ಕುಶಾಲನಗರ, ನ. ೨೪: ಕುಶಾಲನಗರ ಕೇರಳ ಸಮಾಜದ ನೂತನ ಸಾಲಿನ ಅಧ್ಯಕ್ಷರಾಗಿ ಸಮಾಜದ ಹಾಲಿ ಅಧ್ಯಕ್ಷ ಪಿ. ರವೀಂದ್ರನ್ ಪುನರಾಯ್ಕೆಗೊಂಡಿದ್ದಾರೆ. ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಮಾಜದ ವಾರ್ಷಿಕ ಮಹಾಸಭೆಯು ಸಮಾಜದ ಕಚೇರಿ ಸಭಾಂಗಣದಲ್ಲಿ ಅಧ್ಯಕ್ಷ ಪಿ. ರವೀಂದ್ರನ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಹಿಂದಿನ ಮಹಾಸಭೆಯ ನಡಾವಳಿಗಳನ್ನು ಓದಿ ಅನುಮೋದಿಸಲಾಯಿತು. ಕಳೆದ ವರ್ಷದ ವಾರ್ಷಿಕ ಚಟುವಟಿಕೆಗಳ ವರದಿಯನ್ನು ಮಂಡಿಸಿ ಅನುಮೋದಿಸಲಾಯಿತು. ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸಿ ಅನುಮೋದಿಸಲಾಯಿತು. ನಂತರ ಸಮಾಜದ ಪ್ರಸ್ತುತ ಚಟುವಟಿಕೆಗಳು ಹಾಗೂ ಮುಂದಿನ ಯೋಜನೆಗಳು, ವಾರ್ಷಿಕ ಸದಸ್ಯತ್ವ ಶುಲ್ಕ ಹಾಗೂ ಬಾಕಿ ಇರುವ ಶುಲ್ಕಗಳ ಕುರಿತು, ಮರಣ ನಿಧಿಯ ಪ್ರಸ್ತುತ ಠೇವಣಿ ಮತ್ತು ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು.