ಐಗೂರು, ನ. ೨೩: ಕಾಜೂರು ಹಿರಿಯ ಪ್ರಾಥಮಿಕ ಶಾಲೆಯ ಕಾವೇರಿ ಸಭಾಂಗಣದಲ್ಲಿ ೨೦೨೬- ೨೭ನೇ ಸಾಲಿನ ಕಾಜೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಹಳೆ ವಿದ್ಯಾರ್ಥಿ ಸಂಘದ ಕಡ್ಲೆರ ಹೊನ್ನಪ್ಪ ಅವರು ವಹಿಸಿದ್ದರು. ಕ್ಲಸ್ಟರ್ ಮಟ್ಟದ ಶಾಲೆಗಳಾದ ಕಾಜೂರು, ಐಗೂರು ಪ್ರೌಢಶಾಲೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಾದ ಬಳಗುಂದ, ಬೇಳೂರು, ಯಡವಾರೆ, ಯಡವನಾಡು, ಕಿರಗಂದೂರು, ಯಡವನಾಡು ವಾಲ್ಮೀಕಿ ಆಶ್ರಮ ಶಾಲೆ, ಮತ್ತು ಸಂತಜೋಸಪರ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಒಟ್ಟು ಒಂಬತ್ತು ಶಾಲೆಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಿದರು.
ಸಿ ಆರ್ ಪಿ ಗಿರೀಶ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಎಪಿಜೆ ಅಬ್ದುಲ್ ಕಲಾಂ ಅವರಂತೆ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮುಂದೆ ಏನಾಗಬೇಕೆಂಬ ಕನಸನ್ನು ಇಟ್ಟುಕೊಳ್ಳುವುದರ ಜೊತೆಗೆ ಆ ಕನಸನ್ನು ನನಸಾಗಿಸುವ ಛಲ ಇಟ್ಟುಕೊಳ್ಳಬೇಕು. ವಿದ್ಯಾರ್ಥಿಗಳು ತಂದೆ ತಾಯಿಗಳು ಮತ್ತು ಗುರು ಹಿರಿಯರನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಕಂಠಪಾಠ, ಧಾರ್ಮಿಕ ಪಠಣ , ಚಿತ್ರಕಲೆ, ಜನಪದ ಹಾಡು, ಜನಪದ ನೃತ್ಯ ಮತ್ತು ದೇಶಭಕ್ತಿ ಗೀತೆಗಳು ನಡೆಯಿತು. ಸ್ಪರ್ಧೆಗಳಲ್ಲಿ ಜಯಗಳಿಸಿದವರಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕ ಸತೀಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರೆ, ಶಿಕ್ಷಕಿ ಅನುಸೂಯ ವಂದಿಸಿದರು.
ಅತಿಥಿಗಳಾಗಿ ನಿವೃತ್ತ ಶಿಕ್ಷಕಿ ವಸಂತಿ ಕುಮಾರಿ, ಮುಖ್ಯ ಶಿಕ್ಷಕಿ ಸರಳಕಮಾರಿ, ಸಂತ ಜೋಸೆಫ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಹ್ಯಾರಿ ಮೋರಸ್ ಮತ್ತು ಪ್ರೌಢಶಾಲಾ ಶಿಕ್ಷಕಿ ರಂಜನಿ ಉಪಸ್ಥಿತರಿದ್ದು, ೯ ಶಾಲೆಗಳ ಶಿಕ್ಷಕರುಗಳು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.