ಕುಶಾಲನಗರ, ನ. ೨೪: ಹಲವು ವರ್ಷಗಳ ಇತಿಹಾಸ ಹೊಂದಿರುವ ಕುಶಾಲನಗರದ ಐತಿಹಾಸಿಕ ಶ್ರೀ ಮಹಾಗಣಪತಿ ದೇವಾಲಯದ ವಾರ್ಷಿಕ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ತಾ. ೨೭ ರಂದು ರಥೋತ್ಸವ ನಡೆಯಲಿದ್ದು, ಜಾನುವಾರು ಜಾತ್ರೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿವಿಧ ಮನರಂಜನಾ ಚಟುವಟಿಕೆಗಳೊಂದಿಗೆ ಈ ಬಾರಿಯ ಜಾತ್ರೆ ಅದ್ದೂರಿಯಾಗಿ ಜರುಗಲಿದೆ.
ಕುಶಾಲನಗರದ ಐದು ಪ್ರಮುಖ ರಸ್ತೆಗಳು ಸೇರುವ ಸ್ಥಳದಲ್ಲಿ ನೆಲೆಗೊಂಡಿರುವ ಬಯಲು ಗಣಪತಿ ದೇವಾಲಯವು ಧಾರ್ಮಿಕ ಹಾಗೂ ಐತಿಹಾಸಿಕ ಮಹತ್ವ ಹೊಂದಿದೆ. ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಭಕ್ತರ ಆರಾಧನಾ ಕೇಂದ್ರವಾಗಿರುವ ಈ ದೇವಾಲಯದ ಜಾತ್ರೆ ಹಲವು ದಶಕಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಪ್ರತಿ ವರ್ಷ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಳ್ಳುವುದು ವಿಶೇಷ.
ದೇವಾಲಯದ ಇತಿಹಾಸವನ್ನು ಮೆಲುಕು ಹಾಕುವ ಗೌರವಾಧ್ಯಕ್ಷ ಹಾಗೂ ಮಾಜಿ ಅಧ್ಯಕ್ಷ ವಿ.ಎನ್. ವಸಂತಕುಮಾರ್ ಅವರು, ೧೯೬೨ರ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರು ದೇವಾಲಯದ ಅಧ್ಯಕ್ಷರಾಗಿದ್ದರೆ, ತಾವು ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸಿದ್ದಾಗಿ ಸ್ಮರಿಸುತ್ತಾರೆ. ಊರಿನ ಹಿರಿಯರು ಹಾಗೂ ಗ್ರಾಮಗಳ ಪಟೇಲರ ಸಹಕಾರದೊಂದಿಗೆ ರಥೋತ್ಸವ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆದುಕೊಂಡು ಬಂದಿವೆ ಎಂದು ತಿಳಿಸುತ್ತಾರೆ.
ಆಗಿನ ದಿನಗಳಲ್ಲಿ ಬೆಟಗೇರಿ, ಗುಡ್ಡೆಹೊಸೂರು, ಬೈಚನಹಳ್ಳಿ, ಮಾದಾಪಟ್ಟಣ, ಮುಳ್ಳುಸೋಗೆ, ಬೊಳ್ಳೂರು, ಕೂಡ್ಲೂರು ಹಾಗೂ ಕೂಡುಮಂಗಳೂರು ಗ್ರಾಮಗಳ ಪ್ರಮುಖರು ಜಾತ್ರೆಯ ವಿವಿಧ ಜವಾಬ್ದಾರಿಗಳನ್ನು ಹಂಚಿಕೊAಡು ನಿರ್ವಹಿಸುತ್ತಿದ್ದರು. ಗ್ರಾಮಸ್ಥರ ಒಗ್ಗಟ್ಟು ಮತ್ತು ಸಹಕಾರದಿಂದ ಜಾತ್ರೆ ಯಶಸ್ವಿಯಾಗಿ ನಡೆಯುತ್ತಿತ್ತು ಎಂದು ಅವರು ನೆನಪಿಸಿಕೊಳ್ಳುತ್ತಾರೆ.
ಹಾರಂಗಿ ಅಣೆಕಟ್ಟು ನಿರ್ಮಾಣದ ಸಂದರ್ಭ ಅಲ್ಲಿನ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ದೇವಾಲಯದ ಅಭಿವೃದ್ಧಿಗೆ ಸಹಕರಿಸಿದ್ದನ್ನೂ ಅವರು ಸ್ಮರಿಸುತ್ತಾರೆ. ಆರ್. ಗುಂಡೂರಾವ್ ಅವರು ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ರಾಜಕೀಯ ಪ್ರವೇಶಿಸಿದ ಬಳಿಕ ಗ್ರಾಮದ ಹಿರಿಯರಾದ ಲಕ್ಷö್ಮಣ ಶೆಟ್ಟಿ ಅವರು ದೇವಾಲಯದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಜಾತಿ, ಧರ್ಮದ ಭೇದವಿಲ್ಲದೆ ಒಗ್ಗೂಡಿ ಜಾತ್ರೆಯನ್ನು ಆಚರಿಸುತ್ತಿದ್ದ ಪರಂಪರೆ ಇಲ್ಲಿನ ವಿಶೇಷತೆಯಾಗಿತ್ತು.
ದೇವಾಲಯದ ಪೂಜಾ ಕೈಂಕರ್ಯಗಳನ್ನು ಹಿಂದಿನ ದಿನಗಳಲ್ಲಿ ಹಿರಿಯ ಅರ್ಚಕ ಆರ್.ಕೆ. ಸುಬ್ಬ ಅವಧಾನಿಗಳು ನಿರ್ವಹಿಸುತ್ತಿದ್ದರು. ನಂತರ ಆರ್.ಎಸ್. ಕಾಶಿಪತಿ ಅವರು ಪೂಜಾ ಜವಾಬ್ದಾರಿ ವಹಿಸಿಕೊಂಡಿದ್ದರು. ಪ್ರಸ್ತುತ ಪ್ರಧಾನ ಅರ್ಚಕ ಆರ್.ಕೆ. ನಾಗೇಂದ್ರ ಬಾಬು ಅವರು ದೇವಾಲಯದ ಧಾರ್ಮಿಕ ವಿಧಿವಿಧಾನಗಳನ್ನು ಮುನ್ನಡೆಸುತ್ತಿದ್ದಾರೆ.
ವರದರಾಜ ಶೆಟ್ಟಿ, ಪಿ.ಎಸ್. ತಮ್ಮಯ್ಯ, ನರಸಿಂಹಯ್ಯ ಸೇರಿದಂತೆ ಹಲವು ಹಿರಿಯರು ದೇವಾಲಯದ ಆಡಳಿತದ ಜವಾಬ್ದಾರಿ ನಿರ್ವಹಿಸಿದ್ದಾರೆ. ೧೯೮೧ರ ನಂತರ ವಿ.ಎನ್. ವಸಂತಕುಮಾರ್ ಅವರು ಅಧ್ಯಕ್ಷರಾಗಿ ಸುದೀರ್ಘ ಅವಧಿಯಲ್ಲಿ ದೇವಾಲಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ಹಿಂದೆ ಕುಶಾಲನಗರದ ಹಳೆಯ ಮಾರುಕಟ್ಟೆ ರಸ್ತೆಯ ಬದಿಯ ಜಾತ್ರಾ ಮೈದಾನದಲ್ಲಿ ಉತ್ಸವ ನಡೆಯುತ್ತಿತ್ತು. ವಿದ್ಯುತ್ ತಂತಿಗಳ ಅಳವಡಿಕೆ ಸೇರಿದಂತೆ ವಿವಿಧ ಕಾರಣಗಳಿಂದ ಅಲ್ಲಿ ಜಾತ್ರೆ ನಡೆಸಲು ಸಾಧ್ಯವಾಗದ ಸಂದರ್ಭದಲ್ಲಿ ಅಂದಿನ ಅಧ್ಯಕ್ಷ ವಿ.ಎನ್. ವಸಂತಕುಮಾರ್ ಅವರು ಗುಂಡೂರಾವ್ ಬಡಾವಣೆಯಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಮೂಲಕ ಜಾತ್ರೆಗೆ ಮರುಜೀವ ನೀಡಿದರು.
ಇದೀಗ ಗುಂಡೂರಾವ್ ಬಡಾವಣೆಯಲ್ಲಿ ದನಗಳ ಜಾತ್ರೆ, ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮನರಂಜನಾ ಪಾರ್ಕ್ ಸೇರಿದಂತೆ ವಿವಿಧ ಆಕರ್ಷಣೆಗಳೊಂದಿಗೆ ಜಾತ್ರೆ ನಡೆಯುತ್ತಿದೆ.
ಪ್ರಸ್ತುತ ಕುಶಾಲನಗರದ ಗಣಪತಿ ದೇವಾಲಯವು ಸುಮಾರು ೧೧ ಸೆಂಟ್ ವಿಸ್ತೀರ್ಣದ ಜಾಗ ಹೊಂದಿದ್ದು, ಮೈಸೂರು ರಸ್ತೆಯಲ್ಲಿ ಹೆಚ್ಚುವರಿಯಾಗಿ ಸುಮಾರು ೨ ಸೆಂಟ್ ಜಾಗವಿದೆ. ಇದೀಗ ಸುಮಾರು ೧೦ ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ನೂತನ ದೇವಾಲಯ ನಿರ್ಮಾಣಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ದೇವಾಲಯ ಸಮಿತಿ ಕಾರ್ಯಕಾರಿ ಮಂಡಳಿ ಅಧ್ಯಕ್ಷ ಎಂ.ಕೆ. ದಿನೇಶ್ ತಿಳಿಸಿದ್ದಾರೆ.
ದೇವಾಲಯದ ರಥ ನಿರ್ಮಾಣಕ್ಕೆ ತಮ್ಮ ಜಮೀನಿನ ಮರಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಆಕರ್ಷಕ ರಥ ನಿರ್ಮಾಣಕ್ಕೂ ಎಂ.ಕೆ. ದಿನೇಶ್ ಸಹಕರಿಸಿದ್ದಾರೆ.
೧೭ನೇ ಶತಮಾನದಲ್ಲಿ ಕೊಡಗು ರಾಜರ ಆಡಳಿತವಿದ್ದ ಸಂದರ್ಭದಲ್ಲಿ ಹೈದರಾಲಿ ದಂಡೆತ್ತಿ ಬಂದಾಗ ದೊಡ್ಡವೀರ ರಾಜೇಂದ್ರ ಅವರು ವಿಜಯಕ್ಕಾಗಿ ಈ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ್ದರು ಎಂಬ ಐತಿಹಾಸಿಕ ಹಿನ್ನೆಲೆಯೂ ದೇವಾಲಯಕ್ಕಿದೆ ಎಂದು ವಿ.ಎನ್. ವಸಂತಕುಮಾರ್ ಮಾಹಿತಿ ನೀಡಿದ್ದಾರೆ.