ವೀರಾಜಪೇಟೆ, ನ. ೨೧: ಕಡಂಗಮೂರೂರು ಮತ್ತು ಅರಮೇರಿ ಗ್ರಾಮದ ಸರಹದ್ದಿನಲ್ಲಿ ನಡೆಯುತ್ತಿದ್ದ ಗಣಿಗಾರಿಕೆಯನ್ನು ಜುಲೈನಲ್ಲಿ ನಡೆದ ಗ್ರಾಮಸ್ಥರ ಮತ್ತು ಅಧಿಕಾರಿಗಳ ಸಭೆಯ ಬಳಿಕ ಸ್ಥಗಿತಗೊಳಿಸಲಾಗಿದೆ. ಆದರೆ ಅದನ್ನು ಮತ್ತೆ ಆರಂಭಿಸಲು ಪ್ರಭಾವಿಯೊಬ್ಬರು ಸತತ ಯತ್ನ ನಡೆಸುತ್ತಿರುವುದು ಗ್ರಾಮಸ್ಥರ ಗಮನಕ್ಕೆ ಬಂದಿದ್ದು ಇನ್ನು ಯಾವ ಕಾರಣಕ್ಕೂ ಗಣಿಗಾರಿಕೆ ನಡೆಸಲು ಜಿಲ್ಲಾಡಳಿತ ಅವಕಾಶ ನೀಡಬಾರದು ನೀಡಿದ್ದಲ್ಲಿ ಕಾನೂನು ಹೋರಾಟದ ಎಚ್ಚರಿಕೆಯನ್ನು ಗ್ರಾಮಸ್ಥರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವೀರಾಜಪೇಟೆ ವಿಭಾಗದ ಅಧಿಕಾರಿ ಸುಭಾಷ್ ಚಂದ್ರ ಅವರಿಗೆ ನೀಡಿದರು.

ಸ್ಥಳೀಯರಾದ ಕೋದಂಡ ಮಂಜುಳ ಅಯ್ಯಪ್ಪ ಮಾತನಾಡಿ, ಹಿಂದಿನ ಸಭೆ ಬಳಿಕ ಗಣಿಗಾರಿಕೆ ನಿಂತಿದ್ದರೂ, ಅದನ್ನು ಮೂಲ ಗುತ್ತಿಗೆದಾರರು ಬೇರೆಯವರಿಗೆ ಗುತ್ತಿಗೆ ನೀಡಿ ಮತ್ತೆ ಆರಂಭಿಸುವ ಯತ್ನ ನಿರಂತರವಾಗಿ ಸಾಗಿದೆ. ಸ್ಥಳೀಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಇಲಾಖೆಯ ಅಧಿಕಾರಿಗಳು ಗಣಿಗಾರಿಕೆ ಪ್ರಮಾಣ ಪತ್ರ ನೀಡುವ ಸಂದರ್ಭ ಲೋಪ ಎಸಗಿದ್ದು ಗ್ರಾಮಸ್ಥರನ್ನು ಕತ್ತಲಲ್ಲಿ ಇಟ್ಟು ಸ್ಥಳಕ್ಕೆ ಬಾರದೆ ಅವೈಜ್ಞಾನಿಕ ಮಾಹಿತಿ ನೀಡಿ ಪರವಾನಿಗೆಯನ್ನು ೩೦ ವರ್ಷಕ್ಕೆ ನೀಡುವಂತೆ ನೋಡಿಕೊಂಡಿದ್ದಾರೆ, ಇವರ ಅಸಂಬದ್ದ ವರದಿಗೆ ಸಾಕ್ಷಿ ಎಂದರೆ ವರದಿಯಲ್ಲಿ ಇಲ್ಲಿ ಸುತ್ತಲು ಕೈಗಾರಿಕಾ ಪ್ರದೇಶ ಇದೆ ಎಂದು ಹೇಳಿರುವ ಸುಳ್ಳು. ಇಲ್ಲಿ ಕೃಷಿ ಭೂಮಿ ಇದ್ದು, ವಸತಿಗಳಿದ್ದು, ಜಲ ಮೂಲಗಳಿದ್ದು, ಪರಿಸರಕ್ಕೂ ಹಾನಿಯಾಗುವ ಸಂಭವವೇ ಹೆಚ್ಚು ಇದೆ. ಇದನ್ನು ಮರೆಮಾಚುವ ಉದ್ದೇಶವೇನು, ಹಿಂದೆ ಪರವಾನಿಗೆ ಸಿಕ್ಕಿದ ತಕ್ಷಣ ಭಾರೀ ಪ್ರಮಾಣದ ಕಲ್ಲು ಸಾಗಣೆಯಾಗಿದೆ ಭಾರೀ ಪ್ರಮಾಣದ ಸ್ಫೋಟಕ ಬಳಕೆಯಾಗಿದೆ. ಇನ್ನು ಈ ರೀತಿ ಆಗಬಾರದೆಂದು ಅಧಿಕಾರಿಯನ್ನು ಆಗ್ರಹಿಸಿ ಸ್ವಂದನ ಬಾರದೆ ಹೋದರೆ ಇನ್ನು ಕಾನೂನು ಹೋರಾಟ ಅನಿವಾರ್ಯ ಎಂದರು

ಪೂಳಂಡ ಪೂಣಚ್ಚ ಮಾತನಾಡಿ, ಈ ಗಣಿಗಾರಿಕೆ ಸ್ಥಳದ ಜಿಪಿಎಸ್ ಗುರುತಿಸುವಿಕೆ ಸೂಕ್ತವಾಗಿ ಕಾಣುತ್ತಿಲ್ಲ. ಏಕೆಂದರೆ ಗಣಿಗಾರಿಕೆ ನಾಲ್ಕುವರೆ ಎಕರೆ ಪ್ರದೇಶ ಇದ್ದರೂ ಕಲ್ಲಿನ ಪದರಗಳು ಬಹುತೇಕ ಉಭಯ ಗ್ರಾಮದಲ್ಲಿ ಹರಡಿದೆ. ತಮ್ಮ ಮನೆ ಇರುವ ಸ್ಥಳದಲ್ಲಿ ಹಾದು ಹೋಗಿರುವ ತಲಕಾವೇರಿ ಹೆದ್ದಾರಿಯವರೆಗೆ ವಿಸ್ತರಿಸಿದ್ದು ಸ್ಫೋಟದಿಂದ ಬಹುತೇಕ ಉಭಯ ಗ್ರಾಮದ ವಸತಿ ಪ್ರದೇಶಗಳಲ್ಲಿ ತೀವ್ರ ಕಂಪನದ ಅನುಭವ ಆಗುತ್ತದೆ. ಆದ್ದರಿಂದ ಇಲ್ಲಿ ೨೦೦ ಅಥವಾ ೫೦೦ ಮೀಟರ್ ಅಂತರ ನಿಗದಿ ಮಾಡಿದರೂ ಕಿಲೋಮೀಟರ್‌ಗಟ್ಟಲೆ ಭೂಮಿ ಕಂಪಿಸುತ್ತದೆ. ಇದನ್ನು ಅಧಿಕಾರಿಗಳು ಪರಿಗಣಿಸಬೇಕು. ಸೂಕ್ತವಾಗಿ ಪರಿಶೀಲಿಸದೆ ತರಾತುರಿಯಲ್ಲಿ ಪರವಾನಿಗೆ ನೀಡಲಾಗಿದೆ. ಆದ್ದರಿಂದ ಜನತೆಗೆ ಮಾರಕವಾಗುವ ಗಣಿಗಾರಿಕೆ ಇಲ್ಲಿ ಆಗತ್ಯ ಇಲ್ಲ ಎಂದರು.

ಈ ಸಂದರ್ಭ ಮಾತನಾಡಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವೀರಾಜಪೇಟೆ ತಾಲೂಕು ವಿಭಾಗದ ಅಧಿಕಾರಿ ಸುಭಾಷ್ ಚಂದ್ರ ಜಿಲ್ಲಾಧಿಕಾರಿಗೆ ನೀಡಿದ ದೂರಿನಂತೆ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ನಿಖರವಾಗಿ ಗಡಿ ಗುರುತಿಸಿದ್ದೇವೆ. ೨೪೩ ರ ಸರ್ವೆ ಸಂಖ್ಯೆಯಲ್ಲಿನ ನಾಲ್ಕುವರೆ ಎಕರೆಯಲ್ಲಿ ಅರ್ಧ ಭಾಗದಲ್ಲಿ ಮಾನವ ಸಹಿತ ಗಣಿಗಾರಿಕೆ ಮತ್ತು ಅರ್ಧ ಭಾಗದಲ್ಲಿ ಸ್ಫೋಟಕ ಬಳಸಲು ಪರವಾನಿಗೆ ನೀಡಲಾಗಿದೆ. ಜೊತೆಗೆ ಕ್ರಷರ್ ಘಟಕಕ್ಕೂ ಮನವಿ ಸಲ್ಲಿಸಲಾಗಿದ್ದು ಅದು ಕಾರ್ಯರೂಪಕ್ಕೆ ಬಂದಿಲ್ಲ. ದಾಖಲಾತಿ ಬದಿಗಿಟ್ಟು ಮಾನವೀಯ ನೆಲೆಗಟ್ಟಿನಲ್ಲಿ ಪರಿಸರ ಹಾನಿ, ಕೃಷಿ ಹಾನಿ, ಶಬ್ದಮಾಲಿನ್ಯ ಇವುಗಳ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿಗೆ ವರದಿ ನೀಡುತ್ತೇನೆ. ಇಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ ನಡೆದ ಮಹಜರು ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸುವುದಾಗಿ ತಿಳಿಸಿದರು.

ಗ್ರಾಮಸ್ಥರು ಗಡಿ ಗುರುತಿಸುವಾಗ ಜಾಗದ ಕೊನೆಯ ಅಂಚಿನಿAದ ಗಡಿ ಗುರುತಿಸದೆ ಮದ್ಯಭಾಗದಲ್ಲಿ ಗಡಿ ಗುರುತು ಮಾಡಿರುವುದಕ್ಕೆ ಅಕ್ಷೇಪಿಸಿ ಇದನ್ನು ಸರಿಪಡಿಸುವಂತೆ ಆಗ್ರಹಿಸಿದರು.

ಗ್ರಾಮಸ್ಥರ ಪರವಾಗಿ ಪೂಳಂಡ ಮಾಚಯ್ಯ, ಬಲ್ಲಟಿಕಾಳಂಡ ಮುದ್ದಯ್ಯ, ಬಲ್ಲಟಿಕಾಳಂಡ ಮದನ್, ಕೋದಂಡ ಅಯ್ಯಪ್ಪ ಮತ್ತಿತರರು ಮಾತನಾಡಿದರು.

ಇದೇ ವೇಳೆ ವೀರಾಜಪೇಟೆ ಕಂದಾಯ ಪರಿವೀಕ್ಷಕ ಹರೀಶ್ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಗಳು, ಕದನೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸತೀಶ್, ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.