ಸೋಮವಾರಪೇಟೆ, ನ. ೨೧: ಕಳೆದ ೨೦೨೪ರ ಮೇ ೯ರಂದು ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದ ಕುಂಬಾರಗಡಿಗೆ ಗ್ರಾಮದ ಬಾಲಕಿ ಮೀನಾ(೧೬) ಹತ್ಯೆ ಪ್ರಕರಣದ ಅಪರಾಧಿಗೆ ಮಡಿಕೇರಿ ಮೂರನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ರಾಕ್ಷಸೀ ಕೃತ್ಯ ಎಸಗಿದ ಹಮ್ಮಿಯಾಲ ಗ್ರಾಮದ ಮೊಣ್ಣಂಡ ಪ್ರಕಾಶ್ ಅಲಿಯಾಸ್ ಓಂಕಾರಪ್ಪನ ದುಷ್ಕೃತ್ಯ ಪೊಲೀಸರ ತನಿಖಾ ವರದಿ, ಸಾಕ್ಷಿಗಳು ಹಾಗೂ ವಕೀಲರ ಪ್ರಬಲ ವಾದದ ಮೂಲಕ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ನ್ಯಾಯಾಧೀಶರು ಓಂಕಾರಪ್ಪನನ್ನು ದೋಷಿ ಎಂದು ಪರಿಗಣಿಸಿ, ಮರಣ ದಂಡನೆ ಶಿಕ್ಷೆ ವಿಧಿಸಿದ್ದಾರೆ.

ಆರಂಭದಲ್ಲಿ ಪ್ರಕರಣದ ತೀರ್ಪನ್ನು ತಾ. ೧೯ಕ್ಕೆ ಕಾಯ್ದಿರಿಸಿತ್ತು. ಆದರೆ ತಾ. ೧೯ರಂದು ಹಿಯರ್ ಆನ್ ಸೆಂಟೆನ್ಸ್ ನಡೆಸಿದ ನ್ಯಾಯಾಧೀಶರು ತೀರ್ಪನ್ನು ೨೧ಕ್ಕೆ ಮುಂದೂಡಿದ್ದರು. ಇಂದು ತೀರ್ಪು ಪ್ರಕಟಿಸಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಜಿ. ಸುರೇಂದ್ರ ಅವರು ಅಪರಾಧಿ ಓಂಕಾರಪ್ಪ ಎಂ.ಪಿ. (ಪ್ರಕಾಶ್-ಪಾಪು)ಗೆ ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಸೋಮವಾರಪೇಟೆ ತಾಲೂಕು ಕುಂಬಾರಗಡಿಗೆ ಗ್ರಾಮ, ತೀತಳಕೊಪ್ಪದ ನಿವಾಸಿ, ಸೂರ್ಲಬ್ಬಿ ಸರ್ಕಾರಿ ಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಕುಂಬಾರಗಡಿಗೆ ಗ್ರಾಮದ ಉದಿಯಂಡ ಸುಬ್ರಮಣಿ ಹಾಗೂ ಜಾನಕಿ ದಂಪತಿಯ ಪುತ್ರಿ ಮೀನಾ (೧೬)ಳನ್ನು ಓಂಕಾರಪ್ಪ ೧ ವರ್ಷದಿಂದ ಪ್ರೀತಿಸುತ್ತಿದ್ದ ಎನ್ನಲಾಗಿದೆ.

ತಾ. ೦೯-೦೫-೨೦೨೪ ರಂದು ಸಂಜೆ ೫.೩೦ ಗಂಟೆಗೆ ತೀತಳಕೊಪ್ಪದ ಮನೆಯ ಬಳಿ ಓಂಕಾರಪ್ಪ ಮೀನಾಳ ಮದುವೆ ವಿಚಾರದಲ್ಲಿ ಆಕೆಯ ತಾಯಿ ಜಾನಕಿ ಮತ್ತು ಬಾಲಕಿಯೊಂದಿಗೆ ಜಗಳ ತೆಗೆದು ಮೀನಾಳ ಮೇಲೆ ಹಲ್ಲೆ ನಡೆಸಿದ್ದ.

ತಡೆಯಲು ಬಂದ ತಂದೆ ಸುಬ್ರಮಣಿ ಅವರಿಗೆ ಕಾಲಿನಿಂದ ಒದ್ದು ಬೀಳಿಸಿ ಗಾಯಪಡಿಸಿದ್ದ. ಈ ಸಂದರ್ಭ ತಾಯಿ ಜಾನಕಿ ತನ್ನ ಮಗಳು ಮೀನಾಳೊಂದಿಗೆ ಪೊಲೀಸರಿಗೆ ದೂರು ನೀಡುತ್ತೇನೆಂದು ನಡೆದುಕೊಂಡು ಬರುತ್ತಿದ್ದ ಸಂದರ್ಭ, ಹಿಂಬಾಲಿಸಿಕೊAಡು ಹೋದ ಓಂಕಾರಪ್ಪ, ಕತ್ತಿಯಿಂದ ಮೀನಾಳ ಕುತ್ತಿಗೆಯನ್ನು ಕಡಿದಿದ್ದಾನೆ. ತಡೆಯಲು ಹೋದ ಜಾನಕಿ ಅವರನ್ನು ಕೊಲೆ ಮಾಡಲು ಮುಂದಾಗಿದ್ದು, ಬಲಕೈಗೆ ಅದೇ ಕತ್ತಿಯಿಂದ ಕಡಿದು ತೀವ್ರ ತರಹದ ಗಾಯಪಡಿಸಿ, ಕೆಳಗೆ ಬಿದ್ದಿದ್ದ ಮೀನಾಳ ಕುತ್ತಿಗೆಯನ್ನು ತುಂಡರಿಸಿ, ರುಂಡದೊAದಿಗೆ ನಾಪತ್ತೆಯಾಗಿದ್ದ.

ಅದೇ ದಿನ ರಾತ್ರಿ ಹಮ್ಮಿಯಾಲ ಗ್ರಾಮದಲ್ಲಿರುವ ತನ್ನ ಮನೆಗೆ ತೆರಳಿ ಮೀನಾಳೊಂದಿಗೆ ಮದುವೆ ಮಾಡಲು ಆಕೆಯ ಸಹೋದರಿ ಯು.ಎಸ್. ಸವಿತಾ ವಿರೋಧಿಸಿದ್ದು, ಆಕೆಯನ್ನು ಕೊಲೆ ಮಾಡುವುದಾಗಿ ಮನೆಯಲ್ಲಿದ್ದ ಕೋವಿಯೊಂದಿಗೆ ನಾಪತ್ತೆಯಾಗಿದ್ದ. ಆರೋಪಿಯ ಪತ್ತೆಗೆ ಪೊಲೀಸರು ಕಾಡುಮೇಡು ಅಲೆದಿದ್ದು, ೨ ದಿನದ ನಂತರ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಧೀಶರು ಓಂಕಾರಪ್ಪನಿಗೆ ನ್ಯಾಯಾಂಗ ಬಂಧನ ವಿಧಿಸಿದ್ದರು.

ಘಟನೆ ಬಗ್ಗೆ ಹೆಚ್ಚಿನ ತನಿಖೆ ಕೈಗೊಂಡ ಸೋಮವಾರಪೇಟೆ ಪೊಲೀಸ್ ನಿರೀಕ್ಷಕರಾದ ವಸಂತ ಕೆ.ಎಂ. ಅವರು ಓಂಕಾರಪ್ಪ ಎಂ.ಪಿ. ವಿರುದ್ಧ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ ಆಕೆಯ ತಲೆಕಡಿದು ಕೊಲೆ ಮಾಡಿರುವ ಅಪರಾಧದ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆಯು ಮಡಿಕೇರಿ ೩ನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆದಿದ್ದು, ಪ್ರಾಸಿಕ್ಯೂಷನ್ ಪರ ಹಾಜರುಪಡಿಸಿದ ಸಾಕ್ಷಾö್ಯಧಾರಗಳ ಆಧಾರದ ಮೇಲೆ ಓಂಕಾರಪ್ಪ ಕೃತ್ಯವೆಸಗಿರುವುದು ನಿಸ್ಸಂಶಯವಾಗಿ ಸಾಬೀತಾಗಿದೆ ಎಂದು ೪ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಜಿ. ಸುರೇಂದ್ರ ಅವರು ತೀರ್ಮಾನಿಸಿ, ಆರೋಪಿ ಓಂಕಾರಪ್ಪನಿಗೆ ಮರಣದಂಡನೆ ಶಿಕ್ಷೆ ಮತ್ತು ರೂ.೮೦ ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರ ವಿಶೇಷ ಸರ್ಕಾರಿ ಅಭಿಯೋಜಕರಾದ ರುದ್ರಪ್ರಸನ್ನ ಬಿ.ಎಸ್. ರವರು ಸಾಕ್ಷಿದಾರರ ವಿಚಾರಣೆಯನ್ನು ನಡೆಸಿ ವಾದ ಮಂಡಿಸಿದ್ದು, ಪ್ರಕರಣದ ವಕಾಲತ್ತನ್ನು ಮಡಿಕೇರಿಯ ವಕೀಲೆ ದಿವ್ಯಾ ನಂಜಪ್ಪ ವಹಿಸಿದ್ದರು.

ಸಂಭ್ರಮದ ದಿನದಂದೇ ಹೋಯಿತು ಜೀವ: ಸೂರ್ಲಬ್ಬಿ ಸರ್ಕಾರಿ ಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಕುಂಬಾರಗಡಿಗೆ ಗ್ರಾಮದ ಉದಿಯಂಡ ಸುಬ್ರಮಣಿ ಹಾಗೂ ಜಾನಕಿ ದಂಪತಿಯ ಪುತ್ರಿ ಮೀನಾ ಹತ್ತನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಖುಷಿಯ ನಡುವೆಯೇ ಹಮ್ಮಿಯಾಲ ಗ್ರಾಮದ ಮೊಣ್ಣಂಡ ಓಂಕಾರಪ್ಪ (೩೨) ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳು.

ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮೀನಾ ಓರ್ವಳೇ ೧೦ನೇ ತರಗತಿ ವಿದ್ಯಾರ್ಥಿಯಾಗಿದ್ದು, ಪ್ರಥಮ ಯತ್ನದಲ್ಲಿಯೇ ತೇರ್ಗಡೆಯಾಗುವ ಮೂಲಕ ಶಾಲೆಗೆ ಶೇ. ೧೦೦ ಫಲಿತಾಂಶಕ್ಕೂ ಕಾರಣಳಾಗಿದ್ದಳು. ಶಾಲೆಗೆ ತೆರಳಿ ಫಲಿತಾಂಶ ವೀಕ್ಷಿಸಿ ಖುಷಿಯಿಂದಲೇ ಮನೆಗೆ ಆಗಮಿಸಿದ ಮೀನಾಳಿಗೆ ಇದು ತನ್ನ ಬದುಕಿನ ಕೊನೆ ಎಂಬುದು ತಿಳಿದಿರಲಿಲ್ಲ.

ಅಪ್ರಾಪ್ತೆಗೆ ಈಗಲೇ ಮದುವೆ ಮಾಡುವುದು ಬೇಡ ಎಂದು ತಿಳಿ ಹೇಳಿದ್ದರಿಂದ ತೀವ್ರ ಸಿಟ್ಟುಗೊಂಡ ಓಂಕಾರಪ್ಪ, ಮೀನಾಳ ಮೇಲಿನ ಹುಚ್ಚು ಪ್ರೀತಿಯಿಂದ ಆಕೆಯ ರುಂಡವನ್ನೇ ತುಂಡರಿಸಿದ್ದ. ಇದು ಜಿಲ್ಲೆ ಮಾತ್ರವಲ್ಲದೇ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿತ್ತು.

ಅಂದಿನ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಡಿಐಜಿ, ಎಸ್.ಪಿ. ರಾಮರಾಜನ್, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆಯಾಗಿದ್ದ ಪುಷ್ಪ ಅಮರನಾಥ್ ಸೇರಿದಂತೆ ಹತ್ತಾರು ಪ್ರಮುಖರು ಕುಂಬಾರಗಡಿಗೆಗೆ ಆಗಮಿಸಿ, ಮೃತೆ ಮೀನಾಳ ಕುಟುಂಬಕ್ಕೆ ಸಾಂತ್ವನ-ಸಹಾಯ ಹಸ್ತ ಚಾಚಿದ್ದರು.

ಗೋಡೆಗಳಿಲ್ಲದ ಜೋಪಡಿಯ ಮನೆ, ಟಾರ್ಪಲ್ ಹೊದಿಕೆಯೊಳಗೆ ಕುಟುಂಬ ಜೀವಿಸುತ್ತಿದ್ದುದನ್ನು ಕಣ್ಣಾರೆ ಕಂಡ ಶಾಸಕ ಮಂತರ್ ಗೌಡ ಅವರು, ತಮ್ಮ ಹಿತೈಷಿಗಳು, ಸ್ನೇಹಿತರೊಂದಿಗೆ ತಾವೂ ಕೂಡ ದೊಡ್ಡ ಪ್ರಮಾಣದಲ್ಲಿ ಸಹಕಾರ ನೀಡಿ ರೂ. ೮.೫೦ ಲಕ್ಷ ವೆಚ್ಚದಲ್ಲಿ ಸಿಮೆಂಟ್ ಇಟ್ಟಿಗೆ, ಕಬ್ಬಿಣದ ರೂಫಿಂಗ್‌ನೊAದಿಗೆ ಗಾಳಿಬೀಡು ಗ್ರಾ.ಪಂ.ನ ಮುಟ್ಲು ಗ್ರಾಮದಲ್ಲಿ ನೂತನ ಹೆಂಚಿನ ಮನೆ ನಿರ್ಮಿಸಿಕೊಟ್ಟು, ಕಳೆದ ತಾ. ೦೯.೦೬.೨೦೨೫ರಂದು ಹಸ್ತಾಂತರಿಸಿದ್ದರು. ಇಂದಿಗೂ ಮೀನಾಳ ತಂದೆ ಸುಬ್ರಮಣಿ, ತಾಯಿ ಜಾನಕಿ, ಸಹೋದರರಾದ ಸಚಿನ್, ದಿಲೀಪ್ ಅವರುಗಳು ಇದೇ ಮನೆಯಲ್ಲಿ ವಾಸಿಸುತ್ತಿದ್ದಾರೆ.

ಮೀನಾಳ ಅಗಲಿಕೆಯ ದುಃಖ ಪ್ರತಿ ದಿನ ಕಾಡುತ್ತಲೇ ಇದೆ. ಆರೋಪಿಗೆ ಮರಣ ದಂಡನೆಯAತಹ ಶಿಕ್ಷೆಯನ್ನೇ ನಿರೀಕ್ಷಿಸಿದ್ದೆವು. ನ್ಯಾಯಾಲಯದ ತೀರ್ಪಿನಿಂದ ನಮ್ಮ ಕುಟುಂಬಕ್ಕೆ ನ್ಯಾಯ ಲಭಿಸಿದೆ. ನ್ಯಾಯಾಲಯದ ಮೇಲೆ ನಂಬಿಕೆ ಇತ್ತು. ಆ ನಂಬಿಕೆ ನಿಜವಾಗಿದೆ ಎಂದು ಮೀನಾಳ ಸಹೋದರ ದಿಲೀಪ್ ಅಭಿಪ್ರಾಯಿಸಿದ್ದಾರೆ.