ಮಡಿಕೇರಿ, ನ. ೨೩: ಲಯನ್ಸ್ ಇಂಟರ್‌ನ್ಯಾಷನಲ್ ಜಿಲ್ಲಾ ೩೧೭ರ ಜಿಲ್ಲಾ ಗವರ್ನರ್ ತಾರಾನಾಥ್ ಎಚ್. ಎಂ. ಅವರು ಗೋಣಿಕೊಪ್ಪ ಲಯನ್ಸ್ ಕ್ಲಬ್‌ಗೆ ಅಧಿಕೃತ ಭೇಟಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಲಬ್ ಅಧ್ಯಕ್ಷ ಶ್ರೀಮಂತ್ ಮುತ್ತಣ್ಣ ಅವರು ಸ್ವಾಗತಿಸಿ, ಕ್ಲಬ್‌ನ ಸೇವಾ ಚಟುವಟಿಕೆಗಳು ಹಾಗೂ ಸಮಾಜಮುಖಿ ಕಾರ್ಯಗಳ ಕುರಿತು ಮಾತನಾಡಿದರು. ಕಾರ್ಯದರ್ಶಿ ಕರುಂಬಯ್ಯ ಕೆ. ಎ. ಅವರು ವಾರ್ಷಿಕ ವರದಿಯನ್ನು ಮಂಡಿಸಿ, ಕ್ಲಬ್ ಕೈಗೊಂಡಿರುವ ವಿವಿಧ ಸೇವಾ ಯೋಜನೆಗಳು ಹಾಗೂ ಸಾಧನೆಗಳ ವಿವರ ನೀಡಿದರು. ಮೆಕೇರಿರ ಮೋಹನ್ ಅವರು ಧ್ವಜವಂದನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಗವರ್ನರ್ ತಾರಾನಾಥ್, ಲಯನ್ಸ್ ಎನ್ನುವುದು ಕೇವಲ ಒಂದು ಸಂಘಟನೆಯಲ್ಲ, ಅದು ಸೇವೆ, ಸ್ನೇಹ ಮತ್ತು ಮಾನವೀಯತೆಯ ಮೌಲ್ಯಗಳನ್ನು ಬೆಸೆಯುವ ಒಂದು ಮಹತ್ತರ ಚಳವಳಿ. ನಾವು ಎಷ್ಟು ಕಾರ್ಯಕ್ರಮಗಳನ್ನು ಮಾಡಿದ್ದೇವೆ ಎನ್ನುವುದಕ್ಕಿಂತ, ನಮ್ಮ ಸೇವೆಯಿಂದ ಎಷ್ಟು ಜನರ ಬದುಕಿನಲ್ಲಿ ಬದಲಾವಣೆ ತಂದಿದ್ದೇವೆ ಎನ್ನುವುದು ಮುಖ್ಯ. ಪ್ರತಿಯೊಬ್ಬ ಲಯನ್ ಸದಸ್ಯರು ಕೂಡ ತನ್ನ ಜವಾಬ್ದಾರಿಯನ್ನು ಅರಿತು ಸಮಾಜದ ಅಗತ್ಯಗಳಿಗೆ ಸ್ಪಂದಿಸಬೇಕು. ಸದಸ್ಯರ ಒಗ್ಗಟ್ಟು ಮತ್ತು ಸಕ್ರಿಯ ಪಾಲ್ಗೊಳ್ಳುವಿಕೆಯೇ ಕ್ಲಬ್‌ನ ನಿಜವಾದ ಶಕ್ತಿ ಎಂದು ಹೇಳಿದರು. ಕ್ಲಬ್‌ನ ಸೇವಾ ಕಾರ್ಯಗಳನ್ನು ಶ್ಲಾಘಿಸಿದ ಅವರು, ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸದಸ್ಯರಿಗೆ ಕರೆ ನೀಡಿದರು. ವೇದಿಕೆಯಲ್ಲಿ ಸಬಿತಾ ತಾರಾನಾಥ್, ಪ್ರಾಂತ್ಯ ಅಧ್ಯಕ್ಷ ಎಂ. ಎ. ಬಾಲಕೃಷ್ಣ, ವಲಯ ಅಧ್ಯಕ್ಷ ಎಂ. ಬಿ. ಕುಟ್ಟಪ್ಪ ಹಾಗೂ ಜಿಲ್ಲಾ ರಾಯಭಾರಿ ಬೋಸ್ ಪೆಮ್ಮಯ್ಯ ಉಪಸ್ಥಿತರಿದ್ದರು.

ಕೊಡಗು ಜಿಲ್ಲೆಯ ವಿವಿಧ ಲಯನ್ಸ್ ಕ್ಲಬ್‌ಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಮಂಗಳೂರು ಭಾಗದ ಲಯನ್ಸ್ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕ್ಲಬ್‌ನ ಖಜಾಂಚಿ ಎ. ಬಿ. ಮಾದಪ್ಪ ಅವರು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಕ್ಲಬ್‌ನ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.