಿದ್ದಾರೆ. ಸಿಡಿಮದ್ದು ಪ್ರದರ್ಶನವೂ ನಡೆಯಲಿದೆ. ಕದಿರು ಕೊಯ್ಲಿನ ಬಳಿಕ ಗೌಡ ಸಮಾಜಕ್ಕೆ ಮರಳಿ ವೆಂಕಟರಮಣ ಸ್ವಾಮಿಯ ನೆಲ್ಲಕ್ಕಿಯ ದೀಪದ ಕಂಬಕ್ಕೆ ಕದಿರು ಕಟ್ಟಲಾಗುವುದು. ಗಣಪತಿ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಿಗೆ ತೆರಳಿ ಕದಿರು ಕಟ್ಟಿ ದೇವರ ಆಶೀರ್ವಾದ ಪಡೆಯುವುದರೊಂದಿಗೆ ಆಚರಣೆ ಮುಕ್ತಾಯಗೊಳ್ಳಲಿದೆ ಎಂದರು. ಗೋಷ್ಠಿಯಲ್ಲಿ ಗೌಡ ಸಮಾಜದ ಕಾರ್ಯದರ್ಶಿ ಕುಲ್ಲಚನ ಹೇಮಂತ್, ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ, ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕುಯ್ಯಮುಡಿ ಶ್ರೀವಾಣಿ, ಪದ್ಮಾವತಿ ಗೌಡ ಮಹಿಳಾ ಸಂಘದ ಅಧ್ಯಕ್ಷೆ ಮರದಾಳು ಭೋಜಮ್ಮ, ಗೌಡ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ಪಾಣತ್ತಲೆ ಪುಷ್ಪ, ಗೌಡ ನಿವೃತ್ತ ಸೈನಿಕರ ಕೂಟದ ಅಧ್ಯಕ್ಷ ದೇವಜನ ಚಿಣ್ಣಪ್ಪ ಹಾಗೂ ಗೌಡ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಸೂದನ ಗೋಪಾಲ್ ಉಪಸ್ಥಿತರಿದ್ದರು.