ಸೋಮವಾರಪೇಟೆ, ನ. ೨೨: “ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದ ವಿರುದ್ದ ಜನಾಕ್ರೋಶ ಹೆಚ್ಚಿದೆ. ಇದೇ ಮೊದಲ ಬಾರಿಗೆ ಆಡಳಿತ ಸರ್ಕಾರದ ವಿರುದ್ಧದ ಆಕ್ರೋಶ ಈ ಮಟ್ಟಿಗೆ ಕಾಣುತ್ತಿದೆ. ಎಷ್ಟು ಬೇಗ ಚುನಾವಣೆ ಬರುತ್ತದೋ ಎಂದು ಜನರು ಕಾಯುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರವನ್ನು ತೆಗೆಯಬೇಕೆಂದು ಜನ ನಿರ್ಧರಿಸಿದ್ದಾರೆ. ಮುಂದಿನ ೨೦೨೮ರಲ್ಲಿ ನಿಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ” ಎಂದು ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.

ಪಟ್ಟಣದ ಅಟಲ್ ಜೀ ಸಭಾಂಗಣದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮುಂಬರುವ ಚುನಾವಣೆಗಳನ್ನು ಎನ್‌ಡಿಎ ಮೈತ್ರಿ ಕೂಟದ ನೇತೃತ್ವದಲ್ಲೇ ಎದುರಿಸಲಾಗುತ್ತದೆ. ಕೊಡಗಿನ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಸ್ಪರ್ಧಿಸಬೇಕೆಂದು ಆ ಪಕ್ಷದ ಮುಖಂಡರು ಹೇಳುತ್ತಿದ್ದಾರೆ. ಕ್ಷೇತ್ರದಲ್ಲಿ ನಮ್ಮ ಹಾಗೂ ಅವರ ಶಕ್ತಿ, ಸಂಘಟನೆ ನೋಡಿ ನಂತರ ತೀರ್ಮಾನಿಸುತ್ತೇವೆ ಎಂದರು.

ಮಡಿಕೇರಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಸಂಘಟನೆ ಬಲವಾಗಿದೆ. ಹಿಂದಿನ ಚುನಾವಣೆಗಳಲ್ಲಿ ಕಡಿಮೆ ಅಂತರದಿAದ ಸೋತಿದ್ದೇವೆ. ಚುನಾವಣೆ ಸಂದರ್ಭ ಎಲ್ಲಾ ರೀತಿಯ ಅರ್ಹತೆಗಳನ್ನೂ ಪರಿಗಣಿಸಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು. ಒಟ್ಟಾರೆ ಎನ್‌ಡಿಎ ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಎರಡೂ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದರು.

ಪಕ್ಷದ ಮುಖಂಡರು ಸಾಮಾನ್ಯ ಕಾರ್ಯಕರ್ತರು ಕರೆ ಮಾಡಿದಾಗ ಅವರಿಗೆ ಸ್ಪಂದಿಸಬೇಕು. ಸೋಮವಾರಪೇಟೆ ಮತ್ತು ಕುಶಾಲನಗರ ಭಾಗದಲ್ಲಿ ಜೆಡಿಎಸ್ ಪಕ್ಷ ಗಟ್ಟಿಯಾಗಿದೆ. ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ಸೇರಿದಂತೆ ವಿವಿಧ ಸಮಸ್ಯೆಗಳಿಂದ ಜನರು ಬೇಸತ್ತಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಲು ಮುಂಬರುವ ಚುನಾವಣೆಗಾಗಿ ಜನರು ಕಾಯುತ್ತಿದ್ದಾರೆ ಎಂದು ಹೇಳಿದರು.

ಪಕ್ಷದ ಸಂಘಟನೆಯಲ್ಲಿ ಕಾರ್ಯಕರ್ತರ ಪಾತ್ರ ಮಹತ್ವದ್ದಾಗಿದೆ. ಎಲ್ಲ ಜಾತಿ ಮತ್ತು ವರ್ಗದವರ ಸಹಕಾರದೊಂದಿಗೆ ಪಕ್ಷವನ್ನು ಬಲಪಡಿಸಬೇಕು. ೨೦೨೮ಕ್ಕೆ ನಿಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಕೊಡಗಿನ ಸಮಸ್ಯೆಗಳನ್ನು ಬಗೆಹರಿಸಲು ಆದ್ಯತೆ ನೀಡಲಾಗುವುದು. ವಿಶೇಷವಾಗಿ ರೈತರ ಪರವಾಗಿ ನಿಲ್ಲುತ್ತೇವೆ ಎಂದು ಭರವಸೆ ನೀಡಿದರು.

ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡ ಶಾಂತಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಬಗ್ಗನ ಅನಿಲ್ ಮಾತನಾಡಿ, ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಮತದಾನಕ್ಕೆ ಎರಡು ದಿನ ಇರುವಾಗ ಕೈಕೊಟ್ಟು ಹೋದರು. ಅಲ್ಲಿಂದ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಯಿತು. ಜೆಡಿಎಸ್‌ನಲ್ಲಿ ಜಿಲ್ಲಾಧ್ಯಕ್ಷರ ಆಯ್ಕೆಯೂ ವಿಳಂಬವಾಯಿತು ಎಂದರು.

ಸೋಮವಾರಪೇಟೆ ತಾಲೂಕು ಜೆಡಿಎಸ್ ಅಧ್ಯಕ್ಷ ಸಿ.ಎಸ್. ನಾಗರಾಜು ಪ್ರಾಸ್ತಾವಿಕವಾಗಿ ಮಾತನಾಡಿ, ಮುಂದಿನ ಚುನಾವಣೆ ದೃಷ್ಟಿಯಿಂದ ಪಕ್ಷದ ಸಂಘಟನಾ ಕಾರ್ಯ ಆರಂಭಿಸಲಾಗಿದೆ. ಕೊಡಗು ಜಿಲ್ಲೆಗೆ ಕುಮಾರಸ್ವಾಮಿ ಅವರ ಕೊಡುಗೆ ಅಪಾರವಾಗಿದೆ. ಜಿಲ್ಲೆಗೆ ಹೆಚ್ಚುವರಿಯಾಗಿ ಎರಡು ತಾಲೂಕುಗಳನ್ನು ನೀಡಿದ್ದಾರೆ. ರೈತರ ಸಾಲ ಮನ್ನಾ ಮಾಡಿದ್ದಾರೆ. ಸೋಮವಾರಪೇಟೆ ಹಾಗೂ ಕುಶಾಲನಗರ ಭಾಗದಲ್ಲಿ ಜೆಡಿಎಸ್ ಬಲಿಷ್ಠವಾಗಿದ್ದು, ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಎನ್‌ಡಿಎ ಮೈತ್ರಿಕೂಟವಾದರೂ ಜೆಡಿಎಸ್ ಪಕ್ಷಕ್ಕೆ ಹೆಚ್ಚಿನ ಸ್ಥಾನಗಳನ್ನು ದೊರಕಿಸಿ ಕೊಡಬೇಕು ಎಂದು ಮನವಿ ಮಾಡಿದರು.

ವೇದಿಕೆಯಲ್ಲಿ ಪಕ್ಷದ ಕೊಡಗು ಜಿಲ್ಲಾ ಉಸ್ತುವಾರಿ ಸಾರಾ ಮಹೇಶ್, ಪಿರಿಯಾಪಟ್ಟಣದ ಮಾಜೀ ಶಾಸಕ ಮಹದೇವ್ ಇದ್ದರು. ಜೆಡಿಎಸ್ ಮುಖಂಡರುಗಳಾದ ಪ್ರವೀಣ್, ಸಿ.ಎಲ್. ವಿಶ್ವ, ಕಾರ್ಮಾಡು ಸುಬ್ಬಣ್ಣ, ಆದರ್ಶ್ ತಮ್ಮಯ್ಯ, ಸಂದೀಪ್ ಕೂಗೂರು, ವಿನಯ್ ಕುಶಾಲಪ್ಪ, ವಿಜೇಶ್ ಪಿ.ಕೆ., ಹೂವಯ್ಯ ಹೊಸಬೀಡು, ಕಂಬಳ್ಳಿ ವಿಜಯ್ ಕುಮಾರ್, ಶಿವಪ್ಪ ಹಾನಗಲ್, ಮಂಜೂರು ತಮ್ಮಣ್ಣಿ, ಜಯಾನಂದ, ವಸಂತ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.