ಮಡಿಕೇರಿ, ನ. ೨೩: ವಿಶ್ವ ಪರಂಪರೆ ಸಪ್ತಾಹ - ೨೦೨೬ರ ಅಂಗವಾಗಿ ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ವತಿಯಿಂದ ನಗರದ ಕೋಟೆ ಆವರಣದಲ್ಲಿರುವ ಸರ್ಕಾರಿ ವಸ್ತು ಸಂಗ್ರಹಾಲಯದಲ್ಲಿ ಒಂದು ದಿನದ ವಿಶೇಷ ಅಂಚೆ ಚೀಟಿ, ಪ್ರಾಚೀನ ನಾಣ್ಯ ಹಾಗೂ ನೋಟುಗಳ ಪ್ರದರ್ಶನ ಗಮನ ಸೆಳೆಯಿತು.
ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಸಿ.ಕೆ.ಬಸವರಾಜು ಅವರು ಮಾತನಾಡಿ ಇಂದಿನ ಪೀಳಿಗೆಗೆ ನಮ್ಮ ಇತಿಹಾಸ ಮತ್ತು ಪರಂಪರೆಯ ಬಗ್ಗೆ ಸರಿಯಾದ ಅರಿವಿಲ್ಲದಿರುವ ಕಾರಣ, ಅವರು ರೂಪಿಸಿಕೊಳ್ಳುವ ಜೀವನಶೈಲಿಯ ಮೇಲೂ ಪರಿಣಾಮ ಬೀರುತ್ತಿದೆ. ಆದ್ದರಿಂದ ಅವರು ಇದರ ಬಗ್ಗೆ ಆಸಕ್ತಿಯಿಂದ ಅಧ್ಯಯನ ಮಾಡಿ, ಜ್ಞಾನವನ್ನು ಬೆಳೆಸಿಕೊಳ್ಳಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಶುಭ ಅವರು ಮಾತನಾಡಿ, ಇಂದಿನ ಯುವಜನತೆ ಮೊಬೈಲ್ ಫೋನ್, ಸಾಮಾಜಿಕ ಜಾಲತಾಣಗಳು ಮತ್ತು ರೀಲ್ಸ್ಗಳ ಅತಿಯಾದ ಬಳಕೆಗೆ ಒಳಗಾಗುತ್ತಿದ್ದಾರೆ. ತಮ್ಮ ಜೀವನದ ನಿಜವಾದ ಮೌಲ್ಯಾಂಕವನ್ನು ಮರೆತು, ಬೇಡದ ವಿಷಯಗಳಲ್ಲಿ ಕಾಲಹರಣ ಮಾಡುತ್ತಾ ಅಮೂಲ್ಯ ಸಮಯ ಮತ್ತು ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ, ಇವೆಲ್ಲವುಗಳ ಸಾಧಕ-ಬಾಧಕಗಳ ಕುರಿತು ಕಿರಿಯ ತಲೆಮಾರಿಗೆ ಅರಿವು ಮೂಡಿಸುವ ಜವಾಬ್ದಾರಿಯುತ ಕೆಲಸ ತುರ್ತಾಗಿ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ವಿಶ್ವ ಪರಂಪರೆ ಸಪ್ತಾಹದ ಪ್ರಯುಕ್ತ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಪರಂಪರೆ ಹಾಗೂ ಇತಿಹಾಸದ ಅರಿವು ಮೂಡಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದ ಪ್ರದರ್ಶನದಲ್ಲಿ ಹುಣಸೂರಿನ ಹೆಸರಾಂತ ನಾಣ್ಯ ಶಾಸ್ತçಜ್ಞ ಹಾಗೂ ಅಪರೂಪದ ನಾಣ್ಯ ಮತ್ತು ನೋಟುಗಳ ಸಂಗ್ರಹಕಾರರಾದ ಪಿ.ಕೆ.ಕೇಶವಮೂರ್ತಿ ಅವರು ಸಂಗ್ರಹಿಸಿರುವ ಕರ್ನಾಟಕದ ಪರಂಪರೆ ಕುರಿತ ವಿಶೇಷ ಅಂಚೆ ಚೀಟಿಗಳು, ಪ್ರಾಚೀನ ನಾಣ್ಯಗಳು ಮತ್ತು ನೋಟುಗಳನ್ನು ಪ್ರದರ್ಶಿಸಲಾಯಿತು.
ರಾಜ್ಯ ಮತ್ತು ರಾಷ್ಟç ಮಟ್ಟದಲ್ಲಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿರುವ ಕೇಶವಮೂರ್ತಿ ಅವರ ಪ್ರದರ್ಶನಗಳ ಸರಣಿಯಲ್ಲಿ ಇದು ೧೮೩ ನೇ ಬೃಹತ್ ಪ್ರದರ್ಶನವಾಗಿದೆ.
ಸಮಾರಂಭದಲ್ಲಿ ಡಾ.ಎಂ.ಜಿ. ಪಾಟ್ಕರ್, ಡಾ. ವಿಜಯಲಕ್ಷಿö್ಮ ಪಾಟ್ಕರ್, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ಎಸ್.ಟಿ. ಶಮ್ಮಿ, ಸರ್ಕಾರಿ ವಸ್ತು ಸಂಗ್ರಹಾಲಯದ ಕ್ಯೂರೇಟರ್ ಬಿ.ಪಿ.ರೇಖಾ, ಇತಿಹಾಸ ಆಸಕ್ತರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.