ಸೋಮವಾರಪೇಟೆ, ನ. ೨೨: ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ, ಸಮಾಜ ಸೇವಕ ಹರಪಳ್ಳಿ ರವೀಂದ್ರ ವ್ಯಕ್ತಿ ಪರಿಚಯವಿರುವ ಜೀವನ ಚರಿತ್ರೆಯ ಪುಸ್ತಕ ‘ಸಮಾಜ ಸೇವಕ-ಒಕ್ಕಲಿಗರ ನಾಯಕ ಹರಪಳ್ಳಿ ರವೀಂದ್ರ’ ಪುಸ್ತಕವನ್ನು ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆಯ ಸಚಿವ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಲೋಕಾರ್ಪಣೆಗೊಳಿಸಿದರು.

ಹರಪಳ್ಳಿ ರವೀಂದ್ರ ಅಭಿಮಾನಿಗಳ ಬಳಗ ಹಾಗೂ ರೈತ ಹೋರಾಟ ಸಮಿತಿಯ ಆಶ್ರಯದಲ್ಲಿ ಸ್ಥಳೀಯ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಯಿತು.

ಈ ಸಂದರ್ಭ ಮಾತನಾಡಿದ ಕುಮಾರಸ್ವಾಮಿ ಅವರು, ಗ್ರಾಮೀಣ ಪ್ರದೇಶದ ಕುಗ್ರಾಮದಲ್ಲಿ ಹುಟ್ಟಿ ಕಷ್ಟದ ಜೀವನದ ನಡುವೆಯೂ ಬೆಳೆದು ಇಂದು ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ರವೀಂದ್ರ ಅವರ ಜೀವನ ಸಾಧನೆ ಎಲ್ಲರಿಗೂ ಪ್ರೇರಣೆಯಾಗಿದೆ ಎಂದರು.

ಕೇವಲ ೩೦೦ ರೂಪಾಯಿ ಸಂಬಳಕ್ಕೆ ಬೆಂಗಳೂರಿಗೆ ಸೇರಿ ಇಂದು ಯಶಸ್ವಿ ಉದ್ಯಮಿಯಾಗಿ, ಕೃಷಿಕರಾಗಿ, ಸಮಾಜ ಸೇವಕರಾಗಿ ಬೆಳೆದಿರುವ ರವೀಂದ್ರ ಅವರಿಂದ ಸಮಾಜಕ್ಕೆ ಇನ್ನಷ್ಟು ಸೇವೆ ಲಭಿಸಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ಶಾಸಕ ಡಾ. ಮಂತರ್ ಗೌಡ, ಮಾಜಿ ಸಚಿವರುಗಳಾದ ಸಾರಾ ಮಹೇಶ್, ಅಪ್ಪಚ್ಚು ರಂಜನ್, ಮಾಜಿ ವಿಧಾನ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ, ಮಾಜಿ ಶಾಸಕ ಮಹದೇವ್, ಮಾಜಿ ಎಂಎಲ್‌ಸಿ ಎಸ್.ಜಿ. ಮೇದಪ್ಪ, ಒಕ್ಕಲಿಗರ ಸಂಘದ ರಾಜ್ಯ ಖಜಾಂಚಿ ರಘು ಗೌಡ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ. ಚಂಗಪ್ಪ, ಸಮಾಜ ಸೇವಕ ಸಂಕೇತ್ ಪೂವಯ್ಯ, ತಾ.ಪಂ. ಮಲೆನಾಡು ಅಭಿವೃದ್ಧಿ ನಿಗಮ ನಿರ್ದೇಶಕ ಕೆ.ಎಂ. ಲೋಕೇಶ್, ರೈತ ಹೋರಾಟ ಸಮಿತಿ ಅಧ್ಯಕ್ಷ ಚಕ್ರವರ್ತಿ ಸುರೇಶ್, ಕಾನೂನು ಸಲಹೆಗಾರ ಬಿ.ಜೆ. ದೀಪಕ್, ಕೃತಿ ರಚನೆಕಾರರಾದ ಜಿ.ವಿ. ರವಿಕುಮಾರ್, ಟಿ.ಜೆ. ಪ್ರವೀಣ್, ಹರಪಳ್ಳಿ ರವೀಂದ್ರ ಅಭಿಮಾನಿ ಬಳಗದ ಅಧ್ಯಕ್ಷ ಹೆಚ್.ಎ. ನಾಗರಾಜು ಸೇರಿದಂತೆ ಇತರರು ಇದ್ದರು.