ಐಗೂರು, ನ. ೨೩: ಲೀಡ್ ಬ್ಯಾಂಕ್ ಮಡಿಕೇರಿ, ಕೆನರಾ ಬ್ಯಾಂಕ್ ಸುಂಟಿಕೊಪ್ಪದ ವತಿಯಿಂದ ಭಾರತೀಯ ರಿಸರ್ವ್ ಬ್ಯಾಂಕ್ ನ ಆದೇಶದಂತೆ ಉಲುಗುಲಿ ಗ್ರಾಮದ ರಾಮಮಂದಿರದಲ್ಲಿ ಆರ್ಥಿಕ ಸೇರ್ಪಡೆ ಸ್ಯಾಚುರೇಶನ್ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ಆರ್ಥಿಕ ಸಲಹೆಗಾರರಾದ ನಬಿ ಅವರು ಮಾತನಾಡಿ ೧೮ ವರ್ಷದಿಂದ ೭೦ ವರ್ಷದ ಒಳಗಿನ ಬ್ಯಾಂಕ್ ಖಾತೆ ಹೊಂದಿರುವ ಖಾತೆದಾರರು ವಾರ್ಷಿಕ ರೂ.೨೦ ಪಾವತಿಸಿದರೆ ಯಾವುದೇ ಅಪಘಾತ ಸಂದರ್ಭದಲ್ಲಿ ವ್ಯಕ್ತಿ ಮರಣ ಹೊಂದಿದರೆ, ಅಂಗವೈಕಲ್ಯ ಉಂಟಾದರೆ ಆ ವ್ಯಕ್ತಿಯ ಕುಟುಂಬಕ್ಕೆ ೨ ಲಕ್ಷ ರೂಗಳ ವಿಮಾ ಯೋಜನೆಯನ್ನು ನೀಡಲಾಗುವುದು ಎಂದ ಅವರು ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮ್ ಯೋಜನೆಯಲ್ಲಿ ೧೮ ರಿಂದ ೫೦ ವರ್ಷದ ಒಳಗೆ ಇರುವ ವ್ಯಕ್ತಿ ತಿಂಗಳಿಗೆ ಒಂದಷ್ಟು ಹಣವನ್ನು ಪಾವತಿಸುವುದರಿಂದ ಆ ವ್ಯಕ್ತಿಗೆ ೬೦ ರ ವಯೋಮಿತಿ ಕಳೆದ ನಂತರ ವ್ಯಕ್ತಿಗೆ ತಿಂಗಳಿಗೆ ಒಂದಷ್ಟು ಹಣವನ್ನು ಪಿಂಚಣಿ ರೂಪದಲ್ಲಿ ಬ್ಯಾಂಕಿನಿAದ ನೀಡಲಾಗುವುದು ಎಂದು ಮಾಹಿತಿ ನೀಡಿದರು. ಸುಂಟಿಕೊಪ್ಪದ ಕೆನರಾ ಬ್ಯಾಂಕಿನ ವ್ಯವಸ್ಥಾಪಕರಾದ ಜೀನಿ ಅವರು ಬ್ಯಾಂಕಿನಲ್ಲಿ ಸಿಗುವ ಸೌಲಭ್ಯದ ಬಗ್ಗೆ ಮಾತನಾಡಿದರು.

ಆರ್ಥಿಕ ಸಲಹೆಗಾರರಾದ ಭವ್ಯ ಅವರು ಕೆವೈಸಿ, ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಯ ಶೂನ್ಯ ಖಾತೆ ತೆರೆಯುವ ಬಗ್ಗೆ ,ಆಧಾರ್ ಜೋಡಣೆ ,ಡಿಜಿಟಲ್ ಪೇಮೆಂಟ್ , ಮತ್ತು ಸೈಬರ್ ಕ್ರೈಂ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು, ಕೆನರಾ ಬ್ಯಾಂಕಿನ ಪ್ರಾದೇಶಿಕ ಕಚೇರಿಯ ಅಧಿಕಾರಿ ಶೃತಿ ಸೋಮನಾ, ವ್ಯವಸ್ಥಾಪಕರಾದ ಶ್ರೀಮತಿ ಜೀನಿ , ಹಾಗೂ ಜಿಲ್ಲಾ ಸಂಯೋಜಕರಾದ ಹರೀಶ್ ಸಿ.ಜಿ, ಸ್ವಸಹಾಯ ಸಂಘಗಳ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.